ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿಯ ಮುಂದೆ ಹೀರೋಯಿಸಂ ತೋರಿಸಲು ಹೋದ ಯುವ ಕಾಂಗ್ರೆಸ್ ತುಮಕೂರು ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ. ಮಹಿಳಾ ಪಿಎಸ್ ಐ ಜೊತೆ ಅಸಭ್ಯ ವರ್ತನೆ, ಅವಾಚ್ಯ ಪದಗಳಿಂದ ನಿಂದನೆ ಆರೋಪದಲ್ಲಿ ತುಮಕೂರು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಸೆರೆಯಾಗಿದ್ದಾರೆ.
ಶಶಿ ಹುಲಿಕುಂಟೆ ಅವರು ತುಮಕೂರು ನಗರದ ತಿಲಕ್ ಪಾರ್ಕ್ ಠಾಣಾ ಪಿಎಸ್ ಐ ರತ್ನಮ್ಮ ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ ಆರೋಪವಿದೆ. ತುಮಕೂರು ಶಾಸಕ ಜ್ಯೋತಿ ಗಣೇಶ್ ವಿರುದ್ಧ ಪೇ ಎಂಎಲ್ಎ ಪೋಸ್ಟರ್ ಅಂಟಿಸಿದ್ದ ಪ್ರಕರಣದಲ್ಲಿ ನಾಲ್ಕು ಆರೋಪಿಗಳನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಅವರನ್ನು ಬಿಡುಗಡೆ ಮಾಡುವಂತೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುಲಿಕುಂಟೆ ಒತ್ತಡ ಹಾಕಿದ್ದರು.
ಬಿಡುಗಡೆ ಮಾಡಲು ಒಪ್ಪದಿದ್ದಾಗ ದರ್ಪದಿಂದ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. ʻʻ3 ತಿಂಗಳ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ನಿಮ್ಮನ್ನೆಲ್ಲಾ ನೋಡಿಕೊಳ್ಳುತ್ತೇನೆʼʼ ಎಂದು, ಪಿಎಸ್ಐ ಹಾಗೂ ಪೇದೆಗಳಿಗೆ ಹುಲಿಕುಂಟೆ ಆವಾಜ್ ಹಾಕಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲ, ಪೇ ಎಂಎಲ್ ಎ ಪೋಸ್ಟರ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ನಾಲ್ವರನ್ನು ಸಿನಿಮೀಯ ರೀತಿಯಲ್ಲಿ ಠಾಣೆಯಿಂದಲೇ ಎಸ್ಕೇಪ್ ಮಾಡಿಸಿದ್ದರು ಎನ್ನಲಾಗಿದೆ. ಇದು ಪೊಲೀಸರನ್ನು ಕೆರಳಿಸಿದೆ. ಅವರು ಹುಲಿಕುಂಟೆ ಅವರನ್ನೇ ಬಂಧಿಸಿ ಈಗ ತುಮಕೂರು 3 ನೇ ಹೆಚ್ಚುವರಿ ಜೆಎಮ್ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಶಿ ಹುಲಿಕುಂಟೆ. ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ.
ಇದನ್ನೂ ಓದಿ : Nigerian Fraud: ಬ್ರಿಟನ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ ನೈಜೀರಿಯಾ ವ್ಯಕ್ತಿಯ ಬಂಧನ