ನವದೆಹಲಿ: ಬೀದರ್‌ನ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಬುಧವಾರ (ಮಾರ್ಚ್ 5) ನವದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಇದೇ ವೇಳೆ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದು, “ಮುಸ್ಲಿಮರಿಗೆ ಬಿಜೆಪಿಯಿಂದ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ನೀವು ಅದನ್ನು ಸುಳ್ಳು ಮಾಡಿದಿರಿ” ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಇಲ್ಲಿದೆ ವೈರಲ್ ವಿಡಿಯೊ
ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಹಲವು ನಾಯಕರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಮೋದಿ ಅವರು ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಶುಭಾಶಯ ಕೋರಿದರು. ಆಗ ರಶೀದ್ ಅವರು, “ಮುಸ್ಲಿಮರಿಗೆ ಬಿಜೆಪಿಯಿಂದ ಯಾವುದೇ ಸತ್ಕಾರ, ಪ್ರಶಸ್ತಿ ಸಿಗುವುದಿಲ್ಲ ಎಂದೇ ಭಾವಿಸಿದ್ದೆ. ನೀವದನ್ನು ಸುಳ್ಳು ಮಾಡಿದ್ದಕ್ಕೆ ಧನ್ಯವಾದಗಳು” ಎಂದಿದ್ದಾರೆ. ಆಗ ಮೋದಿ ಅವರು ಕೂಡ ನಕ್ಕಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಶೀದ್, “ನಾನು 10 ವರ್ಷದ ಹಿಂದೆಯೇ ಈ ಪ್ರಶಸ್ತಿಯನ್ನು ಪಡೆಯಲು ಪ್ರಯತ್ನ ನಡೆಸಿದೆ. ಆದರೆ, ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತೋ, ಆಗಲೇ ನನಗೆ ಪ್ರಶಸ್ತಿ ಸಿಗುವುದಿಲ್ಲ ಎಂಬುದು ಖಾತ್ರಿಯಾಯಿತು. ಬಿಜೆಪಿಯು ಮುಸ್ಲಿಮರಿಗೆ ಯಾವುದೇ ಪ್ರಶಸ್ತಿ ಕೊಡುವುದಿಲ್ಲ ಎಂದೇ ತಿಳಿದುಕೊಂಡಿದ್ದೆ. ಆದರೆ, ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ನಾನು ತಿಳಿದುಕೊಂಡಿದ್ದೇ ತಪ್ಪು ಎಂಬುದನ್ನು ಮೋದಿ ಸಾಬೀತುಪಡಿಸಿದ್ದಾರೆ” ಎಂದು ಹೇಳಿದ್ದಾರೆ.
ಬೀದರ್‌ನ ಬಿದರಿ ಕಲೆಗೆ ವಿಶ್ವ ಖ್ಯಾತಿ ತಂದು ಕೊಟ್ಟ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗೆಯೇ, ವಿಶ್ವಾದ್ಯಂತ ಖ್ಯಾತಿ ಗಳಿಸಿರುವ, ಕಾದಂಬರಿಕಾರ, ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ದಿ. ಮುಲಾಯಂ ಸಿಂಗ್ ಅವರಿಗೆ ಘೋಷಣೆಯಾಗಿದ್ದ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರ ಪುತ್ರರಾದ ಅಖಿಲೇಶ್ ಸಿಂಗ್ ಯಾದವ್ ಅವರು ಸ್ವೀಕರಿಸಿದರು.
ಇನ್ಫೋಸಿಸ್ ಸಂಸ್ಥಾಪಕ ಎನ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ಸಾಮಾಜಿಕ ಸೇವೆಗಳಿಗಾಗಿ ಪದ್ಮಭೂಷಣ ನಾಗರಿಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾ ಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಾಲಿವುಡ್ ನಟಿ ರವೀನಾ ಟಂಡನ್, ಆರ್‌ಆರ್‌ಆರ್ ಚಿತ್ರದ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಎಂ.ಎಂ. ಕೀರವಾಣಿ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇಶಾದ್ಯಂತ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾದ ಗಣ್ಯರಿಗೆ ಪದ್ಮ ಪುರಸ್ಕಾರಗಳನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿದರು.
ಇದನ್ನೂ ಓದಿ: Padma Award: ಸಾಹಿತಿ ಎಸ್ ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರದಾನ