ಹೊನ್ನಾವರ: “ಮತದಾರರಿಗೆ ಕೇವಲ ಹೊಟ್ಟೆ, ಬಾಯಿ ಇದೆ ಎಂದು ಯೋಚಿಸುವುದನ್ನು ಬಿಟ್ಟು, ಅವರಿಗೂ ಒಂದು ತಲೆ ಇದೆ ಎನ್ನುವುದನ್ನು ರಾಜಕೀಯ ಪಕ್ಷಗಳು (Political Parties) ಯೋಚಿಸಬೇಕಿದೆ” ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.
ತಾಲೂಕಿನ ಮಂಕಿ ಆಸ್ಪತ್ರೆ ಸಮೀಪದ ಗುರುಮಠದ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಕೆಲವು ಪಕ್ಷಗಳು ಜನರಿಗೆ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಉಚಿತವಾಗಿ ಕೊಡುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಗುರಿಯಾಗಬಾರದು. ಯುವಕರಿಗೆ ಶಿಕ್ಷಣ ಉದ್ಯೋಗ ಕೊಡಲು ಮುಂದಾಗಬೇಕು. ಜನಪ್ರತಿನಿಧಿಗಳು ಅಭಿವೃದ್ಧಿ ಜೊತೆಗೆ ಬೌದ್ಧಿಕ ಅಭಿವೃದ್ಧಿ ಕುರಿತು ಚಿಂತನೆ ನಡೆಸಿದರೆ ಮಾತ್ರ ಸಮಾಜದ ಉನ್ನತಿಯಾಗಲಿದೆ” ಎಂದರು.
ಇದನ್ನೂ ಓದಿ: IPL 2023 : ಐಪಿಎಲ್ ಫ್ರಾಂಚೈಸಿಗಳಿಗೆ ಗಾಯದ ಗೋಳು ; ಇದುವರೆಗೆ 10 ಆಟಗಾರರು ಔಟ್!
ಶಾಸಕ ಸುನಿಲ್ ನಾಯ್ಕ ಮಾತನಾಡಿ, “ಭಟ್ಕಳ ಭಾರತೀಯ ಜನತಾ ಪಾರ್ಟಿ ಭದ್ರಕೋಟೆಯಾಗಿದೆ. ಕಾರ್ಯಕರ್ತರ ಮಧ್ಯೆ ನಿಂತು ಶಾಸಕನಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದೇನೆ. ಅಧಿಕಾರದ ದರ್ಪ ತೋರಿಲ್ಲ. ಶಾಸಕ ಪದವಿ ಶಾಶ್ವತವಲ್ಲ. ಜನರ ಪ್ರೀತಿ ವಿಶ್ವಾಸ ಶಾಶ್ವತವಾಗಿದೆ. ಮುಂದಿನ ಚುನಾವಣೆ ಕೇವಲ ಭಾರತೀಯ ಜನತಾ ಪಾರ್ಟಿ ಚುನಾವಣೆಯಲ್ಲ. ಟಿಪ್ಪು ಮತ್ತು ಸಾವರ್ಕರ್ ನಡುವಿನ ಚುನಾವಣೆ ಎಂದರು.
ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪ್ರಸನ್ನ ಕೆರಕೈ, ನಾಗರಾಜ ನಾಯಕ, ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ಮುಖಂಡರಾದ ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪಶ್ಚಿಮ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ, ಪ್ರಸನ್ನ ಕೆರೆಕೈ, ಅಜಿತ್ ಹೆಗಡೆ, ಚಂದ್ರು ಎಸಳೆ, ಉಷಾ ಹೆಗಡೆ, ಗುರುಪ್ರಸಾದ ಹೆಗಡೆ, ಕಿಶೋರ ಕುಮಾರ, ಎಂ.ಜಿ.ಭಟ್, ನಾಗರಾಜ ನಾಯಕ, ಶಿವಾನಿ ಶಾಂತರಾಮ ನಾಗರಾಜ ನಾಯಕ ತೊರ್ಕೆ ಮತ್ತಿತರರು ಉಪಸ್ಥಿತರಿದ್ದರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಸ್ವಾಗತಿಸಿದರೆ, ತಾಲೂಕು ಅಧ್ಯಕ್ಷ ಸಚಿನ್ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಇಡಗುಂಜಿ ಕ್ರಾಸ್ ಮೂಲಕ ಮಂಕಿ ಪ.ಪಂ. ವಿವಿಧಡೆ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ, ಆಟೋ ಮೂಲಕ ರ‍್ಯಾಲಿ ಜರುಗಿತು.