ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೆ, ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರ ಭಾಗವಾಗಿ ಚಾಲನಾ ಪರವಾನಗಿ (Driving License) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (Vehicle Registration Certificate)ಗಳಿಗೆ (DL RC card) ಹೊಸ ರೂಪವನ್ನು ಕೊಡಲು ಮುಂದಾಗಲಾಗಿದೆ. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಚಿಪ್ ಹಾಗೂ ಕ್ಯೂರ್ ಕೋಡ್ (Cure Code) ಕಾಣಿಸಿಕೊಳ್ಳಲಿದೆ.
ಈಗಾಗಲೇ ಡಿಎಲ್ ಹಾಗೂ ಆರ್‌ಸಿಯ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಕಾರ್ಡ್‌ಗಳಿಗೆ ಚಿಪ್ ಅಳವಡಿಕೆ ಮಾಡಲಾಗಿದೆ. ಇನ್ನು ಇದರ ಜತೆಗೆ ಕ್ಯೂ ಆರ್ ಕೋಡ್ ಸಹ ಇರಲಿದೆ. ಈ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಹೀಗಾಗಿ ವಾಹನ ಹಾಗೂ ಮಾಲೀಕರ ವಿವರಗಳ ಲಭ್ಯತೆ ಮತ್ತಷ್ಟು ಸುಲಭವಾಗಲಿದೆ.
ಮುಂದಿನ ವರ್ಷ ಗುತ್ತಿಗೆ ಕಂಪನಿ ಅವಧಿ ಮುಕ್ತಾಯ
ಹಾಲಿ ಸ್ಮಾರ್ಟ್ ಕಾರ್ಡ್ ಪ್ರಸ್ತುತ ವಿತರಣೆ ಮಾಡುತ್ತಿರುವ ಕಂಪನಿಯ ಗುತ್ತಿಗೆ ಅವಧಿ 2024ರ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಖಾಸಗಿ ಕಂಪನಿಯೊಂದು 2009ರ ಗುತ್ತಿಗೆ ಪಡೆದುಕೊಂಡಿದೆ. ಈಗಾಗಲೇ ತಲಾ 2 ಕೋಟಿಗೂ ಹೆಚ್ಚು ಆರ್‌ಸಿ ಮತ್ತು ಡಿಎಲ್ ಸ್ಮಾರ್ಟ್ ಕಾರ್ಟ್‌ಗಳನ್ನು ವಿತರಣೆ ಮಾಡಲಾಗಿದೆ. ಹೀಗಾಗಿ ಮುಂದಿನ ವರ್ಷ ಫೆಬ್ರವರಿ ನಂತರ ನೀಡುವ ಹೊಸ ಕಾರ್ಡ್‌ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿ ವಿತರಿಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ.
ಏಕರೂಪ ಕಾರ್ಡ್‌ಗಳು!
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಗದಿಪಡಿಸಿರುವ ನಿಯಮಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುವುದು. ಅಲ್ಲದೆ, ದೇಶಾದ್ಯಂತ ಈ ಕಾರ್ಡ್‌ಗಳು ಏಕರೂಪದಲ್ಲಿ ಇಡಲು ಚಿಂತನೆ ನಡೆಸಲಾಗಿದೆ.
ಕ್ಯೂ ಆರ್ ಕೋಡ್ ಹೊಂದಿರುವ ಕಾರ್ಡ್ ಹೇಗಿರಲಿದೆ?
ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಭಾವಚಿತ್ರ, ವಿಳಾಸ, ಸಿಂಧುತ್ವ, ಹುಟ್ಟಿದ ದಿನಾಂಕ ಮತ್ತು ರಕ್ತದ ಗುಂಪು ಮತ್ತು ಹಿಂಭಾಗದಲ್ಲಿ ವಾಹನದ ಮಾದರಿ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದು ಮಾಡಲಾಗಿರುತ್ತದೆ. ಈ ಎಲ್ಲ ವಿಷಯಗಳನ್ನು ಚಿಪ್‌ನಲ್ಲಿ ಅಳವಡಿಸಿದರೆ, ಕ್ಯೂ ಆರ್ ಕೋಡ್ ಜತೆಯಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಅಳವಡಿಸಲಾಗಿರುತ್ತದೆ.
ಆರ್‌ಸಿ ಕಾರ್ಡ್ ಹೀಗಿರಲಿದೆ
ಆರ್‌ಸಿ ಕಾರ್ಡ್‌ನ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಕಾರ್ಡ್ ಅಂತ್ಯಗೊಳ್ಳುವ ದಿನಾಂಕ, ಚಾಸಿಸ್, ಎಂಜಿನ್ ಸಂಖ್ಯೆ, ವಾಹನ ಟ್ರ್ಯಾಕಿಂಗ್ ಸಿಸ್ಟಂ ಅನ್ನು ಅಳವಡಿಕೆ ಮಾಡಲಾಗಿರುತ್ತದೆ ಎಂದು ತಿಳಿದುಬಂದಿದೆ. ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಆಸನ ಸಾಮರ್ಥ್ಯದ ಮಾಹಿತಿಯನ್ನು ನಮೂದು ಮಾಡಲಾಗಿರುತ್ತದೆ. ಕ್ಯೂಆರ್ ಕೋಡ್ ಅಳವಡಿಕೆಯಿಂದ ಪೊಲೀಸರು ವಾಹನ ಮತ್ತು ಮಾಲೀಕರ ದೃಢೀಕರಣ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲು ಸಹಾಯಕವಾಗುತ್ತದೆ.
ಹೊಸ ಕಾರ್ಡ್‌ಗಳಿಗೆ ಟೆಂಡರ್ ಐದು ವರ್ಷಕ್ಕೆ?
ಈಗಾಗಲೇ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳನ್ನು ಪೂರೈಕೆ ಮಾಡುವ ಕಂಪನಿಯ ಗುತ್ತಿಗೆ ಅವಧಿ ಪೂರ್ಣಗೊಳ್ಳುವ ದಿನಾಂಕ ಹತ್ತಿರ ಬಂದಿದೆ. ಇದಕ್ಕೆ ಮೊದಲೇ ನೂತನ ಮಾದರಿಯ ಕಾರ್ಡ್‌ಗಳಿಗೆ ಗುತ್ತಿಗೆ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. 5 ವರ್ಷಗಳಿಗೆ ಗುತ್ತಿಗೆ ನೀಡುವ ಸಂಬಂಧ ಟೆಂಡರ್ ಕರೆಯಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!
ಪೇಪರ್‌ಲೆಸ್ ಆದ ಆರ್‌ಸಿ-ಡಿಎಲ್!
2009ಕ್ಕಿಂತ ಮುಂಚೆ ಡಿಎಲ್ ಹಾಗೂ ಆರ್‌ಸಿ ಬುಕ್ ಕಾಗದದ ರೂಪದಲ್ಲಿತ್ತು. ಆದರೆ, 2009ರಿಂದ ಸ್ಮಾರ್ಟ್ ಕಾರ್ಡ್ ಅನ್ನು ವಿತರಣೆ ಮಾಡಲು ಸಾರಿಗೆ ಇಲಾಖೆ ಮುಂದಾಯಿತು. ಆದರೆ, ಈ ಸ್ಮಾಟ್ ಕಾರ್ಡ್‌ಗಳನ್ನು ಪರಿಶೀಲಿಸುವ ಉಪಕರಣಗಳು ಸಂಚಾರಿ ಪೊಲೀಸ್ ಅಥವಾ ಸಾರಿಗೆ ಇಲಾಖೆ ಬಳಿ ಇರಲಿಲ್ಲ. ಇದರಿಂದಾಗಿ ಸವಾರರು ಮುದ್ರಿತ ಪ್ರತಿಯನ್ನೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿತ್ತು. 2020 ಅಕ್ಟೋಬರ್ 1ರಿಂದ ದೇಶದ್ಯಂತ ಡಿಜಿಲಾಕರ್ ಅಥವಾ ಎಂ ಪರಿವರ್ತನ್ ರೂಪದಲ್ಲಿ ಮೊಬೈಲ್‌ಗಳಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡಲು ಅನುಮತಿ ನೀಡಿದ ತರುವಾಯ ಈಗ ಸಮಸ್ಯೆಯಾಗುತ್ತಿಲ್ಲ.