ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯ ಸಾಯಿನಗರದಲ್ಲಿ ಶುಕ್ರವಾರ ಚೂರಿ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ. ಕೋಡಿಹಳ್ಳಿ ನಿವಾಸಿ ನವೀನ್ ಕುಮಾರ್ (25) ಮೃತ. ಚೂರಿಯಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ (Bhadravathi Murder) ಮೃತಪಟ್ಟಿದ್ದಾನೆ.
ಸಾದತ್, ಸುಹೇಲ್ ಅಲಿಯಾಸ್ ಕೊಲವೇರಿ ಹಾಗೂ ಸಹಚರರು ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೃತ ಯುವಕನಿಗೆ ಒಂದು ವರ್ಷದ ಮಗುವಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ನವೀನ್ ಕುಮಾರ್, ಈ ಹಿಂದೆ ಎರಡು ಗಾಂಜಾ ಕೇಸ್‌ನಲ್ಲಿ ಆರೋಪಿಯಾಗಿದ್ದ. ಸದಾತ್ ಎಂಬುವನ ಹತ್ತಿರ ಮೊಬೈಲ್ ಅಡವಿಟ್ಟಿದ್ದ ಈತ, ಗೆಳೆಯ ಅರುಣ್ ಕುಮಾರ್ ಜತೆಯಲ್ಲಿ ಮೊಬೈಲ್ ಬಿಡಿಸಿಕೊಳ್ಳಲು ಸತ್ಯಸಾಯಿ ನಗರಕ್ಕೆ ಹೋಗಿದ್ದಾಗ ಗಲಾಟೆ ನಡೆದಿದೆ.
ಸಾದತ್, ಸುಹೇಲ್ ಅಲಿಯಾಸ್ ಕೊಲವೇರಿ ಹಾಗೂ ಸಹಚರರು ಚೂರಿಯಿಂದ ನವೀನ್ ಕುಮಾರ್ ಬೆನ್ನಿಗೆ ಎರಡು ಕಡೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ನವೀನ್ ಕುಮಾರ್ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಬಂದು ನೋಡಿದಾಗ ನವೀನ್ ರಕ್ತದ ಮಡುವಿನಲ್ಲಿ ಬಿದಿದ್ದ. ಹೀಗಾಗಿ ಗಾಯಾಳುವನ್ನು ಬೈಕ್‌ನಲ್ಲಿ ಆತನನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಅನ್ಯಕೋಮಿನ ಯುವಕರಿಂದ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಬಳಿ ನೂರಾರು ಹಿಂದು ಯುವಕರು ಜಮಾಯಿಸಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಅಭ್ಯರ್ಥಿ ರುದ್ರೇಶ್ ಮಂಗೋಟೆ ಭೇಟಿ ನೀಡಿ ಪರಿಶೀಲಿಸಿ, ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ | Assault Case: ಕೋರ್ಟ್‌ನಲ್ಲಿ ಹಿರಿಯ ವಕೀಲರಿಗೆ ಚಾಕು ಹಾಕಿದ ಮಹಿಳೆ; ಪರಾರಿ ಆದವಳ ಹುಡುಕಾಟದಲ್ಲಿ ಖಾಕಿ ಪಡೆ
ಕಲಬುರಗಿಯಲ್ಲಿ ಟಿಪ್ಪರ್-ಬೈಕ್ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಅಪಾಯದಿಂದ ಮಗು ಪಾರು
ಕಲಬುರಗಿ: ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ (Road Accident) ನಡೆದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ರಾಮಮಂದಿರ ಬಳಿಯ ಸರ್ವಜ್ಞ ಸ್ಕೂಲ್ ಹತ್ತಿರ ಟಿಪ್ಪರ್ ಹಾಗೂ ದ್ವಿಚಕ್ರ ವಾಹನ ನಡುವೆ ಶುಕ್ರವಾರ ರಾತ್ರಿ ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಸುಜಾತ (35), ರಾಣೋಜಿ(42) ಮೃತ ದಂಪತಿ. ಅಳಂದ ರಸ್ತೆ ಕಡೆ ಹೊರಟಿದ್ದ ಮರಳು ತುಂಬಿದ್ದ ಟಿಪ್ಪರ್ ಹಾಗೂ ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ. ಈ ವೇಳೆ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮೃತರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದಾಗ ಅಪಘಾತ ನಡೆದಿದೆ. ಸ್ಥಳಕ್ಕೆ ಕಲಬುರಗಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದಿರು ತುಂಬುವಾಗ ಲಾರಿ ಪಲ್ಟಿಯಾಗಿ ಚಾಲಕ ಸಾವು
ಕೊಪ್ಪಳ: ತಾಲೂಕಿನ ಹಿರೇಬಗನಾಳ ಬಳಿ ಇರುವ ವನ್ಯ ಸ್ಟಿಲ್ ಕಾರ್ಖಾನೆಯಲ್ಲಿ ಅದಿರು ತುಂಬುವಾಗ ಲಾರಿ ಪಲ್ಟಿಯಾಗಿ ಚಾಲಕ ಸ್ಥಳ ಮೃತಪಟ್ಟಿದ್ದಾನೆ.
ಯಮನೂರಪ್ಪ ಬಿಳೇಬಾವಿ ಮೃತ ಚಾಲಕ. ಅದಿರು ತುಂಬುವಾಗ ವಾಹನ ಪಲ್ಟಿಯಾಗಿದ್ದು, ಅದರಡಿ ಚಾಲಕ ಸಿಲುಕಿದ್ದರಿಂದ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.