Site icon Vistara News

Narayana Murthy: ವಾರಕ್ಕೆ 70 ತಾಸು ದುಡಿಯಿರಿ ಎಂದ ಇನ್ಫಿ ಮೂರ್ತಿ ವಿರುದ್ಧ ಆಕ್ರೋಶ!

Narayana Murthy

Infosys founder Narayana Murthy says he starved for 120 hours straight during hitchhike in Europe 50 years ago

ಬೆಂಗಳೂರು: “ಭಾರತವು ಜಗತ್ತಿಗೆ ಸ್ಪರ್ಧೆ ನೀಡಲು, ಉತ್ಪಾದಕತೆ ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು” ಎಂದು ಇನ್ಫೋಸಿಸ್‌ (Infosys) ಸಂಸ್ಥಾಪಕ ಎನ್‌.ಆರ್.‌ ನಾರಾಯಣಮೂರ್ತಿ (Narayana Murthy) ಅವರು ನೀಡಿದ ಸಲಹೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಸಮಾಧಾನ, ಆಕ್ರೋಶ ವ್ಯಕ್ತವಾಗುತ್ತಿದೆ. ನಾರಾಯಣ ಮೂರ್ತಿ ಅವರು ಹೇಳಿದ ಹಾಗೆ ಯುವಕರು ಕೆಲಸ ಮಾಡಿದರೆ, ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಸೇರಿ ಹಲವು ದಿಸೆಯಲ್ಲಿ ಇನ್ಫಿ ಮೂರ್ತಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

ಆರೋಗ್ಯ ಸುಧಾರಣೆಗೆ ಲಕ್ಷಾಂತರ ರೂ. ಖರ್ಚು

“ದಿನಕ್ಕೆ 12 ತಾಸು ದುಡಿ, ಸರಿಯಾದ ನಿದ್ದೆ ಇಲ್ಲದೆ ಮಾನಸಿಕ ಆರೋಗ್ಯ ಹಾಳು ಮಾಡಿಕೊ, ಆರೋಗ್ಯವನ್ನು ಹಾಳು ಮಾಡಿಕೊಂಡ ನಂತರ ಆಸ್ಪತ್ರೆಗಳಿಗೆ ಲಕ್ಷಾಂತ ರೂ. ಖರ್ಚು ಮಾಡು, ಇನ್ಫೋಸಿಸ್‌ನ ಬ್ಯುಸಿನೆಸ್‌ ಜಾಸ್ತಿ ಮಾಡು, ಇನ್ಫೋಸಿಸ್‌ ಲಾಭವನ್ನು ಹೆಚ್ಚಿಸು ಎಂಬುದನ್ನು ನಾರಾಯಣ ಮೂರ್ತಿ ಅವರು ಪರೋಕ್ಷವಾಗಿ ಹೇಳಿದ್ದಾರೆ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಭಾರತದ ಏಳಿಗೆಗೆ ನಾರಾಯಣ ಮೂರ್ತಿ ಅವರಂತಹ ಬಂಡವಾಳಶಾಹಿಗಳು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಅವರು ಉತ್ತಮವಾಗಿ ಬಳಸುವಂತಾಗಬೇಕು. ಇದರ ಬದಲು ಯುವಕರನ್ನೇ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸುತ್ತ, “ನಾರಾಯಣ ಮೂರ್ತಿ ಅವರು ತಮ್ಮ ಉದ್ಯೋಗಿಗಳನ್ನು ಗುಲಾಮರು ಎಂದು ಭಾವಿಸಿದ್ದಾರೆ. ಆಧುನಿಕ ಕಾಲದಲ್ಲೂ ಅವರು ಗುಲಾಮಗಿರಿಯನ್ನು ಮತ್ತೆ ಜಾರಿಗೆ ತರಲು ಯತ್ನಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಣ ಮೂರ್ತಿ ಹೇಳಿದ್ದೇನು?

ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದು ಹೇಳಿದ್ದರು.

ಇದನ್ನೂ ಓದಿ: Narayana Murthy: ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ!

“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು ನಾವು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಇನ್ಫೋಸಿಸ್ ನಾರಾಯಣಮೂರ್ತಿ ತಿಳಿಸಿದ್ದರು. ಆದಾಗ್ಯೂ, ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಮತ್ತೊಂದಿಷ್ಟು ಜನ ಬೆಂಬಲಿಸಿದ್ದಾರೆ.

Exit mobile version