Site icon Vistara News

Zameer ACB Raid | ಜಮೀರ್‌ ಮನೆ ಮುಂದೆ ಕಾರ್ಯಕರ್ತರ ಪ್ರತಿಭಟನೆ: ಅಕ್ಕಸಾಲಿಗರನ್ನು ಮನೆಗೆ ಕರೆಸಿಕೊಂಡ ಎಸಿಬಿ

Zameer ACB Raid

ಬೆಂಗಳೂರು : ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್‌ ಅವರಿಗೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. 40ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಜಮೀರ್​ ಒಡೆತನದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇದೀಗ ಮನೆಗೆ ಅಕ್ಕಸಾಲಿಗರನ್ನು ಸಹ ಕರೆಸಿಕೊಳ್ಳಲಾಗಿದೆ.

ಕಳೆದ ವರ್ಷ ಇ.ಡಿ. ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದಾದ ಬಳಿಕ ಮತ್ತೆ ಆರು ತಿಂಗಳಿಗೆ ಐಟಿ ದಾಳಿ ಕೂಡ ಮಾಡಲಾಗಿತ್ತು. ಈಗ ಐಟಿ ಹಾಗೂ ಇಡಿ ಕೊಟ್ಟ ಮಾಹಿತಿ ಮೇರೆಗೆ ಎಸಿಬಿ ಕೂಡ ದಾಳಿ ನಡೆಸಿದೆ.

ಮನೆಯಲ್ಲಿ ಪ್ರತಿಯೊಂದು ದಾಖಲೆ ಪರಿಶೀಲನೆ ನಡೆಯುತ್ತಿದೆ. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಜಮೀರ್ ಅಹಮದ್ ಮನೆ ಮುಂದೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾರ್ಯಕರ್ತರನ್ನು ವಾಪಸ್ ಕಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ | Zameer ACB Raid | ₹15 ಕೋಟಿ ಜಾಗದಲ್ಲಿ ₹100 ಕೋಟಿ ಬಂಗಲೆ: ಜಮೀರ್​ಗೆ ಇದೇ ಮುಳುವಾಯ್ತಾ?

ಇದರ ಬಗ್ಗೆ ಜಮೀರ್‌ ಸಹೋದರ ಶಕೀಲ್‌ ಮಾತನಾಡಿ, ʻಎಸಿಬಿ ಅವರವರ ಡ್ಯೂಟಿಯನ್ನು ಮಾಡುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ನಡೆಸುತ್ತಿರುವ ಷಡ್ಯಂತ್ರ. ಇದಕ್ಕೂ ಮೊದಲು ಇಡಿ ಅವರು ಬಂದಿದ್ದರು. ರೇಡ್‌ ಮಾಡಿ ಪರಿಶೀಲನೆ ನಡೆಸಿದ್ದರು. ಆವಾಗಲೂ ಏನೂ ಆಗಿರಲಿಲ್ಲ. ನಾವು ನಮ್ಮ ಪಾಡಿಗೆ ಇದ್ದು, ಪಾರದರ್ಶಕವಾಗಿಯೇ ಇದ್ದೇವೆ. ಈ ವಿಷಯದಲ್ಲಿ ಎಸಿಬಿ ಅವರನ್ನು ನಾನು ದೂರುವುದಿಲ್ಲ. ಆದರೆ, ಇದು ಬಿಜೆಪಿಯ ಷಡ್ಯಂತ್ರವಾಗಿದ್ದು, ಬಿಜೆಪಿಯ ನಾಯಕರ ಮನೆಯ ಮೇಲೆ ದಾಳಿ ಆಗಿದೆಯಾ?ʼ ಎಂದು ಪ್ರಶ್ನಿಸಿದ್ದಾರೆ.

ಜಮೀರ್ ಅಹಮದ್ ಆಪ್ತ ಅಲ್ತಾಫ್ ಖಾನ್ ಮಾತನಾಡಿ , ʻಜಮೀರ್‌ ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಯಾಕೆ ಪದೇಪದೆ ದಾಳಿ ಮಾಡುತ್ತೀರಿ ಎಂದು ಮೋದಿ ಮತ್ತು ಅಮಿತ್‌ಷಾರನ್ನು ಕೇಳಬೇಕು. ಇಲ್ಲಿ ಆತಂಕದ ಪ್ರಶ್ನೆ ಇಲ್ಲ. ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಲಾಗಿದೆ. ಅವರಿಗೆ ಅವರ ತಾತನವರ ಕಾಲದಿಂದಲೂ ಉದ್ಯಮಗಳು ಇವೆ. ಎಸಿಬಿ ದಾಳಿ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಕಾನೂನು ಪ್ರಕಾರ ಮಾಡಲಿ. ಆದರೆ ಇದೆಲ್ಲವೂ ರಾಜಕೀಯ ದುರುದ್ದೇಶದಿಂದ ಕೂಡಿದೆʼ ಎಂದರು.

ಅಕ್ಕಸಾಲಿಗರ ಆಗಮನ

ಇದೀಗ ಎಸಿಬಿ ತಂಡ ಅಕ್ಕಸಾಲಿಗರನ್ನು ಜಮೀರ್‌ ಮನೆಗೆ ಕರೆಸಿಕೊಂಡಿದ್ದಾರೆ. ಚಿನ್ನ, ಬೆಳ್ಳಿ ತೂಕದ ಯಂತ್ರದ ಜತೆಗೆ ಅಕ್ಕಸಾಲಿಗರು ಆಗಮಿಸಿದ್ದು, ಆಭರಣಗಳ ತೂಕವನ್ನು ಮಾಡುವ ಮೂಲಕ ಅವುಗಳ ಲೆಕ್ಕಾಚಾರವನ್ನು ಎಸಿಬಿ ತಂಡ ಹಾಕಲಿದೆ.

ಇದನ್ನೂ ಓದಿ | ‌Zameer ACB Raid | ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್‌ ಖಾನ್ ಮನೆ‌, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

Exit mobile version