ಶಿವಮೊಗ್ಗ: ಇಲ್ಲಿನ ಶಿಕಾರಿಪುರದ ಅರಶಿಣಗೆರೆಯಲ್ಲಿ ಪೊಲೀಸರು ಹಲ್ಲೆ ಮಾಡಿದ ಕಾರಣಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಅರಶಿಣಗೆರೆಯ ಸಚಿನ್ (24) ವಿಷ ಸೇವಿಸಿದ ಯುವಕ.
ಕಳೆದ ಎರಡು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಸಚಿನ್ ಹಾಗೂ ಸ್ನೇಹಿತರು ಬಂದಿದ್ದರು. ಈ ವೇಳೆ ಮೂವರು ಪಿಸಿಗಳು ಸುಖಾಸುಮ್ಮನೆ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೆ ಕಾರಣ ತಿಳಿಸುವಂತೆ ಗ್ರಾಮದ ಯುವಕರು ಪಟ್ಟು ಹಿಡಿದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆನ್ನಲಾಗಿದೆ. ಇತ್ತ ಊರಿನವರ ಮುಂದೆ ಅವಮಾನ ಆಗಿದ್ದನ್ನು ಸಹಿಸದೆ ಸಚಿನ್ ವಿಷ ಸೇವಿಸಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವಿಷ ಸೇವಿಸಿ ಅಸ್ವಸ್ಥರಾಗಿದ್ದ ಸಚಿನ್‌ನನ್ನು ಕೂಡಲೇ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಸಚಿನ್ ಪ್ರಾಣಾಪಾಯದಿಂದ ಪಾರಾಗಿದ್ದು, ಬಿಜೆಪಿ ಸ್ಥಳೀಯ ನಾಯಕನ ಕುಮ್ಮಕ್ಕಿನಿಂದ ಹಾಗೂ ನಾವು ಕೀಳು ಜಾತಿ ಎಂಬ ಕಾರಣಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ: Basavaraj Bommai Birthday | ಎಲ್ಲರನ್ನೂ ಪ್ರೀತಿಸುವ ಮಾತೃ ಹೃದಯಿ ಕಾಮನ್‌ಮ್ಯಾನ್ ಸಿಎಂ
ಇತ್ತ ದೂರು ನೀಡಲು ಮುಂದಾದರೆ ಪೊಲೀಸರು ನಿರಾಕರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.