ಬೆಳಗಾವಿ: ಬೈಕ್ ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಆರಂಭವಾದ ಗಲಾಟೆ ಕೊಲೆಯಲ್ಲಿ (Murder case) ಅಂತ್ಯವಾದ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ (21) ಕೊಲೆಯಾದ ದುರ್ದೈವಿ. ಪ್ರತೀಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಲು ಹೋದ ಶುಭಂ ಸುಳಗೇಕರ (22) ಎಂಬ ಯುವಕನ ಮೇಲೂ ದಾಳಿ ಮಾಡಲಾಗಿದ್ದು, ಆತನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಭೀಕರ ಘಟನೆ?
ಪ್ರತೀಕ ಹಾಗೂ ಎದುರಾಳಿ ಗುಂಪಿನವರು ಮಜಗಾಂವ ಗ್ರಾಮದವರು. ಮಜಗಾಂವ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಎರಡು ಗುಂಪುಗಳ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ನಡುವೆ ಪ್ರತೀಕ್ ಮಚ್ಛೆ ಗ್ರಾಮಕ್ಕೆ ಬಂದಿದ್ದಾಗ ಪ್ರತೀಕ್ ಹಾಗೂ ಎದುರಾಳಿ ಗುಂಪಿನ ಮಧ್ಯೆ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ಈ ವೇಳೆ, ಸ್ಥಳೀಯರು ಮಧ್ಯ ಪ್ರವೇಶಿಸಿ ಎರಡೂ ಗುಂಪನ್ನು ಚದುರಿಸಿ ಕಳುಹಿಸಿದ್ದರು.
ಗಲಾಟೆ ಬಳಿಕ ಪ್ರತೀಕ್ ಲೋಹಾರ ಮಚ್ಛೆಯಲ್ಲಿರುವ ಶುಭಂ ಸುಳಗೇಕರನ್ನು ಭೇಟಿಯಾಗಲು ಬಂದಿದ್ದ. ಪ್ರತೀಕ ಹಾಗೂ ಶುಭಂ ಮಚ್ಛೆ ಗ್ರಾಮದಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ 12 ಜನರ ಗುಂಪು ದಾಳಿ ನಡೆಸಿತ್ತು.
ಪ್ರತೀಕ್‌ನನ್ನೇ ಟಾರ್ಗೆಟ್ ಮಾಡಿ ಹಲ್ಲೆ ಮಾಡಿದ ದುಷ್ಕರ್ಮಿಗಳು ಆತನ ಹೊಟ್ಟೆ ಮತ್ತು ಹೃದಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾದ ಇರಿತಗಳಿಂದ ಗಾಯಗೊಂಡ ಪ್ರತೀಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ನಡುವೆ, ಗಲಾಟೆ ಬಿಡಿಸಿಕೊಳ್ಳಲು ಬಂದ ಶುಭಂ ಮೇಲೂ ಆರೋಪಿಗಳು ದಾಳಿ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Murder Case: ಜಾತ್ರೆಗಾಗಿ ಬಂದವಳನ್ನು ಚಾಕುವಿನಿಂದ ಇರಿದು ಕೊಂದ ಭಗ್ನ ಪ್ರೇಮಿ