Site icon Vistara News

Yogeshwar Audio | ಬಿಜೆಪಿ Vs ಬಿಜೆಪಿ ಎಂದು ಗೇಲಿ ಮಾಡಿದ ಕಾಂಗ್ರೆಸ್‌, ಕಮಲ ಪಕ್ಷದ ನಿಜ ಬಣ್ಣ ಬಯಲಾಯ್ತು ಎಂದ ಕೈ

CP Yogeshwar

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಬಹುಮತಕ್ಕೆ ಬೇಕಾಗುವಷ್ಟು ಸೀಟುಗಳು ಬರುವುದಿಲ್ಲ. ಆದರೆ, ಸರ್ಕಾರ ರಚಿಸುವುದು ಬಿಜೆಪಿಯೇ ಎಂಬ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್‌ ಅವರ ವೈರಲ್‌ ಆಡಿಯೋವನ್ನು ಇಟ್ಟುಕೊಂಡು ಕಾಂಗ್ರೆಸ್‌ ಬಿಜೆಪಿಯನ್ನು ಚೆನ್ನಾಗಿ ಕಾಲೆಳೆದಿದೆ.

ಸಿ.ಪಿ ಯೋಗೀಶ್ವರ್‌ ಅವರು ಆಡಿಯೊದಲ್ಲಿ ಆಡಿದ್ದಾರೆನ್ನಲಾದ ಮಾತುಗಳನ್ನು ಹಿಡಿದುಕೊಂಡು ಇದು ಬಿಜೆಪಿ ವರ್ಸಸ್‌ ಬಿಜೆಪಿ ಎಂದು ಗೇಲಿ ಮಾಡಿರುವ ಬಿಜೆಪಿ ಅಮಿತ್‌ ಶಾ ಅವರನ್ನೂ ಎಳೆದು ತಂದಿದೆ. ಯೋಗೇಶ್ವರ್‌ ವಿಚಾರ ಮಾತ್ರವಲ್ಲ, ಪಂಚಮಸಾಲಿ ಹೋರಾಟದ ವಿಚಾರದಲ್ಲಿ ಸಚಿವ ಮುರುಗೇಶ್‌ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಾಗ್ಯುದ್ಧವನ್ನೂ ಉಲ್ಲೇಖಿಸಿದೆ.

ಕಾಂಗ್ರೆಸ್‌ ಮಾಡಿದ ಟ್ವೀಟ್‌ಗಳು ಇಂತಿವೆ

೧. ಬಿಜೆಪಿ ರೌಡಿಗಳ ಪಕ್ಷ ಎಂಬುದು ಸಾಬೀತು
ಕಪೋಲ ಕಲ್ಪಿತ ‘ಚುನಾವಣಾ ಚಾಣಕ್ಯ’ನ ವಾಸ್ತವ ನಡವಳಿಕೆ ಬಿಜೆಪಿ ನಾಯಕರಿಗೇ ಗೊತ್ತಿದೆ. ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿ ಬಂದವರ ರೌಡಿಸಂ ವರ್ತನೆ ಸಹಜ. ನಾಯಕರೇ ರೌಡಿಗಳಾಗಿರುವಾಗ ಅವರ ಪಕ್ಷಕ್ಕೆ ರೌಡಿಗಳ ಸೇರ್ಪಡೆಯೂ ಸಹಜವೇ. ಬಿಜೆಪಿ ಪಕ್ಷ ರೌಡಿಗಳ ಪಕ್ಷ ಎಂಬುದು ಅವರ ನಾಯಕರಿಂದಲೇ ಮತ್ತೊಮ್ಮೆ ಸಾಬೀತಾಗಿದೆ. (ಅಮಿತ್‌ ಶಾ ಒಂಥರಾ ರೌಡಿ ಥರಾ.. ಯಾರನ್ನೂ ಬಿಡಲ್ಲ ಎಂಬ ಮಾತಿಗೆ ಪ್ರತಿಕ್ರಿಯೆ)

೨. ಭವಿಷ್ಯವನ್ನು ಬಿಜೆಪಿ ನಾಯಕರ ಬಾಯಲ್ಲೇ ಕೇಳಿ!
ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ಬಿಜೆಪಿ ನಾಯಕರ ಬಾಯಲ್ಲೇ ಕಾಣಿಸುತ್ತಿದೆ. ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲ, ಮುಂದೆ ಅಧಿಕಾರಕ್ಕೆ ಬರುವುದೂ ಇಲ್ಲ ಎಂಬ ಸತ್ಯ ಅವರಿಗೂ ಗೊತ್ತಿದೆ. ಡಬಲ್ ಇಂಜಿನ್ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.

೩. ದಿನೇದಿನೇ ಬಣ್ಣ ಬಯಲು
ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಬಿಜೆಪಿ ನಿಜ ಬಣ್ಣ ದಿನೇ ದಿನೇ ಬಟಾ ಬಯಲಾಗುತ್ತಿದೆ! ವಾಮ ಮಾರ್ಗದ ಮೂಲಕ ಅಧಿಕಾರ ಪಡೆದ ಬಿಜೆಪಿ ತನ್ನದೇ ಪಕ್ಷದ ಶಾಸಕರ ಹೇಳಿಕೆಗಳಿಂದ ಪ್ರತಿ ದಿನ ಬೆತ್ತಲಾಗುತ್ತಿದೆ. ರಾಜ್ಯದ ಜನ ಬಿಜೆಪಿ ಗೆ ಪಾಠ ಕಲಿಸಲು ಕಾಯ್ತಿತಿದ್ದಾರೆ!

೪. ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯವೇ ಇಲ್ಲ
ಈ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನಾಭಿಪ್ರಾಯ ಇಲ್ಲವೇ ಇಲ್ಲ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಸಾಮರ್ಥ್ಯವೂ ಇಲ್ಲ. ಆಪರೇಷನ್ ಕಮಲದಂತಹ ಅನಿಷ್ಟಗಳ ಮೂಲಕ ಸರ್ಕಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಲಜ್ಜೆಯಿಲ್ಲದೆ ಹೇಳಿಕೊಳ್ಳುವ ಪ್ರಪಂಚದ ಏಕೈಕ ಪಕ್ಷ ಬಿಜೆಪಿ.

೫. ಅಸಹ್ಯದ ಪರಮಾವಧಿ
ಅಸಹ್ಯದ ಪರಮಾವಧಿ ತಲುಪಿದೆ ಬಿಜೆಪಿ. ಒಬ್ಬರು ‘ನೀಚ’ ಎನ್ನುತ್ತಾರೆ, ಮತ್ತೊಬ್ಬರು ‘ಪಿಂಪ್’ ಎನ್ನುತ್ತಾರೆ, ಇನ್ನೊಬ್ಬರು ‘ಸಿಡಿ’ ಎನ್ನುತ್ತಾರೆ, #BJPvsBJP ಕಿತ್ತಾಟ ಅತ್ಯಂತ ಕೀಳು ಹಂತಕ್ಕೆ ತಲುಪಿದೆ. ತಮ್ಮ ಪಕ್ಷವನ್ನೇ ನಿಭಾಯಿಸಲಾಗದ ಅಸಮರ್ಥ ನಳಿನ್‌ ಕುಮಾರ್‌ ಕಟೀಲ್‌ ಕಾಂಗ್ರೆಸ್ ಬಗ್ಗೆ ಮಾತಾಡುವುದು ಆಕಾಶಕ್ಕೆ ಉಗುಳಿದಂತೆಯೇ ಸರಿ.

೬. ಬೊಮ್ಮಾಯಿಯನ್ನೇ ಮೋಸಗಾರ ಎಂದ ಪಕ್ಷೀಯರು
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮೋಸಗಾರ ಎಂಬ ಬಿರುದು ಸಿಕ್ಕಿದೆ. ಇದನ್ನು ಕಾಂಗ್ರೆಸ್‌ ಹೇಳಿದ್ದಲ್ಲ, ಅವರ ಪಕ್ಷದ ಶಾಸಕರೇ ನೀಡಿದ ಬಿರುದು. ಶಾಸಕರನ್ನೇ ಮೊಸಗೊಳಿಸುವ ಸಿಎಂಗೆ ಜನರನ್ನು ಮೊಸಗೊಳಿಸುವುದು ನೀರು ಕುಡಿದಷ್ಟು ಸುಲಭ! ತಮ್ಮದೇ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪಪೆಟ್‌ ಸಿಎಂರಿಂದ ಇನ್ಯಾವ ಸಾಧನೆ ಸಾಧ್ಯ?

ಇದನ್ನೂ ಓದಿ | Karnataka Election : ಸಿಎಂ ಬೊಮ್ಮಾಯಿ ಕ್ಲಾಸ್‌; ಆಡಿಯೊ ನನ್ನದಲ್ಲ, 100% ನಮ್ಮದೇ ಬಹುಮತವೆಂದ ಸಿಪಿವೈ

Exit mobile version