Site icon Vistara News

Suicide case : ಕುಡಿತ ಬಿಡಿಸಲು ಆಸ್ಪತ್ರೆಗೆ ಕರೆತಂದ ತಾಯಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ನದಿಗೆ ಹಾರಿದ ಮಗ

raviraj Shetty suicide

#image_title

ಉಡುಪಿ: ಮಗನ ಕುಡಿತದ ದುರಾಭ್ಯಾಸವನ್ನು ಹೇಗಾದರೂ ಮಾಡಿ ಬಿಡಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದ ತಾಯಿ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆ ಮಗ ಮಾತ್ರ ತಾಯಿಯ ಕಣ್ಣು ತಪ್ಪಿಸಿಕೊಂಡು ಹೋಗಿದ್ದಾನೆ. ಮಾತ್ರವಲ್ಲ, ಸೇತುವೆಯ ಮೇಲಿಂದ ನದಿಗೆ ಹಾರಿ ಪ್ರಾಣವನ್ನೇ (Suicide case) ಕಳೆದುಕೊಂಡಿದ್ದಾನೆ.

ಕನ್ಯಾನ ಗ್ರಾಮದ ದಿ‌.ಕುಪ್ಪಯ್ಯ ಶೆಟ್ಟಿ ಅವರ ಪುತ್ರ ರವಿರಾಜ್ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡವರು. ಇವರು ಕುಂದಾಪುರ ಸಮೀಪ ತಲ್ಲೂರು ರಾಷ್ಟ್ರೀಯ ಹೆದ್ದಾರಿ ಬಳಿ ರಾಜಾಡಿಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಪರೀತ ಕುಡಿತದ ಚಟಕ್ಕೆ ಬಿದ್ದದ್ದ ಮಗನನ್ನು ಚಿಕಿತ್ಸೆ ನೀಡಿ ಹೇಗಾದರೂ ಮಾಡಿ ಸರಿ ಮಾಡಬೇಕು ಎನ್ನುವುದು ತಾಯಿಯ ಆಸೆಯಾಗಿತ್ತು. ಅದರ ಜತೆಗೆ ಮಗ ಕೆಲವೊಂದು ದಿನಗಳಿಂದ ತೀರಾ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಇದಕ್ಕೆಲ್ಲ ಪರಿಹಾರ ಒದಗಿಸಲು ತಾಯಿ ಮುಂದಾಗಿದ್ದರು.

ತಾಯಿಯ ಮಾತಿಗೆ ಮಣಿದ ಮಗ ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದ. ಆದರೆ, ಆಸ್ಪತ್ರೆಯಲ್ಲಿ ತಾಯಿ ಯಾವುದೋ ಬೇರೆ ಕೆಲಸದಲ್ಲಿದ್ದಾಗ ಅವರ ಕಣ್ಣಿಗೆ ಕಾಣದಂತೆ ತಪ್ಪಿಸಿಕೊಂಡ. ತಾಯಿ ಅತ್ತಿತ್ತ ಹುಡುಕಿದಾಗ ಕಾಣಲಿಲ್ಲ. ಈ ನಡುವೆ ಆತ ಅಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆಯಿಂದ ಸ್ವಲ್ಪ ದೂರ ಇರುವ ರಾಜಾಡಿ ಬಳಿ ಬಂದು ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಧಾವಿಸಿದರಾದರೂ ಜೀವಂತವಾಗಿ ಮೇಲೆತ್ತಲು ಸಾಧ್ಯವಾಗಿಲ್ಲ. ಸ್ಥಳೀಯ ಮೀನುಗಾರ ನೆರವಿನಿಂದ ರವಿರಾಜ್ ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Women commits suicide : ಕೌಟುಂಬಿಕ ಕಲಹ ಹಿನ್ನೆಲೆ, 3 ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Exit mobile version