ಚಿಕ್ಕಮಗಳೂರು: ಕೆಪಿಸಿಸಿ ಯೂತ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ (Mohammed Nalapad) ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಯೂತ್ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ನಡುವಿನ ತಿಕ್ಕಾಟ ಈಗ ಬೀದಿರಂಪವಾಗಿ ಬದಲಾಗಿದೆ. ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಇಲಿಯಾಸ್‌ಗೆ ಜೀವಬೆದರಿಕೆ ಹಾಕಿದ ಆರೋಪ ನಲಪಾಡ್ ಮೇಲೆ ಕೇಳಿಬಂದಿದೆ. ಸದ್ಯ ಇವರಿಬ್ಬರು ಮಾತನಾಡಿದ್ದಾರೆನ್ನಲಾದ ಆಡಿಯೊ ಮತ್ತು ವಿಡಿಯೊ ವೈರಲ್ ಆಗಿದೆ.
ಕಾಂಗ್ರೆಸ್ ಯೂತ್ ಮೆಂಬರ್‌ಶಿಪ್ ವಿಚಾರವಾಗಿ ಹೆಚ್ಚಿನ ನೋಂದಣಿ ಮಾಡಿದರೆ ಪಕ್ಷದಲ್ಲಿ ಉನ್ನತ ಹುದ್ದೆಯನ್ನು ಕಲ್ಪಿಸಿಕೊಡುವುದಾಗಿ ನಲಪಾಡ್ ಆಫರ್ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಲಿಯಾಸ್ ಬಹಳ ಕಷ್ಟಪಟ್ಟು ನಲಪಾಡ್ ನೀಡಿದ್ದ ಟಾರ್ಗೆಟ್ ಅನ್ನು ಮುಟ್ಟಿದ್ದರು ಎಂದು ಹೇಳಲಾಗಿದೆ. ಹೆಚ್ಚಿನ ಸದಸ್ಯತ್ವ ಮಾಡಿರುವ ಹಿನ್ನೆಲೆಯಲ್ಲಿ ಜವಾಬ್ದಾರಿ ನೀಡುವಂತೆ ನಲಪಾಡ್‌ಗೆ ಇಲಿಯಾಸ್ ಫೋನ್ ಮಾಡಿ ಕೇಳುತ್ತಿದ್ದ. ಪದೇ ಪದೆ ಫೋನ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಲಪಾಡ್‌ಗೆ ರೇಗಿಹೋಗಿದ್ದು, ಆವಾಜ್ ಹಾಕಿದ್ದಾರೆಂಬ ಆರೋಪ ಈಗ ಕೇಳಿಬಂದಿದೆ.
ಇದೇ ರೀತಿ ಪದೇ ಪದೆ ಫೋನ್ ಮಾಡಿದರೆ ನಿನ್ನ ಮನೆಗೆ ಜನರನ್ನು ನುಗ್ಗಿಸುತ್ತೇನೆ ಎಂದು ಏರುಧ್ವನಿಯಲ್ಲಿ ನಲಪಾಡ್ ಆವಾಜ್ ಹಾಕಿದ್ದು, ಈ ಹಿನ್ನೆಲೆಯಲ್ಲಿ ನಲಪಾಡ್ ಮತ್ತು ಇಲಿಯಾಸ್ ನಡುವೆ ಫೋನ್‌ನಲ್ಲಿಯೇ ಮಾತಿನ ಚಕಮಕಿ ನಡೆದಿದೆ. ಇದರ ಆಡಿಯೊ ಹಾಗೂ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Sara Khadem | ಹಿಜಾಬ್ ಧರಿಸದ ಇರಾನ್ನ ಚೆಸ್ ಆಟಗಾರ್ತಿಗೆ ದೇಶಕ್ಕೆ ಮರಳದಂತೆ ಎಚ್ಚರಿಕೆ!
ಆಡಿಯೊ ವಿಡಿಯೊದಲ್ಲಿ ಏನಿದೆ?
ಮನೆಗೆ ನುಗ್ಗಿಸುತ್ತೇನೆ ಅಂತ ಹೇಳಿದ್ದಿರಲ್ಲ ಯಾವಾಗ ನುಗಿಸ್ತೀರಾ..? ನೀವು ಗಂಡಸು ಆಗಿದ್ರೆ ಮನೆಗೆ ಜನರ ನುಗ್ಗಿಸಬೇಕು ಎಂದು ಇಲಿಯಾಸ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ನಲಪಾಡ್, ಕುಡಿದು ಮಾತನಾಡಬೇಡ. ಬೆಳಗ್ಗೆ ಮಾತನಾಡು. ನಿನ್ನಂತಹ ಕಾರ್ಯಕರ್ತ ಪಕ್ಷಕ್ಕೆ ಬೇಡ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಬಳಿಕ ನಲಪಾಡ್ ಪಿಎಗೆ ಕರೆ ಮಾಡಲಾಗಿದ್ದು, ಮರ್ಯಾದೆ ಕೊಟ್ಟು ಮಾತನಾಡಬೇಕು. ಮನೆಗೆ ನುಗ್ಗುತ್ತೇನೆ ಅಂದರೆ ಏನು? ಅಧಿಕಾರ ಇದೆ ಎಂದ ಮಾತ್ರಕ್ಕೆ ಸಿಕ್ಕ ಸಿಕ್ಕ ಹಾಗೆ ಮಾತನಾಡಿದರೆ ಆಗುತ್ತಾ? 12 ವರ್ಷ ಕೆಲಸ ಮಾಡಿದ್ದೇವೆ. ಮೆಂಬರ್‌ಶಿಪ್ ಮಾಡುವಾಗ ಬ್ರದರ್ ಅಂತೆಲ್ಲ ಪೋನ್ ಮಾಡುತ್ತಾ ಇದ್ದರು. ಮನೆಗೆ ನುಗ್ಗಿಸುತ್ತೇನೆ ಎಂದು ಹೇಳಿದ್ದಾರಲ್ಲ, ನಾನು ಲೊಕೇಶನ್ ಕಳುಹಿಸುತ್ತೇನೆ ಎಂದು ಇಲಿಯಾಸ್ ಗುಡುಗಿದ್ದಾರೆ.