Site icon Vistara News

racing tragedy : ಬೈಕ್​ ರೇಸ್​ ವೇಳೆ ಅವಘಡ; ಬೆಂಗಳೂರಿನ 13 ವರ್ಷದ ರೇಸರ್​ ಸಾವು

Shreyas Hareesh

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕೀಟ್​ನಲ್ಲಿ ಶನಿವಾರ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ವೇಳೆ ಅವಘಡ ಸಂಭವಿಸಿ (racing tragedy) ಬೆಂಗಳೂರು ಮೂಲದ 13 ವರ್ಷಚ ಬೈಕರ್​ ಶ್ರೇಯಸ್ ಹರೀಶ್ ಮೃತಪಟ್ಟಿದ್ದಾರೆ. ರೇಸ್​ನಲ್ಲಿ ಪಾಲ್ಗೊಳ್ಳುವ ವೇಳೆ ಅವರ ಬೈಕ್​ ಬಿದ್ದಿದ್ದ ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ದಿನದ ಉಳಿದೆಲ್ಲ ರೇಸ್​ಗಳನ್ನು ಆಯೋಜಕರು ರದ್ದು ಮಾಡಿದ್ದಾರೆ.

ಶನಿವಾರ ಬೆಳಿಗ್ಗೆ ಪೋಲ್ ಸ್ಥಾನಕ್ಕೆ ಅರ್ಹತೆ ಪಡೆದಿದ್ದ ಶ್ರೇಯಸ್ ರೇಸ್ ಪ್ರಾರಂಭವಾದ ಕೂಡಲೇ ಅಪಘಾತಕ್ಕೆ ಒಳಗಾಧರು. ಟರ್ನ್-1 ನಿಂದ ನಿರ್ಗಮಿಸುತ್ತಿದ್ದ ಶ್ರೇಯಸ್ ಅವರ ಬೈಕ್ ಅಪಘಾತಕ್ಕೆ ಒಳಗಾಯಿತು . ಘಟನೆಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಘಟನೆ ನಡೆದ ತಕ್ಷಣವೇ ಉಳಿದ ರೇಸರ್​ಗಳಿಗೆ ರೆಡ್​ ಫ್ಲ್ಯಾಗ್ ಹಾಕಲಾಯಿತು. ಟ್ರ್ಯಾಕ್‌ನಲ್ಲಿ ಸಿದ್ದವಾಗಿದ್ದ ಟ್ರಾಮಾ ಕೇರ್ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶ್ರೇಯಸ್​ ಮೃತಪಟ್ಟಿದ್ದರು ಎಂದು ಆಯೋಜಕರು ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿರುವ ಶ್ರೇಯಸ್. ಜುಲೈ 26, 2010ರಂದು ಜನಿಸಿದ್ದರು. ಹಲವಾರು ರಾಷ್ಟ್ರಮಟ್ಟದ ಮೋಟರ್‌ ಸೈಕಲ್‌ ರೇಸ್​ಗಳಲ್ಲಿ ಸ್ಪರ್ಧಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. ಸತತವಾಗಿ ನಾಲ್ಕು ಚಾಂಪಿಯನ್​ಷಿಪ್​ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದರು. ಭಾರತದ ಬೈಕ್‌ ರೇಸಿಂಗ್‌ನ ಉದಯೋನ್ಮುಖ ತಾರೆ ಎಂದು ಅವರನ್ನು ಗುರುತಿಸಲಾಗಿತ್ತು.

ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಮಿನಿಜಿಪಿ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಶ್ರೇಯಸ್, ಸ್ಪೇನ್‌ನಲ್ಲಿ ನಡೆದ ಮಿನಿಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು, ಎರಡೂ ರೇಸ್‌ಗಳಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ಆಗಸ್ಟ್‌ನಲ್ಲಿ ಮಲೇಷ್ಯಾದ ಸೆಪಾಂಗ್ ಸರ್ಕ್ಯೂಟ್‌ನಲ್ಲಿ ಎಂಎಸ್‌ಬಿಕೆ ಚಾಂಪಿಯನ್‌ಶಿಪ್ 2023 ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು.

ಸಂತಾಪ: ಪ್ರತಿಭಾವಂತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ. ತನ್ನ ರೇಸಿಂಗ್ ಪ್ರತಿಭೆಯಿಂದ ಹೊಸ ಅಲೆ ಎಬ್ಬಿಸಿದ್ದ ಶ್ರೇಯಸ್‌ ಮೃತಪಟ್ಟಿರುವುದು ದೊಡ್ಡ ನಷ್ಟ . ಘಟನೆಯಿಂದ ಈ ವಾರಾಂತ್ಯದ ಉಳಿದ ಕಾರ್ಯಕ್ರಮವನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಎಂಎಂಎಸ್‌ಸಿ ಅಧ್ಯಕ್ಷ ಅಜಿತ್ ಥಾಮಸ್ ಹೇಳಿದ್ದಾರೆ.

ಎರಡನೇ ಸಾವು

2023 ವರ್ಷ ಭಾರತೀಯ ಮೋಟಾರ್‌ಸ್ಪೋರ್ಟ್‌ನಲ್ಲಿ ಇದು ಎರಡನೇ ಸಾವು. ಜನವರಿಯಲ್ಲಿ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ MRF MMSC FMSCI ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ 2022 ರ ಎರಡನೇ ಸುತ್ತಿನಲ್ಲಿ ಕಾರು ಅಪಘಾತಕ್ಕೀಡಾಗಿ ರೇಸರ್ ಕೆಇ ಕುಮಾರ್ (59) ನಿಧನ ಹೊಂದಿದ್ದರು.

Exit mobile version