ಬೆಂಗಳೂರು: ಅಕ್ರಮ ಆಸ್ತಿ ಸಂಗ್ರಹ ಅರೋಪದ ಮೇಲೆ ಇ.ಡಿ. ಮತ್ತು ಎಸಿಬಿ ತನಿಖೆ ಎದುರಿಸುತ್ತಿರುವ ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಶನಿವಾರ ಭ್ರಷ್ಟಾಚಾರ ನಿಗ್ರಹ ದಳದ ವಿಚಾರಣೆಗೆ ಹಾಜರಾದರು.
ಜಮೀರ್ ಅಹಮದ್ ಖಾನ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದಂತೆ ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ತಿಂಗಳುಗಳ ಹಿಂದೆ ಜಮೀರ್ ಅವರಿಗೆ ಸೇರಿದ ಬಂಗಲೆ, ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದರು.
ಈ ವೇಳೆ ಪತ್ತೆಯಾದ ಕೆಲವು ದಾಖಲೆಗಳ ಆಧಾರದಲ್ಲಿ ಇನ್ನೊಂದು ಸುತ್ತಿನ ಮಾಹಿತಿ ಕಲೆ ಹಾಕುವಂತೆ ಇ.ಡಿ. ಅಧಿಕಾರಿಗಳು ಎಸಿಬಿಗೆ ಸೂಚಿಸಿದ್ದರು. ಇದರನ್ವಯ ಜಮೀರ್ ಅವರ ಮನೆ, ಬಂಗಲೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಸಿಕ್ಕಿದ ಇನ್ನಷ್ಟು ಮಾಹಿತಿಗಳ ಆಧಾರದಲ್ಲಿ ವಿವರಣೆ ನೀಡುವಂತೆ ಎಸಿಬಿ ಜಮೀರ್ ಅಹಮದ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು
ಆದರೆ, ಎರಡು ಬಾರಿ ನೋಟಿಸ್ ನೀಡಿದರೂ ಜಮೀರ್ ಅಹಮದ್ ಅವರು ಹಾಜರಾಗಿರಲಿಲ್ಲ. ಕೊನೆಗೆ ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವ ಮುಗಿದ ಬಳಿಕ ಬರುವುದಾಗಿ ಹೇಳಿದ್ದರು.
ಅದರಂತೆ ಶನಿವಾರ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಎಸಿಬಿ ಕಚೇರಿಗೆ ಹಾಜರಾಗಿದ್ದಾರೆ. ತಮ್ಮ ಆಸ್ತಿಗೆ ಸಂಬಂಧಿಸಿ ದಾಖಲೆಗಳನ್ನೂ ತೋರಿಸಬೇಕು ಎಂದು ಎಸಿಬಿ ಸೂಚಿಸಿತ್ತು.
ಎಸಿಬಿ ಕಚೇರಿಯಲ್ಲಿ ಎಸ್ ಪಿ ಯತೀಶ್ ಚಂದ್ರ ಹಾಗೂ ಡಿವೈಎಸ್ ಪಿ ರವಿಶಂಕರ್ ಅವರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ವೇಳೆ ಸಿಕ್ಕ ಮಾಹಿತಿಗಳ ಆಧಾರದಲ್ಲಿ ವಿವರಣೆ ಕೇಳಲಾಗುತ್ತಿದೆ.
ಕೇಳಿದ ದಾಖಲೆ ಎಲ್ಲ ಕೊಟ್ಟಿದ್ದೇನೆ
ಆವತ್ತು ಇ.ಡಿಗೆ ಕೊಟ್ಟಿದ್ದ ದಾಖಲೆಗಳನ್ನೇ ಎಸಿಬಿ ಅಧಿಕಾರಿಗಳಿಗೂ ಕೊಟ್ಟಿದ್ದೇನೆ. ಮತ್ತೆ ವಿಚಾರಣೆಗೆ ಕರೆಯವುದಾಗಿ ಹೇಳಿದ್ದಾರೆ. ಅವಶ್ಯಕತೆ ಇದ್ದಲ್ಲಿ ಮತ್ತೆ ಹಾಜರಾಗುತ್ತೇನೆ ಎಂದು ಎಸಿಬಿ ವಿಚಾರಣೆ ಬಳಿಕ ಜಮೀರ್ ಅಹಮದ್ ಖಾನ್ ಹೇಳಿದರು. ಇ.ಡಿಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಜಮೀರ್ ಅಹಮದ್ ಖಾನ್ ಮಾತ್ರ ಕಾಣಿಸುವುದು ಎಂದು ಕಟಕಿಯಾಡಿದರು.
ಇದನ್ನೂ ಓಡಿ | ಎಸಿಬಿ ವಿಚಾರಣೆಗೆ ಹಾಜರಾಗಲು ಜಮೀರ್ ಹಿಂದೇಟು, ಈಗ ಸಿದ್ದರಾಮೋತ್ಸವ ನೆಪ, 3ನೇ ನೋಟಿಸ್ ರೆಡಿ