ನೆಲಮಂಗಲ: ಗೆಳೆಯರೊಂದಿಗೆ ಕೆರೆಗೆ ಈಜಾಡಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ನೀರುಪಾಲಾದ (Youth drowned) ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ. ಬೆಂಗಳೂರಿನ ಲಗ್ಗೆರೆ ನಿವಾಸಿ ದರ್ಶನ್ (17) ಮೃತ ವಿದ್ಯಾರ್ಥಿ ಆಗಿದ್ದಾನೆ.
ದರ್ಶನ್ ಗೊರಗುಂಟೆಪಾಳ್ಯದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸೂಕ್ತ ಸಾಮಗ್ರಿಗಳ ಕೊರತೆಯಿಂದಾಗಿ ಅಗ್ನಿಶಾಮಕ ಹಾಗೂ ತುರ್ತುಸೇವೆ ಅಧಿಕಾರಿಗಳಿಂದ ಮೃತದೇಹ ಹೊರ ತೆಗೆಯಲು ವಿಳಂಬವಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಹುಡುಕಾಟಕ್ಕೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನೀರುಪಾಲಾದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Road Accident: ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಬಸ್; ಇಬ್ಬರು ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ನಾಪತ್ತೆಯಾಗಿದ್ದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಬಾಲಕಿಯನ್ನು ಕೊಂದು (Girl murdered) ಚೀಲದಲ್ಲಿ ಹಾಕಿ ಬಾವಿಗೆ ಎಸೆದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ರೇಖಾ ಸಂಗಪ್ಪ ಯಂಕಂಚಿ ಎಂಬ 11 ವರ್ಷದ ಬಾಲಕಿಯೇ ಕೊಲೆಗೀಡಾದವಳು. ಶಾಲೆಗೆ ಹೋಗುತ್ತಿರುವ ಈ ಬಾಲಕಿ ಮಾರ್ಚ್ 15ರ ಬೆಳಗ್ಗೆ 10 ಗಂಟೆಯಿಂದ ನಾಪತ್ತೆಯಾಗಿದ್ದಳು. ಇಡೀ ಊರಿನ ಜನರೆಲ್ಲ ಸೇರಿ ಆಕೆಗಾಗಿ ಹುಡುಕಾಟ ನಡೆಸಿದ್ದರೂ,ಆದರೆ, ಸಿಕ್ಕಿರಲಿಲ್ಲ.
ಶುಕ್ರವಾರ ಇಲ್ಲಿನ ಬಾವಿಯೊಂದರಲ್ಲಿ ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಆದರೆ, ಈ ಬಾಲಕಿಯನ್ನು ಕೊಲೆ ಮಾಡಿದ್ದು ಯಾರು? ಯಾಕಾಗಿ ಕೊಲೆ ಮಾಡಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕಬೇಕಾಗಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳ್ಳಾಲ ಕೋಟೆಪುರದಲ್ಲಿ ದಿಲ್ಲಿ ಮೂಲದ ಮಹಿಳೆ ಮರ್ಡರ್, ಜತೆಗಿದ್ದ ನಯೀಮ್ ನಾಪತ್ತೆ
ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ (Murder case) ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ಸಂಜೆ ವೇಳೆ ಬೆಳಕಿಗೆ ಬಂದಿದೆ. ದೆಹಲಿ ಮೂಲದ 35-40ರ ಹರೆಯದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಈಕೆ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದು ಅವನೇ ಕೊಂದು ಓಡಿಹೋಗಿರಬಹುದು ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಪಡೆದಿತ್ತು. ಹಮೀದ್ ಎಂಬವರ ಬಾಡಿಗೆ ಮನೆಯನ್ನು ಇವರು ಗೊತ್ತು ಮಾಡಿಕೊಂಡಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು, ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು. ಗುರುವಾರ ಸಂಜೆಯಾದರು ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಸ್ಥಳೀಯರು ಗಮನಿಸಿ ಮನೆಯನ್ನು ಪರಿಶೀಲಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ದಿಲ್ಲಿಯಿಂದ ಇಲ್ಲಿಗೆ ಯಾಕೆ ಬಂದರು, ಅವರು ನಿಜಕ್ಕೂ ಗಂಡ-ಹೆಂಡತಿಯಾ? ಇಲ್ಲಿ ಕೊಲೆ ಮಾಡಿದ್ದು ಯಾಕೆ? ಆರೋಪಿ ಎಲ್ಲಿ ಹೋಗಿದ್ದಾನೆ ಎಂಬ ಹಲವು ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳಬೇಕಾಗಿದೆ. ಇದೀಗ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ