Site icon Vistara News

ಕೆ.ಆರ್.‌ ಪೇಟೆ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಆಗಮಿಸಲು ಯೋಗಿ ಆದಿತ್ಯನಾಥ್‌ ಸಮ್ಮತಿ

Minister

ಬೆಂಗಳೂರು: ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ಗುರುವಾರ ಲಖನೌನಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಸಚಿವ ಡಾ.ನಾರಾಯಣಗೌಡ, ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಆಹ್ವಾನ ನೀಡಿದ ಬಳಿಕ ತಿಳಿಸಿದರು. “ಅಕ್ಟೋಬರ್ 13 ರಿಂದ 16 ರವರೆಗೆ ಕೆಆರ್ ಪೇಟೆಯ ಲಕ್ಷ್ಮಣತೀರ್ಥ-ಹೇಮಾವತಿ-ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಅಕ್ಟೋಬರ್‌ ೧೬ರಂದು ನಡೆಯುವ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್‌ ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.

ಸುಮಾರು ಮುಕ್ಕಾಲು ಗಂಟೆ ಮಾತುಕತೆ, ವಿಶೇಷ ಆತಿಥ್ಯ

ಸಚಿವ ಡಾ.ನಾರಾಯಣಗೌಡ ಹಾಗೂ ನಿಯೋಗದ ಜತೆ ಮುಕ್ಕಾಲು ಗಂಟೆಗೂ ಅಧಿಕ ಕಾಲ ಯೋಗಿ ಆದಿತ್ಯನಾಥ್ ಅವರು ಮಾತುಕತೆ ನಡೆಸಿ, ವಿಶೇಷ ಆತಿಥ್ಯ ನೀಡಿದರು. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೂ ಗೋರಖನಾಥೇಶ್ವರನ ಸಂಬಂಧದ ಬಗ್ಗೆ ಯೋಗಿ ಮೆಲುಕು ಹಾಕಿದರು. ಪರಶುರಾಮ ಕಥೆ, ಕಾಲಬೈರವೇಶ್ವರನ ಕಥೆ, ಧರ್ಮಸ್ಥಳ ಮತ್ತು ಆದಿಚುಂಚನಗಿರಿಯ ಇತಿಹಾಸ ಹಾಗೂ ನಾಥ ಪರಂಪರೆಯ ಹಾಗೂ ಕರ್ನಾಟಕ ಸರ್ಕಾರ ಪ್ರಸ್ತುತ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು ಸೇರಿ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ರಾಮಯಣ ದರ್ಶನಂ ಹಾಗೂ ಎಸ್.ಎಲ್‌. ಭೈರಪ್ಪನವರ ಪರ್ವ ಪುಸ್ತಕವನ್ನು ಯೋಗಿ ಆದಿತ್ಯನಾಥ್ ಅವರಿಗೆ ಸಚಿವರು ನೀಡಿದರು. ಕೆಪಿಎಸ್‌ಸಿ ಸದಸ್ಯ ಪ್ರಭುದೇವ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಇದ್ದರು.

ಇದನ್ನೂ ಓದಿ | ಲುಲು ಮಾಲ್‌ನಲ್ಲಿ ಅನಗತ್ಯ ಕಿರಿಕಿರಿ ಮಾಡಿದರೆ ಹುಷಾರ್‌, ಯೋಗಿ ಆದಿತ್ಯನಾಥ್‌ ಎಚ್ಚರಿಕೆ

Exit mobile version