ಬೀದರ್: ಕಲ್ಲು ಕೋರೆಯಲ್ಲಿ (Stone quarry) ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ (Youths drowned) ಘಟನೆ ಬೀದರ್ ಜಿಲ್ಲೆಯ (Bidar News) ಚಿಟಗುಪ್ಪಾ ತಾಲೂಕಿನ ಪತ್ನಾಪುರ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಇಸ್ಮಾಯಿಲ್ (21) ಮತ್ತು ಸಮೀರ್ (28) ಮೃತ ದುರ್ದೈವಿಗಳು.
ಈ ಊರಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಿದ ಕೋರೆಗಳಿವೆ. ಮಳೆಯಿಂದಾಗಿ ಅದರಲ್ಲಿ ನೀರು ತುಂಬಿದೆ. ಈ ನೀರಿನಲ್ಲಿ ಈಜಲೆಂದು ಇಳಿದ ಈ ಯುವಕರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲು ಈಜಲೆಂದು ಇಳಿದ ಇಸ್ಮಾಯಿಲ್‌ಗೆ ಈಜು ಬರುತ್ತಿರಲಿಲ್ಲ. ಆತ ನೀರುಪಾಲಾಗಲು ಶುರುವಾದಾಗ ಅವನನ್ನು ಬದುಕಿಸಲು ಸಮೀರ್ ಇಳಿದಿದ್ದಾನೆ. ಆದರೆ, ಅವನು ಕೂಡಾ ಮುಳುಗಿದ್ದಾನೆ. ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಊರಿನ ಜನರು ಮತ್ತು ಪೊಲೀಸರು ಸೇರಿ ಯುವಕರನ್ನು ನೀರಿನಿಂದ ಮೇಲೆತ್ತಿದರು.
ಕೊಪ್ಪಳ ನಗರದಲ್ಲಿ ಗಂಡು ಭ್ರೂಣ ಪತ್ತೆ
ಕೊಪ್ಪಳದ ಬೆಂಕಿ ನಗರ ಆಂಜನೇಯ ದೇವಸ್ಥಾನ ಬಳಿ 7 ತಿಂಗಳ ಗಂಡು ಭ್ರೂಣವೊಂದು ಪತ್ತೆಯಾಗಿದೆ. ಬೆಳಗಿನ ಜಾವ ಯಾರೋ ಈ ಭ್ರೂಣವನ್ನು ಎಸೆದು ಹೋಗಿರುವ ಶಂಕೆ ಇದೆ. ಮಧ್ಯಾಹ್ನದ ಹೊತ್ತಿಗೆ ಇರುವೆಗಳು ಮುತ್ತಿಕೊಂಡ ಸ್ಥಿತಿಯಲ್ಲಿ ಭ್ರೂಣ ಪತ್ತೆಯಾಗಿದೆ. ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಇದು ಯಾರೋ ಹೊರಗಿನಿಂದ ಬಂದು ಎಸೆದುಹೋಗಿರುವ ಭ್ರೂಣವಾಗಿರುವ ಶಂಕೆ ಇದೆ.
ಕೊಪ್ಪಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಭ್ರೂಣವನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು.
ಕೋಲಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಕೊಲೆ
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಗ್ರಾಮ ಪಂಚಾಯಿಸಿ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮಿಣಸಂದ್ರ ಗ್ರಾಮದ ಸದಸ್ಯನಾಗಿರುವ ಅನಿಲ್ ಎಂಬವರೇ ಕೊಲೆ ಯಾಗಿರುವವರು. ಸುಮಾರು 40 ವರ್ಷ ವಯಸ್ಸಿನ ಇವರು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾಗಿದ್ದಾರೆ. ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ತಂಡವೊಂದು ನುಗ್ಗಿ ಬಂದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದೆ.
ಇದು ವೈಯಕ್ತಿಕ ದ್ವೇಷದಿಂದ ನಡೆದ ಕೊಲೆಯೋ ಅಥವಾ ರಾಜಕೀಯ ದ್ವೇಷ ಕಾರಣವೋ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.