ಬಳ್ಳಾರಿ: ಪ್ರಪಂಚದಲ್ಲಿ ಏನೇ ಬದಲಾವಣೆ ಆಗಲಿ, ದೇವರು ದಿಂಡರು ಎಂದರೆ ಜನರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ದೇವರನ್ನು ಒಲಿಸಿಕೊಳ್ಳಲು ಜನರು ವಿಶೇಷ ಪೂಜೆ ಪುನಸ್ಕಾರ ಮಾಡುವುದು, ಉಪವಾಸ, ಉರುಳು ಸೇವೆ ಹೀಗೆ ನಾನಾ ರೀತಿಯಲ್ಲಿ ದೇವರನ್ನು ನೆನೆಯುವುದನ್ನೂ ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನೇ ಕತ್ತರಿಸಿ ದೇವರ ಮುಂದಿಟ್ಟಿದ್ದಾನೆ.
ಇಲ್ಲಿನ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿಯಲ್ಲಿ ವೀರೇಶ್ ಎಂಬ ೨೪ ವರ್ಷದ ವ್ಯಕ್ತಿಯೇ ಈ ರೀತಿ ದೇವರಿಗೆ ನಾಲಿಗೆ ಕೊಟ್ಟವನು.
ಈತನ ಮೌಢ್ಯಕ್ಕೆ ಗ್ರಾಮಸ್ಥರೇ ಶಾಕ್ ಆಗಿದ್ದಾರೆ. ಕುಡಿದ ಅಮಲಿನಲ್ಲಿ ನಾಲಿಗೆ ಕತ್ತರಿಸಿಕೊಂಡಿದ್ದಾನೆ ಎಂಬ ಮಾತು ಕೇಳಿ ಬಂದಿದೆ. ದೇವರು ನಾಲಿಗೆ ಕೇಳಿದ್ದಾನೆ ಎಂದು ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿರುವುದು ಮಾಹಿತಿ ಇದೆ. ನಾಲಿಗೆ ಸಮೇತ ವಿಮ್ಸ್ ಆಸ್ಪತ್ರೆಗೆ ವೀರೇಶ್ ನನ್ನು ದಾಖಲಿಸಲಾಗಿದೆ. ನಾಲಿಗೆ ಕತ್ತರಿಸಿಕೊಂಡ ಬಳಿಕವೂ ಆತ ಯಾವುದೇ ಆತಂಕವಿಲ್ಲದೆ ಕುಳಿತುಕೊಂಡಿದ್ದು ಅಚ್ಚರಿ ಮೂಡಿಸಿತು.
ಹೆಬ್ಬೆರಳನ್ನೂ ಕತ್ತರಿಸಿಕೊಂಡಿದ್ದ ವೀರೇಶ್
ವೀರೇಶ್‌ನ ಯಡವಟ್ಟು ಇದು ಮೊದಲೇನು ಅಲ್ಲ. ಒಂದು ವರ್ಷದ ಹಿಂದೆ ಹೆಬ್ಬೆರಳನ್ನೂ ಕತ್ತರಿಸಿ ವಿಗ್ರಹದ ಮೇಲೆ ಇಟ್ಟಿದ್ದ ಎಂದು ತಿಳಿದುಬಂದಿದೆ. ಈ ಬಾರಿ ಬಲಕುಂದಿ ಗ್ರಾಮದ ಗುಡ್ಡದ ಮೇಲಿರುವ ಶಂಕರಪ್ಪ ದೇವಸ್ಥಾನದಲ್ಲಿ ತಾತ ನಾಲಿಗೆ ಕೇಳಿದ ಎಂದು ಅಂಧ ಭಕ್ತಿಗೆ ಒಳಗಾದ ವಿರೇಶ್ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ನಿತ್ಯಾ ಶಂಕರಪ್ಪ ದೇವರಿಗೆ ಪೂಜೆ ಮಾಡುತ್ತಿದ್ದು, ದೇವರನ್ನು ಒಲಿಸಿಕೊಳ್ಳಲು ಹೀಗೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Anganawadi Workers: ನಾ ಕೊಡೆ ನೀ ಬಿಡೆ ಪರಿಸ್ಥಿತಿ; 7ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ
ನಾಲಿಗೆ ಮರುಜೋಡಣೆ ಅಸಾಧ್ಯ
ಕುಡಿತದ ದಾಸನಾಗಿದ್ದ ವೀರೇಶ್ ಕಳೆದ ಎರಡು ತಿಂಗಳಿಂದ ಚಟದಿಂದ ಮುಕ್ತಿ ಪಡೆದಿದ್ದ. ಕುಡಿತವನ್ನು ಬಿಟ್ಟು, ಏಕಾಂತವಾಗಿ ಇರುತ್ತಿದ್ದನಂತೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಸದ್ಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರೇಶ್‌ರ ನಾಲಿಗೆಯನ್ನು ಮರುಜೋಡೆಣೆಗೆ ಬರುವುದಿಲ್ಲ ಎಂದು ವೈದ್ಯರು ಹೇಳಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಾಲಿಗೆ ಕತ್ತರಿಸಿಕೊಂಡ ವೀರೇಶ್‌ರಿಗೆ ಪತ್ನಿ ಹಾಗೂ ಪುತ್ರ, ಪುತ್ರಿ ಹಾಗೂ ಪತ್ನಿ ಇದ್ದಾರೆ.