ಉಡುಪಿ: ಗೆಳೆಯರೊಂದಿಗೆ ಹೊಳೆಯಲ್ಲಿ ಈಜಾಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರುಪಾಲಾದ (Drowned in river) ಘಟನೆ ಕುಂದಾಪುರ ತಾಲೂಕಿನ ಕೋಣಿ ಕೆಳಾಕೇರಿಯ ಹೊಳೆಯಲ್ಲಿ ನಡೆದಿದೆ. ತಿಲಕ್ (18) ಹೊಳೆಯಲ್ಲಿ ಮುಳುಗಿ ಮೃತಪಟ್ಟಿರುವ ವಿದ್ಯಾರ್ಥಿ ಆಗಿದ್ದಾನೆ.
ತೀರ್ಥಹಳ್ಳಿ ಮೂಲದ ತಿಲಕ್, ಪ್ರಥಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ತಿಲಕ್ ತನ್ನ ಸ್ನೇಹಿತರೊಂದಿಗೆ ಈಜಲು ಹೊಳೆಗೆ ಇಳಿದಿದ್ದ. ಆದರೆ ಆತನಿಗೆ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನೀರುಪಾಲಾದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಜಯಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲಕನ ಹತ್ಯೆಗೈದ ಪಾಪಿಯ ಬಂಧನ
ವಿಜಯಪುರ ನಗರದ ಜಾಮಿಯಾ ಮಸೀದಿ ಬಳಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಬಾಲಕನ (Murder Case) ಹತ್ಯೆಗೈದಿದ್ದಾನೆ. ಫಾರಿದ್ ಹೊನವಾಡ (15) ಮೃತಪಟ್ಟಿರುವ ದುರ್ದೈವಿ. ರಾಹುಲ್ ಬೆಳ್ಳುಬ್ಬಿ ಹತ್ಯೆಗೈದಿರುವ ಆರೋಪಿ ಆಗಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ರಾಹುಲ್, ಫಾರಿದ್ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.
ಆತ್ಮಹತ್ಯೆ ಮಾಡಿಕೊಂಡ ಅತ್ತೆ ಮಗಳಿಗೆ ನ್ಯಾಯ ಕೊಡಿಸಲು ಆತ್ಮಹತ್ಯೆಗೆ ಯತ್ನಿಸಿದ ಯುವಕ
ತನ್ನ ಅತ್ತೆ ಮಗಳನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ, ಆತನಿಗೆ ಶಿಕ್ಷೆ ಕೊಡಿಸಿ ಆಕೆಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿ ಯುವಕನೊಬ್ಬ ಚಿಕ್ಕಬಳ್ಳಾಪುರ ಆಸ್ಪತ್ರೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಿಕ್ಕಬಳ್ಳಾಪುರ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಶವಗಾರದ ಎದುರೇ ಘಟನೆ ನಡೆದಿದೆ. ಗೌರಿಬಿದನೂರಿನ ಕಾಮಗಾನಹಳ್ಳಿ ಗ್ರಾಮದ ಯುವಕ ಮುರುಳಿ ಎಂಬಾತ ಹೀಗೆ ಮಾಡಿದ್ದಾನೆ.
ಈತನ ಅತ್ತೆಯ ಮಗಳಾದ ಪುಷ್ಪ ನಿನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಪುಷ್ಪಳಿಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡಿದ್ದ ಪತಿ ನಿತ್ಯ ಆಕೆಗೆ ಈ ಬಗ್ಗೆ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಪತಿ- ಪತ್ನಿ ನಡುವೆ ವೈಮನಸ್ಸು ಬಂದ ಹಿನ್ನೆಲೆಯಲ್ಲಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಳ ಪತಿ ಶ್ರೀನಿವಾಸನೇ ಕೊಲೆ ಮಾಡಿದ್ದಾನೆಂದು ಆಕೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಷ್ಪಾಳಿಗೆ ಆಕೆಯ ಪತಿ ಶ್ರೀನಿವಾಸ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮುರುಳಿ, ಆಸ್ಪತ್ರೆ ಶವಾಗಾರದ ಮುಂದೆ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ.
ಇದನ್ನೂ ಓದಿ: Karnataka Election 2023: ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕ; ಶನಿವಾರ ಬೆಂಬಲಿಗರ ಸಭೆ ಕರೆದ ಜಗದೀಶ್ ಶೆಟ್ಟರ್
ಗೌರಿಬಿದನೂರು ಸಿಪಿಐ ಲಕ್ಷ್ಮೀ ನಾರಾಯಣ ಅವರು ಸ್ಥಳಕ್ಕೆ ಬಂದು ಯುವಕನನ್ನು ಕೆಳಗಿಸಿದ್ದಾರೆ. ಮಗಳ ಸಾವಿನ ಬಗ್ಗೆ ಮೃತಳ ತಾಯಿ ದೂರು ನೀಡಿದ್ದು, ಪೊಲೀಸರು ಆಕೆಯ ಪತಿ ಶ್ರೀನಿವಾಸನನ್ನು ಬಂಧಿಸಿದ್ದಾರೆ.