ಶಿವಮೊಗ್ಗ: ವೀರ ಸಾವರ್ಕರ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಈ ಸ್ವಾತಂತ್ರ್ಯ ಹೋರಾಟಗಾರನನ್ನು ನೆನಪಿಸಿಕೊಂಡರೆ, ಅಂಡಮಾನ್ ಜೈಲಿನ ಕಾಲಾಪಾನಿ (ಕರಿನೀರಿನ ಶಿಕ್ಷೆ) ನೆನಪಾಗುವುದು ಸಹಜ. ಈ ಒಂದು ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಇಲ್ಲೊಂದು ಯುವಕರ ತಂಡ ವೀರ ಸಾವರ್ಕರ್ ವಿರಚಿತ ಜಯೋಸ್ತುತೆ ಕವನವನ್ನು ಸೊಗಸಾಗಿ ಹಾಡಿ ಸೈ ಎನಿಸಿಕೊಂಡಿದೆ.
ಈ ಹಿಂದೆ ಇದೇ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದ ಹೃದಯನಾಥ್ ಮಂಗೇಶ್ಕರ್‌ಗೆ ಆಗಿನ ಸರ್ಕಾರ ಶಿಕ್ಷೆ ವಿಧಿಸಿತ್ತು. ಇದೀಗ ಇದೇ ಹಾಡನ್ನು ಇಂದಿನ ಯುವಪೀಳಿಗೆಗೆ ಅನುಕೂಲವಾಗಲೀ ಎಂದು ಈ ಯುವಕರ ತಂಡ ಈ ಗೀತೆಯನ್ನು ಮರುಸೃಷ್ಟಿಸಿದೆ. ಶಿವಮೊಗ್ಗದ ವಿನಯ್, ಪೃಥ್ವಿ ಗೌಡ, ಪಾರ್ಥ ಚಿರಂತನ್ ಎಂಬ ಮೂವರು ಯುವಕರು ಸಂಗೀತ ಸಂಯೋಜಿಸಿ, ಹಾಡಿದ್ದಾರೆ.
ಅಂದಹಾಗೆ, ಶಿವಮೊಗ್ಗದ ಈ ಯುವ ಪ್ರತಿಭೆಗಳು, ವಿನಾಯಕ್ ದಾಮೋದರ್ ಸಾವರ್ಕರ್ ಅವರ ವಿರಚಿತ ಜಯೋಸ್ತುತೆ ಎಂಬ ಕವನವನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ, ಪುನರ್ ರಚಿಸಿ, ಗೀತೆಯನ್ನು ಸಂಪೂರ್ಣವಾಗಿ ರೂಪಿಸಿದ್ದಾರೆ. ಸುಮಾರು 1940ರಲ್ಲಿ ಇದೇ ಗೀತೆಯನ್ನು ಸ್ಲೋ ಟೆಂಪೋ ಬಳಸಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಧ್ವನಿಯಲ್ಲಿ ಮೂಡಿ ಬಂದಿದ್ದ ಈ ಗೀತೆಯನ್ನು ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಸಂಗೀತ ಸಂಯೋಜಿಸಿದ್ದರು.
ಈ ಹಾಡನ್ನು ಸಂಯೋಜಿಸಿದ್ದಕ್ಕಾಗಿ, ಆಗಿನ ಸರ್ಕಾರ, ಅವರಿಗೆ ಶಿಕ್ಷೆ ಕೂಡ ನೀಡಿದ್ದಲ್ಲದೇ, ಆಕಾಶವಾಣಿಯಲ್ಲಿ ಕೆಲಸ ಕೂಡ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ. ತಾಯಿ ಭಾರತಾಂಬೆಯನ್ನು ಕೊಂಡಾಡುವ ಗೀತೆಯನ್ನು ಇದೀಗ ಮತ್ತೆ ಆಧುನಿಕ ಸಂಗೀತ ಉಪಕರಣಗಳನ್ನು ಬಳಸಿಕೊಂಡು, ಈಗಿನ ಯುವ ಪೀಳಿಗೆಗೆ ಅನುಕೂಲವಾಗಲೀ ಎಂದು ಈ ಯುವಕರ ತಂಡ ಜಯೋಸ್ತುತೆ ಗೀತೆಯನ್ನು ಮರು ಸೃಷ್ಟಿಸಿದೆ. ಈ ಗೀತೆಗೆ ಸ್ವತಃ ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಆ.15ರಂದು ಶಿವಮೊಗ್ಗದಲ್ಲಿ ಕೆಲವರು ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ್ದರಿಂದ ಗಣೇಶ ಚತುರ್ಥಿಗೆ ಸಾವರ್ಕರ್ ಅವರು ಭಾವಚಿತ್ರ ನೀಡಿದ್ದನ್ನು ನೆನಪಿಸಿಕೊಳ್ಳಲು ಈ ಗೀತೆಯನ್ನು ವಿಠಲ ರಂಗಧೋಳ್ ಅವರ ವಾದ್ಯ ಸಂಯೋಜನೆಯಲ್ಲಿ ವಿಡಿಯೊ ಮಾಡಿ ಯೂಟ್ಯೂಬ್‌ನಲ್ಲಿ ಪ್ರಚುರಪಡಿಸಲಾಗಿದೆ. ಇದಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | Hindutva | ಹಿಂದುಸ್ತಾನ್ ಒಂದೇ ರಾಷ್ಟ್ರವಾಗಬೇಕು, ಹಿಂದು ಸಂಸ್ಕೃತಿಯೊಂದೇ ಇರಬೇಕು: ಸಾತ್ಯಕಿ ಸಾವರ್ಕರ್