ಬೆಂಗಳೂರು: ಮುಸ್ಲಿಂ ಸಮುದಾಯದ ಬಕ್ರೀದ್ (Eid al Adah) ಪ್ರಯುಕ್ತ ಸಾಮೂಹಿಕವಾಗಿ ಮೈದಾನಗಳಲ್ಲಿ ಪ್ರಾರ್ಥನೆ ಮಾಡುವುದು ಒಂದು ನಡವಳಿಕೆ. ಈ ಆಚರಣೆಯಲ್ಲಿ ಮತ್ತೊಂದು ಪ್ರಮುಖ ಭಾಗವೆಂದರೆ ಪ್ರಾಣಿಗಳ ಕುರ್ಬಾನಿ ಮಾಡಿ ಬಿರಿಯಾನಿ ಮಾಡಿಕೊಂಡು ಸೇವಿಸುವುದು. ಈ ರೀತಿ ವಿಶೇಷವಾಗಿ ತಯಾರಿಸಿದ ಬಿರಿಯಾನಿ ಡಬ್ಬಿ ಸಿಎಂ ಸಿದ್ದರಾಮಯ್ಯ (Siddaramaiah) ಮನೆಗೆ ಬಂದಿತ್ತು.
ಮೊಘಲರು ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಬಿರಿಯಾನಿ ಮಾಡುವ ಕ್ರಮವನ್ನು ರೂಢಿಸಿಕೊಂಡಿದ್ದಾರೆ. ‘ಬಿರಿಯಾನಿ’ ಎಂಬ ಪದವು ಪರ್ಷಿಯನ್ ಪದವಾದ ಬಿರಿಯನ್ ನಿಂದ ಬಂದಿದೆ. ಇದು ದಕ್ಷಿಣ ಏಷ್ಯಾದಲ್ಲಿ ಬಹಳ ಜನಪ್ರಿಯವಾದ ಖಾದ್ಯ. ಭಾರತದ ಎಲ್ಲ ಕಡೆಯಲ್ಲೂ ಈ ಖಾದ್ಯವನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿಯು ಪ್ರಧಾನ ಆಹಾರವಾಗಿದ್ದುದರಿಂದ ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ವಿಭಿನ್ನ ರೀತಿಯ ಬಿರಿಯಾನಿಗಳನ್ನು ಮಾಡಲಾಗುತ್ತದೆ.
ಚಾಮರಾಜಪೇಟೆ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಭಾಗವಹಿಸಿದರು. ಸಿದ್ದರಾಮಯ್ಯ ಜತೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಹ ಇದ್ದರು. ಪ್ರಾರ್ಥನೆ ಮುಗಿಸಿ ಸಿಎಂ ಮನೆಗೆ ತೆರಳಿದರು.
ಸಿಎಂ ಮನೆಗೆ ಮೂರ್ನಾಲ್ಕು ದೊಡ್ಡ ಡಬ್ಬಿಗಳಲ್ಲಿ ಬಿರಿಯಾನಿಯನ್ನು ಜಮೀರ್ ಅಹ್ಮದ್ ಕಳಿಸಿದ್ದರು. ವಿಶೇಷವೆಂದರೆ, ಪ್ಲಾಸ್ಟಿಕ್ ಮೂಟೆಗಳಲ್ಲಿ ಪ್ಯಾಕ್ ಮಾಡಿ ತಂದಿದ್ದ ಬಿರಿಯಾನಿ ಡಬ್ಬಗಳನ್ನು ಆಟೋದಲ್ಲಿ ಕಳಿಸಿದ್ದರು. ಸಿಎಂ ನಿವಾಸಕ್ಕೆ ಆಟೊ ಆಗಮಿಸಿದಾಗ ಪೊಲೀಸರು ತಡೆದರು. ಸಿಎಂ ಮನೆಯೊಳಗೆ ಬಿರ್ಯಾನಿ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಆಟೊ ವಾಪಸಾಯಿತು.
ಆದರೆ ಹೇಗಾದರೂ ಮಾಡಿ ಸಿಎಂ ಮನೆಗೆ ಬಿರಿಯಾನಿ ಕಳಿಸಲೇಬೇಕು ಎಂದು ಜಮೀರ್ ಅಹ್ಮದ್ ನಿರ್ಧಾರ ಮಾಡಿದ್ದರು. ಆಟೋದಲ್ಲಿ ಬಿಡುವುದಿಲ್ಲ ಎಂದರೆ ಏನಂತೆ? ಆಟೋದಲ್ಲಿದ್ದ ಬಿರಿಯಾನಿಯನ್ನು ಜಮೀರ್ ಕಚೇರಿ ಸಿಬ್ಬಂದಿ, ಬೆಂಜ್ ಕಾರಿಗೆ ಶಿಫ್ಟ್ ಮಾಡಿದರು. ಬೆಂಜ್ ಕಾರಿನಲ್ಲಿ ಅದೇ ಬಿರಿಯಾನಿಯನ್ನು ಇಟ್ಟು ಕಳಿಸಿದರು.
ಇದನ್ನೂ ಓದಿ: Viral Video: ಎಂಪೈರ್ ಹೋಟೆಲ್‌ನಲ್ಲಿ 1 ರೂಪಾಯಿಗೆ ಬಿರಿಯಾನಿ ಆಫರ್, ಜನರಿಂದ ನೂಕುನುಗ್ಗಲು, ಗಲಾಟೆ
ಸಿಎಂ ನಿವಾಸಕ್ಕೆ ಎಂಟ್ರಿ ಪಾಸ್ ಇದ್ದ ಕಾರು ಆದ್ಧರಿಂದ ಪೊಲೀಸರು ಮರುಮಾತಾಡದೆ ಬೆಂಜ್ ಕಾರನ್ನು ಒಳಗೆ ಬಿಟ್ಟರು. ಅಲ್ಲಿಗೆ, ಆಟೋದಲ್ಲಿ ತಂದ ಬಿರಿಯಾನಿಯನ್ನು ನಿರಾಕರಿಸಿದ್ದ ಪೊಲೀಸರು ಬೆಂಜ್ ಕಾರಿನಲ್ಲಿ ಬಂದ ಬಿರಿಯಾನಿಯನ್ನು ತಡೆಯಲ ಆಗಲಿಲ್ಲ. ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ವಿಶೇಷ ಬಕ್ರೀದ್ ಬಿರಿಯಾನಿ ಸರಬರಾಜು ಮಾಡುವಲ್ಲಿ ಜಮೀರ್ ಅಹ್ಮದ್ ಯಶಸ್ವಿಯಾದರು.