Site icon Vistara News

YSV datta | ಪಕ್ಷ ತೊರೆದು ಕಾಂಗ್ರೆಸ್‌ ಸೇರಲಿರುವ ವೈಎಸ್‌ವಿ ದತ್ತಗೆ ಕೊಂಕು ಮಾತಿನ ವಿದಾಯ ಹೇಳಿದ ಜೆಡಿಎಸ್‌!

YSV datta

ಬೆಂಗಳೂರು: ಹಲವು ದಶಕಗಳ ಕಾಲ ಜೆಡಿಎಸ್‌ನಲ್ಲಿದ್ದು, ಪಕ್ಷದ ವಕ್ತಾರರಾಗಿ ಕೆಲಸ ಮಾಡಿದ್ದಲ್ಲದೆ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರರೆಂದೇ ಹೆಸರಾಗಿದ್ದ ಮಾಜಿ ಶಾಸಕ ವೈಎಸ್‌ವಿ ದತ್ತ (YSV datta) ಅವರು ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದಾರೆ. ಈ ಹಂತದಲ್ಲಿ ಜೆಡಿಎಸ್‌ ಅವರಿಗೆ ಕೊಂಕು ಮಾತುಗಳ ವಿದಾಯ ಹೇಳಿದೆ.

ವೈಎಸ್‌ವಿ ದತ್ತ ಪಕ್ಷ ತೊರೆಯುವ ವಿಚಾರದ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ದೇವೇ ಗೌಡರು ದತ್ತ ಅವರನ್ನು ತಂದೆಗಿಂತ ಹೆಚ್ಚು ಸಲುಹಿದ್ದರು. ಆದರೆ, ಅವರು ಮಾತ್ರ ಗೌಡರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದಿದ್ದಾರೆ. ಜತೆಗೆ ಇಂಥ ಡೋಂಗಿ ಮಾನಸ ಪುತ್ರರನ್ನು ಮರೆಯುವುದೇ ಲೇಸು ಎಂದು ವ್ಯಂಗ್ಯವಾಡಿದೆ.

ನಾಲ್ಕು ದಶಕಗಳಿಂದಲೂ ದೇವೇ ಗೌಡರ ಜೊತೆಗಿದ್ದ ವೈಎಸ್‌ವಿ ದತ್ತ ಅವರು ಜನವರಿ 15ರ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಹೊತ್ತಿನಲ್ಲಿ ಜೆಡಿಎಸ್‌ ಟ್ವೀಟ್‌ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ವೈಎಸ್‌ವಿ ದತ್ತಾ ಅವರ ಬಗ್ಗೆ ಜೆಡಿಎಸ್‌ ಮಾಡಿರುವ ಟ್ವೀಟ್‌ಗಳು ಇಲ್ಲಿವೆ
೧. ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು ಆಗಿರುವ ಎಚ್.ಡಿ.ದೇವೇಗೌಡರ ‘ ಮಾನಸಪುತ್ರ ‘ ಎಂದೇ ಖ್ಯಾತಿ ಆಗಿರುವ ವೈ.ಎಸ್.ವಿ ದತ್ತ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ, ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.

೨. ಬಹುತೇಕ ಕಡೆ ದೇವೇಗೌಡರ ‘ಮಾನಸಪುತ್ರ ‘ ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ‘ಮಾನಸಪುತ್ರ ‘ ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತ ಅವರು ಗೌಡರಿಗೆ ಮಾನಸಪುತ್ರ ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ, ದೇವೇಗೌಡರು ಮಾತ್ರ ನಿಜಕ್ಕೂ ದತ್ತ ಅವರನ್ನು ಹೆತ್ತ ತಂದೆಗಿಂತ ಹೆಚ್ಚು ಸಲುಹಿದ್ದರು, ಪೊರೆದಿದ್ದರು.

೩. ಅಂತಹ ದತ್ತ, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ‘ಮಾನಸ ತಂದೆ’ ಯನ್ನು ಮರೆತು, ತೊರೆಯುತ್ತಿದ್ದಾರೆ.

೪. ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ, ವಾತ್ಸಲ್ಯ ಎಲ್ಲವನ್ನೂ ಧಾರೆ ಎರೆದರು. ಆದರೆ, ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ.

೫. ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ, ಪಕ್ಷದ ಎಲ್ಲಾ ನಾಯಕರು, ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ.. ಢೋಂಗಿ ಮಾನಸಪುತ್ರರನ್ನು ಮರೆತರೇ ಲೇಸು… ಅಲ್ಲವೇ?

ಇದನ್ನೂ ಓದಿ | Santro Ravi Case | ರಾಜ್ಯಾದ್ಯಂತ ಸ್ಯಾಂಟ್ರೋ ರವಿ ಪ್ರಭಾವ! ಯುವತಿಗೆ 1.83 ಲಕ್ಷ ಮೌಲ್ಯದ ರ‍್ಯಾಡೋ ವಾಚ್ ಗಿಫ್ಟ್!

Exit mobile version