Site icon Vistara News

Physical Abuse: ಯುವತಿ ಹಿಂದೆ ಕೂತಿದ್ದಾಗಲೇ ಹಸ್ತಮೈಥುನ ಮಾಡಿಕೊಂಡ ರ‍್ಯಾಪಿಡೋ ಬೈಕ್ ಚಾಲಕ!

Athira Purushothaman

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ (Physical Abuse) ನೀಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ಬೈಕ್‌ನಲ್ಲಿ ಹೋಗುವಾಗ ಚಾಲಕ ಅನುಚಿತವಾಗಿ ವರ್ತಿಸಿ, ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಅಥಿರಾ ಪುರುಷೋತ್ತಮನ್‌ ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ. ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಖಂಡಿಸಿ ನಗರದ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಯುವತಿ ಅಥಿರಾ ಪುರುಷೋತ್ತಮನ್‌, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮನೆಗೆ ಹೋಗಲು ರ‍್ಯಾಪಿಡೋ ಬೈಕ್ ಬುಕ್‌ ಮಾಡಿದ್ದಳು.

ಬಾಡಿಗೆ ಆಟೋ ಬುಕ್‌ ಮಾಡಲು ನಾನು ಪ್ರಯತ್ನಿಸಿದ್ದೆ. ಆದರೆ, ರೈಡ್‌ ಕ್ಯಾನ್ಸಲ್‌ ಆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರ‍್ಯಾಪಿಡೋಬೈಕ್‌ ಆ್ಯಪ್‌ನಲ್ಲಿ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಬೇಕಾಯಿತು. ಆದರೆ, ನಾನು ಬುಕ್‌ ಮಾಡಿದ್ದ ಬೈಕ್‌ಗೆ ಬದಲಾಗಿ ಚಾಲಕ ಬೇರೋಂದು ಬೈಕ್‌ನಲ್ಲಿ ಬಾಡಿಗೆಗೆ ಬಂದಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆತ ಬೈಕ್‌ ಸರ್ವೀಸ್‌ಗೆ ಬಿಟ್ಟಿರುವುದಾಗಿ ಹೇಳಿದ. ನಂತರ ಆ್ಯಪ್‌ನಲ್ಲಿ ರೈಡ್‌ ಪರಿಶೀಲಿಸಿಕೊಂಡು ಬೈಕ್‌ ಹತ್ತಿದೆ ಎಂದು ಅಥಿರಾ ತಿಳಿಸಿದ್ದಾಳೆ.

ಬೈಕ್‌ ಟ್ಯಾಕ್ಸಿಯಲ್ಲಿ ಮನೆಗೆ ಹೋಗುವಾಗ ಚಾಲಕ ತನ್ನ ಜತೆ ಅನುಚಿತವಾಗಿ ವರ್ತಿಸಿದ. ಆತ ಒಂದು ಕೈಯಲ್ಲಿ ಬೈಕ್‌ ಚಲಾಯಿಸುತ್ತಾ, ಮತ್ತೊಂದು ಕೈಯಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇದರಿಂದ ಭಯವಾಗಿ ಮಾರ್ಗದುದ್ದಕ್ಕೂ ಮೌನವಾಗಿದ್ದೆ. ನನ್ನ ಮನೆ ಇರುವ ಸ್ಥಳ ಆತನಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಮನೆಯು 200 ಮೀಟರ್ ದೂರವಿರುವಾಗಲೇ ಬೈಕ್‌ ನಿಲ್ಲಿಸಲು ಹೇಳಿದ್ದೆ. ಆದರೆ, ನಾನು ಮನೆಗೆ ಹೋದ ಮೇಲೆಯೂ ಆತ ನನಗೆ‌ ಕರೆ ಮಾಡಿ, ಸಂದೇಶ ಕಳುಹಿಸುತ್ತಿದ್ದ. ಆತನ ಕಿರುಕುಳ ತಾಳಲಾರದೆ ನಂಬರ್‌ ಬ್ಲಾಕ್‌ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯುವತಿ ಹೇಳಿದ್ದಾಳೆ.

ಈ ಬಗ್ಗೆ ಟ್ವಿಟರ್‌ನಲ್ಲಿ ರ‍್ಯಾಪಿಡೋ ಬೈಕ್ ಆ್ಯಪ್‌ ಅನ್ನು ಪ್ರಶ್ನಿಸಿರುವ ಅಥಿರಾ ಪುರುಷೋತ್ತಮನ್‌, ಬೈಕ್‌ ಟ್ಯಾಕ್ಸಿ ಚಾಲಕರ ಹಿನ್ನೆಲೆ ಪರಿಶೀಲನೆಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ? ನಿಮ್ಮ ಬಳಕೆದಾರರ ಸುರಕ್ಷತೆಯು ಮೊದಲ ಆದ್ಯತೆಯಾಗಿರಬೇಕು. ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಸೇವೆಯೊಂದಿಗೆ ನೋಂದಾಯಿಸಿರುವ ಜನರನ್ನು ನಂಬಬಹುದು ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಬೈಕ್‌ ಚಾಲಕ ಈಗಲೂ ನನಗೆ ವಿವಿಧ ಸಂಖ್ಯೆಗಳಿಂದ ಕರೆ ಮಾಡುತ್ತಲೇ ಇದ್ದಾನೆ ಎಂದು ತಿಳಿಸಿದ್ದಾರೆ.

ಯುವತಿಯನ್ನು ಡ್ರಾಪ್ ಮಾಡಿದ ನಂತರ ಆಕೆಗೆ ವಾಟ್ಸ್‌ಆ್ಯಪ್‌ ಮೆಸೇಜ್ ಮೂಲಕ ಚಾಲಕ ಕಿರುಕುಳ ನೀಡಿದ್ದಾನೆ. ಯಾಕೆ ನೀವು ನನಗೆ ಕಾಲ್‌ ಮಾಡುತ್ತಿದ್ದೀರಿ? ನಿಮಗೆ ಆನ್‌ಲೈನ್‌ ಪೇಮೆಂಟ್‌ ಆಗಿದೆ ಎಂದು ಯುವತಿ ಹೇಳಿದಾಗ, ಮೇಡಂ ಲವ್‌ ಯು ಎಂದು ಚಾಲಕ ಮೆಸೇಜ್‌ ಕಳುಹಿಸಿದ್ದಾನೆ. ನಂತರ ಯುವತಿ ಆತನ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದಾಳೆ.

ಮಹಿಳೆಯ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸ್ ಪ್ರತಿಕ್ರಿಯಿಸಿ, ಪ್ರಕರಣದ ಬಗ್ಗೆ ನಾವು ಎಸ್‌.ಜೆ.ಪಾರ್ಕ್‌ ಪೊಲೀಸ್‌ ಠಾಣೆಗೆ ಮಾಹಿತಿ ತಿಳಿಸಿದ್ದೇವೆ. ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ದಯವಿಟ್ಟು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಪೊಲೀಸರಿಗೆ ಕಳುಹಿಸಿ ಎಂದು ತಿಳಿಸಿದೆ.

Exit mobile version