ಮಂಗಳೂರು: ಕಳಂಜದ ಮಸೂದ್ ಕೊಲೆ ಮತ್ತು ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕದ ವಾತಾವರಣ ಮುಂದುವರಿದಿದೆ. ಅದರಲ್ಲೂ ಸುಳ್ಯ ತಾಲೂಕಂತೂ ಬೂದಿ ಮುಚ್ಚಿದ ಕೆಂಡಂತಿದೆ. ಇದರ ನಡುವೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಯುವಕನೊಬ್ಬ ತಲವಾರು ಹಿಡಿದುಕೊಂಡೇ ಬೀದಿಗಿಳಿದದ್ದು ಭಾರಿ ಆತಂಕ ಸೃಷ್ಟಿ ಮಾಡಿತು.
ಜಿಲ್ಲೆಯ ಎಲ್ಲ ಕಡೆ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಈ ಯುವಕ ಯಾರದೋ ಕೊಲೆ ಮಾಡಲು ರಾಜಾರೋಷವಾಗಿ ಹೊರಟಿದ್ದಾನೆ ಎನ್ನುವ ಆತಂಕ ಎಲ್ಲರಿಗಿತ್ತು. ಕೂಡಲೇ ಆತ ತಲವಾರು ಬೀಸಿಕೊಂಡು ಹೋಗುತ್ತಿರುವ ದೃಶ್ಯವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಡಿದರು. ಇನ್ನು ಕೆಲವರು ಪೊಲೀಸರಿಗೆ ಕಳುಹಿಸಿದರು. ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಧಾವಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆತ ತಲವಾರು ಹಿಡಿದು ಓಡಾಡುವ ವೇಳೆ ಕನಕಮಜಲಿನಲ್ಲಿ ಭಾರಿ ಆತಂಕವೇ ಸೃಷ್ಟಿಯಾಗಿತ್ತು. ಯಾರ ಮೇಲೆ ಕತ್ತಿ ಬೀಸುತ್ತಾನೋ ಎಂದು ಎಲ್ಲರೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.
ಕೊನೆಗೂ ಬಂಧನ
ಈ ನಡುವೆ, ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಆತನನ್ನು ವಿಚಾರಿಸಿದಾಗ ಆತ ಯಾರದೇ ಕೊಲೆ ಮಾಡುವುದಕ್ಕಾಗಲೀ, ಹಲ್ಲೆ ಮಾಡುವುದಕ್ಕಾಗಲೀ ಹೋಗುತ್ತಿರಲಿಲ್ಲ ಎಂದು ಗೊತ್ತಾಗಿದೆ. ಬದಲಾಗಿ, ಅದೆಲ್ಲವನ್ನೂ ಮಾಡಿದ್ದು ಕುಡಿತದ ಮತ್ತಿನಲ್ಲಿ ಎಂದು ಆತ ಒಪ್ಪಿಕೊಂಡಿದ್ದಾನೆ.
ಕುಡಿದ ನಶೆ ತಲೆಗೇರಿ ತಲವಾರು ಹಿಡಿದು ಓಡಾಡಿದ್ದಾಗಿ ಸಂದೀಪ್ ಎಂಬ ಹೆಸರಿನ ಈ ಯುವಕ ಒಪ್ಪಿಕೊಂಡಿದ್ದಾನೆ. ಕಳೆದ ಎಂಟು ತಿಂಗಳಿನಿಂದ ಕುಡಿಯುವುದನ್ನು ಬಿಟ್ಟಿದ್ದ ಸಂದೀಪ್ ಮಂಗಳವಾರ ಮತ್ತೆ ಕುಡಿತ ಶುರು ಮಾಡಿದ್ದ. ಮತ್ತೆ ಶುರುವಾದ ಕುಡಿತದ ಚಟದ ನಶೆ ಆತನ ತಲೆಗೇರಿ ಈ ರೀತಿ ಮಾಡಿದ್ದ ಎಂದು ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ| ಮದ್ಯ ವ್ಯಸನಿ ಅಪ್ಪನನ್ನೇ ಕೊಂದ ಮಗ