ದಾವಣಗೆರೆ: ಇಲ್ಲಿನ ಕಾಯಿಪೇಟೆಯಲ್ಲಿ ಬುಧವಾರ ಯುವಕನೊಬ್ಬನಿಗೆ ಚೂರಿ ಇರಿತವಾಗಿದೆ. ಇನ್ನೊಬ್ಬ ಯುವಕ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಯುವಕನ ಕೈಯ ಬೆರಳಿಗೆ ಗಾಯವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಚೂರಿ ಇರಿತ, ಹಲ್ಲೆಯ ಘಟನೆಗಳು ನಡೆಯುತ್ತಿರುವುದರಿಂದ ಆರಂಭದಲ್ಲಿ ಇದೂ ಒಂದು ಅಂಥ ಪ್ರಕರಣವಿರಬಹುದೇ ಎಂಬ ಗುಮಾನಿ ಹರಡಿತ್ತು. ಆದರೆ, ಇದು ತೀರಾ ವೈಯಕ್ತಿಕ ಘಟನೆ ಎಂದು ಸ್ಪಷ್ಟವಾಗಿದೆ.
ಕಾಯಿಪೇಟೆಯ ಟೀ ಅಂಗಡಿ ಬಳಿ ಈ ಘಟನೆ ನಡೆದಿದೆ. ಚಹಾ ಕುಡಿಯುವಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅಬ್ದುಲ್ ರಜಾಕ್ ಎಂಬ ಯುವಕನಿಗೆ ಇರಿಯಲಾಗಿದೆ. ಹೆಬ್ಬೆರಳಿಗೆ ತೀವ್ರ ಗಾಯಗೊಂಡ ಆತನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಹಲ್ಲೆ ಮಾಡಿದ ಯುವಕ ಪರಾರಿಯಾಗಿದ್ದಾನೆ.
ಹುಡುಗಿ ವಿಚಾರಕ್ಕೆ ಜಗಳ
ದಾವಣಗೆರೆ ಬಸವನಗರ ಪೊಲೀಸ್ ಠಾಣೆಯಲ್ಲಿ ಗಾಯಾಳು ಯುವಕನ ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ಮಾಡಿದ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ. ಹುಡುಗಿಯ ವಿಚಾರಕ್ಕೆ ಇವರಿಬ್ಬರ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. ಅದು ಟೀ ಅಂಗಡಿಯಲ್ಲಿ ಮತ್ತೆ ಎದ್ದು ಬಂದು ಹಲ್ಲೆ ನಡೆದಿದೆ ಎನ್ನಲಾಗಿದೆ.