ಧಾರವಾಡ: ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಸಲಿಂಗ ಕಾಮಿಯ ಕಾಟ ತಡೆಯಲಾರದೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಧಾರವಾಡದಲ್ಲಿ ಅಕ್ಟೋಬರ್ ೧೫ರಂದು ಈ ಘಟನೆ ನಡೆದಿದೆ.
ಏನಿದು ಘಟನೆ?
ಕಳೆದ ಅಕ್ಟೋಬರ್ ೧೨ರಂದು ಧಾರವಾಡ ಅತ್ತಿಕೊಳ್ಳದ ನಿವಾಸಿ ಯಾಸಿನ್ ರೋಟಿವಾಲೆ ಕಾಣೆಯಾಗಿದ್ದ. ಕಾಣೆಯಾಗುವ ಮುನ್ನ ತನ್ನ ಗೆಳೆಯರಿಗೆ ಮೆಸೇಜ್ ಮಾಡಿ ʻನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿʼ ಎಂದು ಹೇಳಿದ್ದ. ಆತ ಕಾಣೆಯಾದ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪೋಷರಕು ದೂರು ದಾಖಲಿಸಿದ್ದರು.
ಈ ನಡುವೆ, ಅಕ್ಟೋಬರ್ ೧೫ರಂದು ಧಾರವಾಡ ಕೆಲಗೇರಿ ಕೆರೆಯಲ್ಲಿ ಯಾಸಿನ್ ಶವ ಪತ್ತೆಯಾಗಿತ್ತು. ಈ ನಡುವೆ, ಪೊಲೀಸರಿಗೆ ಯಾಕೋ ಸಂಶಯ ಬಂದು ಯಾಸಿನ್‌ನ ಗೆಳೆಯ ಪವನ್ ಬ್ಯಾಳಿಯನ್ನು ವಿಚಾರಣೆ ನಡೆಸಿದರು. ಯಾಸಿನ್ ತಂದೆ ಕೂಡಾ ಪವನ್ ಬ್ಯಾಳಿಯಿಂದಾಗಿಯೇ ತನ್ನ ಮಗ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದರು. ಆಗ ಬೆಚ್ಚಿ ಬೀಳಿಸುವ ಸತ್ಯ ಹೊರಗೆ ಬಂತು.
ಅವರಿಬ್ಬರ ಸಂಬಂಧ ಸ್ನೇಹವಾಗಿರಲಿಲ್ಲ!
ಯಾಸಿನ್ ಹಾಗೂ ಪವನ್ ನಡುವೆ ಕಳೆದ ಎಂಟು ತಿಂಗಳಿನಿಂದ ತೀರಾ ಆಪ್ತರಾಗಿದ್ದರು. ವಿಚಾರಣೆಯ ವೇಳೆ ಪವನ್ ತಾನು ಯಾಸಿನ್‌ನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಮುಂದೆ ವಿಚಾರಿಸಿದಾಗ ತಾವಿಬ್ಬರೂ ಸಲಿಂಗ ಕಾಮಿಗಳು ಎಂದು ಹೇಳಿದ್ದಾನೆ.
ನಿಜವೆಂದರೆ, ಅಕ್ಟೋಬರ್ ೧೨ ರಂದು ಪವನ್ ಹಾಗೂ ಯಾಸಿನ್ ಜತೆಯಾಗಿಯೇ ಇದ್ದರು. ಅಂದು ಯಾವುದೋ ವಿಚಾರಕ್ಕೆ ಅವರ ಮಧ್ಯೆ ಜಗಳವೂ ಆಗಿತ್ತು. ಯಾಸಿನ್‌ಗೆ ಪವನ್‌ನ ಈ ವರ್ತನೆಗಳು ಅಷ್ಟಾಗಿ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅಂದು ಯಾಸಿನ್ ತನ್ನ ತಂದೆಗೆ ಕರೆ ಮಾಡಿ ಪವನ್‌ನಿಂದ ಕಿರುಕುಳವಾಗುತ್ತಿದೆ ಎಂದು ಹೇಳಿಕೊಂಡಿದ್ದ. ಆದರೆ, ಆವತ್ತು ಮನೆಗೆ ಹೋಗದೆ ನಾಪತ್ತೆ ಆಗಿದ್ದ.
ತಂದೆಯ ಜತೆ ಮಾತನಾಡಿದ ನಂತರ ಯಾಸಿನ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ತೀವ್ರ ಸಲಿಂಗ ಕಾಮಿಯಾಗಿದ್ದ ಪವನ್ ಯಾಸಿನ್‌ನ್ನು ಬ್ಲ್ಯಾಕ್ ಮೇಲ್ ಮಾಡಿರಬೇಕು, ಹೀಗಾಗಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪವನ್ ಕಿರುಕುಳದಿಂದಲೇ ಯಾಸಿನ್ ಸಾವನ್ನಪ್ಪಿದ್ದಾನೆ ಎಂದು ತಂದೆ ರಫೀಕ್ ಉಪನಗರ ಠಾಣೆಗೆ ದೂರು ನೀಡಿದ್ದರು. ರಫೀಕ್ ದೂರಿನ ಹಿನ್ನೆಲೆ ಸಲಿಂಗಕಾಮಿ ಪವನ್ ಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ | Student death | ಶಾಲೆ ತಪ್ಪಿಸಿಕೊಳ್ಳುತ್ತಿದ್ದ ಬಾಲಕ, ಅಮ್ಮ ಬೈದಳೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ