ಬೆಳಗಾವಿ: ಎಲ್ಲರಿಗೂ ಸಿಎಂ ಆಗುವ ಆಸೆ ಇದೆ, ಮುಸ್ಲಿಂ ಸಮುದಾಯದವರೂ ಸಿಎಂ ಆಗಬೇಕೆಂದು ಹೇಳಿದ್ದೇನೆ. ಮೊದಲು ಕಾಂಗ್ರೆಸ್ ಪಕ್ಷ, ಆಮೇಲೆ ಸಿದ್ದರಾಮಯ್ಯ ಎಂದಿರುವ ಶಾಸಕ ಜಮೀರ್ ಅಹ್ಮದ್, ಒಕ್ಕಲಿಗರ ಸಮಾವೇಶದಲ್ಲಿ ಸಿಎಂ ಆಗಲು ಬೆಂಬಲ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಎಲ್ಲರೂ ಬಾಯಿಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿ, ಇಂತಹ ಸಮುದಾಯದಿಂದ ಸಿಎಂ ಆಗಬೇಕು ಎಂದು ಮೊದಲು ಚಾಲನೆ ಕೊಟ್ಟವರು ಡಿಕೆಶಿ. ಅವರು ನನ್ನ ಹೆಸರು ಪ್ರಸ್ತಾಪಿಸಿ ಬಾಯಿಮುಚ್ಚಿಕೊಂಡು ಕೆಲಸ ಮಾಡಿ ಎಂದು ಹೇಳಿಲ್ಲ. ನಾನು ಸಿಎಂ ಆಗಬೇಕೆಂದು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು.
ಇದನ್ನೂ ಓದಿ | ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ತಿರುಗಿಬಿದ್ದ ಮಠಾಧೀಶರು
ಮೊದಲು ಕಾಂಗ್ರೆಸ್ ಪಕ್ಷ ಆಮೇಲೆ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಹೇಳಿದಾಗ, ಆಮೇಲೆ ಡಿಕೆಶಿನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದೇ ವಾಕ್ಯವನ್ನು ಪುನರುಚ್ಛರಿಸಿದರು. ಮುಂದುವರಿದು, ಸಿಎಂ ಯಾರು ಎಂದು ನಾವು ಯಾರೂ ತೀರ್ಮಾನ ಮಾಡವುದಕ್ಕಾಗುವುದಿಲ್ಲ. ನಮ್ಮ ಸಂವಿಧಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯ, ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರು ನೆನೆಯುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಒಕ್ಕಲಿಗ ಸಮಾವೇಶದಲ್ಲಿ ಸಿಎಂ ಆಗಲು ಅವಕಾಶ ಕೊಡಿ ಎಂದು ಹೇಳಿದ್ದರು. ಸಿಎಂ ಯಾರಾಗಬೇಕು ಎಂಬುವುದಕ್ಕೆ ಮೊದಲು ಚಾಲನೆ ಕೊಟ್ಟಿದ್ದು ಅವರೇ, ಅದಾದ ಮೇಲೆ ನಾವು ಹೇಳಿದ್ದೇವೆ. ಬಹಳ ಜನರಿಗೆ ಆಸೆ ಇದೆ, ಅದರಲ್ಲಿ ತಪ್ಪೇನಿಲ್ಲ. ಮುಸ್ಲಿಮರು ಜನಸಂಖ್ಯೆ ಶೇ.15 ಇದೆ, ಒಂದೇ ಸಮಾಜದ ಮತಗಳಿಂದ ಮಾತ್ರ ಸಿಎಂ ಆಗಲು ಸಾಧ್ಯವಾಗಲ್ಲ. ಎಲ್ಲ ಸಮಾಜದವರನ್ನು ನಾವು ಜತೆಗೆ ತೆಗೆದುಕೊಂಡು ಹೋಗಬೇಕು ಎಂದರು.
ವ್ಯಕ್ತಿ ಪೂಜೆ ಮಾಡಬಾರದು ಪಕ್ಷ ಪೂಜೆ ಮಾಡಬೇಕೆಂಬ ಡಿಕೆಶಿ ಹೇಳಿಕೆಗೆ ಸ್ಪಂದಿಸಿ, ನಾವೆಲ್ಲ ಪಕ್ಷ ಪೂಜೆ ಮಾಡುತ್ತಿದ್ದೇವೆ, ಜತೆಗೆ ವ್ಯಕ್ತಿ ಪೂಜೆ ಮಾಡಬೇಕಾಗುತ್ತದೆ. ಡಿಕೆಶಿ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ, ಅವರು ನಮ್ಮ ಅಧ್ಯಕ್ಷರು, ಅವರನ್ನು ಬಿಟ್ಟು ನಳಿನ್ ಕುಮಾರ್ ಕಟೀಲ್‌ರನ್ನು ಭೇಟಿಯಾಗಲು ಆಗುತ್ತದೆಯೇ ಎಂದರು.
ಇದನ್ನೂ ಓದಿ | Next CM | ಮತ್ತೆ ಕೇಳಿಸಿದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಗು!