ರಿಪ್ಪನ್‌ಪೇಟೆ: ಗರ್ತಿಕೆರೆ ಬಳಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾದ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗರ್ತಿಕೆರೆ ನಿವಾಸಿ ನದೀಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆಯಲ್ಲಿ ಏಪ್ರಿಲ್ 2 ರಂದು ಪಾದಚಾರಿಗೆ ಬೈಕ್ ಡಿಕ್ಕಿಯಾಗಿತ್ತು. ಈ ವೇಳೆ ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರಿಗೂ ಗಂಭೀರವಾದ ಗಾಯವಾಗಿತ್ತು.
ಇದನ್ನೂ ಓದಿ: Karnataka Elections : ಲಿಂಗಾಯತ ಡ್ಯಾಮೇಜ್ ಕಂಟ್ರೋಲ್‌ಗಾಗಿ ಅಖಾಡಕ್ಕಿಳಿದ ಬಿಎಸ್‌ವೈ, ಮಠಾಧೀಶರನ್ನು ಭೇಟಿ ಮಾಡಿದ ನಡ್ಡಾ
ಇಬ್ಬರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಮೆಗ್ಗಾನ್‌ನಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಒಯ್ಯುತಿದ್ದಾಗ ಪಾದಚಾರಿ ಚಿನ್ನಪ್ಪ ಮೃತಪಟ್ಟಿದ್ದರು.
ಇನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ನದೀಮ್ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗರ್ತಿಕೆರೆ ನಿವಾಸಿ ನದೀಮ್ (22) ಬೈಕ್‌ನಲ್ಲಿ ಗರ್ತಿಕೆರೆ ಕಡೆಯಿಂದ ಮನೆಗೆ ತೆರಳುವಾಗ ಸರ್ಕಾರಿ ಪ್ರೌಢಶಾಲೆ ಬಳಿ ನಡೆದುಕೊಂಡು ಹೋಗುತಿದ್ದ ಚಿನ್ನಪ್ಪ (54) ಎಂಬುವವರಿಗೆ ಬೈಕ್‌ನಿಂದ ಗುದ್ದಿದ್ದರು. ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ನಂತರ ಬೈಕ್ ಪ್ರೌಢಶಾಲಾ ನಾಮಫಲಕಕ್ಕೆ ಜೋರಾಗಿ ಡಿಕ್ಕಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಮಫಲಕ ಪುಡಿಪುಡಿಯಾಗಿತ್ತು. ಹಾಗೇ ನದೀಮ್ ಗಂಭೀರವಾಗಿ ಗಾಯಗೊಂಡಿದ್ದರು.
ನೇಣಿಗೆ ಶರಣಾದ ಆಟೋ ಚಾಲಕ
ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ನಿವಾಸಿ ಆಟೋ ಚಾಲಕ ವೆಂಕಟೇಶ್ (53) ಎಂಬುವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಗ್ಯವಾಗಿಯೇ ಇದ್ದ ಇವರಿಗೆ ಕೋವಿಡ್ ಸಂಬಂಧ ಮುಂಜಾಗ್ರತೆಗಾಗಿ ನೀಡುವ ವ್ಯಾಕ್ಸಿನ್ ಅನ್ನು ಹಾಕಿಸಿಕೊಂಡಿದ್ದರು. ಅದನ್ನು ಹಾಕಿಸಿಕೊಂಡ ಮೇಲೆ ಅವರ ದೇಹದ ಎಡಭಾಗ ಸ್ವಾದೀನ ಕಳೆದುಕೊಂಡಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣದಿಂದ ಅವರಿಗೆ ಮಣಿಪಾಲ ಸೇರಿದಂತೆ ವಿವಿಧೆಡೆ ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು.
ಇದನ್ನೂ ಓದಿ: Karnataka Election 2023 : ಸಿಎಂ ಬೊಮ್ಮಾಯಿ ವಿರುದ್ಧದ ಅಭ್ಯರ್ಥಿಯನ್ನೇ ಬದಲಾಯಿಸಿದ ಕಾಂಗ್ರೆಸ್
ಆದರೆ, ಎಲ್ಲೇ ಚಿಕಿತ್ಸೆ ಪಡೆದರೂ ಅವರು ಗುಣಮುಖರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಬುಧವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡಿದ್ದಾರೆ ಎಂದು ಕುಟುಂಬ ವರ್ಗದವರು ದೂರು ದಾಖಲಿಸಿದ್ದಾರೆ. ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.