Site icon Vistara News

Zika Virus : ರಾಯಚೂರು ಆಯ್ತು ಈಗ ಚಿಕ್ಕಬಳ್ಳಾಪುರದಲ್ಲಿ ಝಿಕಾ ಭೀತಿ!

After Raichur Zika virus detected in Chikkaballapura

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಬಳಿಕ ಜನರಿಗೆ ಮತ್ತೆ ತಲೆನೋವು ಶುರುವಾಗಿದೆ. ನೆರೆಯ ಕೇರಳ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದ ಝಿಕಾ ಸೋಂಕು ಇದೀಗ ಮತ್ತೆ ಕರ್ನಾಟಕಕ್ಕೆ ಕಾಲಿಟ್ಟಿದೆ. ಮೊದಲ ಝಿಕಾ ವೈರಸ್ (Zika virus) ರಾಯಚೂರಿನಲ್ಲಿ ಪತ್ತೆ ಆಗಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ವೈರಸ್‌ ಪತ್ತೆಯಾಗಿದೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ತಲಕಾಯಲಕೊಂಡ ಬಳಿ ಝಿಕಾ ವೈರಸ್ ಪತ್ತೆ ಆಗಿದೆ. ತಲಕಾಯಲಕೊಂಡ ಗ್ರಾಮದ ಬಳಿ ಕೀಟಶಾಸ್ತ್ರಜ್ಞ ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಸೋಂಕು ಕಂಡಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯಕೀಯ ತಪಾಸಣೆ ಮಾಡಿಸುವಂತೆ ವೈದ್ಯರಿಗೆ ಸಲಹೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಎಚ್ಒ‌ ಪ್ರಸ್ತಾಪದ ಬೆನ್ನಲ್ಲೇ ವೈದ್ಯಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ವೆಂಕಟೇಶ್ ಮಾಹಿತಿ ನೀಡಿದ್ದು, ತಲಕಾಯಬೆಟ್ಟ ,ಬಚ್ಚನಹಳ್ಳಿ, ವೆಂಕಟಾಪುರ ದಿಬ್ಬೂರಹಳ್ಳಿ ಗ್ರಾಮಗಳಲ್ಲಿ ಗರ್ಭಿಣಿ‌ರ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ‌ ರವಾನೆ ಮಾಡಲಾಗಿದೆ.

ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಆರು ಕಡೆ ಸೊಳ್ಳೆಗಳ ಪರೀಕ್ಷೆ ನಡೆಸಲಾಗಿತ್ತು ಎಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ. ಸೊಳ್ಳೆಗಳ ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಝಿಕಾ ವೈರಸ್ ಪತ್ತೆಯಾಗಿರುವ ಕುರಿತು ಕೇಂದ್ರ ಕಛೇರಿಯಿಂದ ವರದಿ ಬಂದಿತ್ತು. ಹೀಗಾಗಿ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ನೀಡಿದ್ದೆವು. ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಹಾಗು ಸುತ್ತಮುತ್ತ ಐದು ಗ್ರಾಮಗಳಲ್ಲಿ ಸರ್ವೆ ಮಾಡಿದ್ದೇವೆ. ಐದು ಗ್ರಾಮಗಳಲ್ಲಿ ಮೂವತ್ತು ಗರ್ಭಿಣಿಯರ ರಕ್ತ ಮಾದರಿಯನ್ನು ಲ್ಯಾಬ್ ಕಳುಹಿಸಿದ್ದೇವೆ. ಸದ್ಯ ವರದಿಗಾಗಿ ಕಾಯುತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪೆನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್‌ ಹೆಗ್ಡೆ?

ಏನಿದು ಝಿಕಾ ವೈರಸ್?

ಏಡಿಸ್‌ ಸೊಳ್ಳೆಯಿಂದ ಹರಡುವ ರೋಗವಿದು. ಥೇಟ್‌ ಡೆಂಗ್ಯೂ, ಚಿಕೂನ್ ಗುನ್ಯಾ ಅಥವಾ ಹಳದಿ ಜ್ವರದ ಮಾದರಿಯಲ್ಲಿ ಇದು ಹರಡುತ್ತದೆ. ಈ ಸೊಳ್ಳೆಗಳು ಹೆಚ್ಚಾಗಿ ದಾಳಿ ಮಾಡುವುದು ಹಗಲು ಹೊತ್ತಿನಲ್ಲಿ. ಹಾಗೆಂದು ಅವು ರಾತ್ರಿಯ ಹೊತ್ತು ಕಚ್ಚದೇ ಕರುಣೆ ತೋರುತ್ತವೆ ಎಂದಲ್ಲ! ಇವು ಮನೆಯ ಒಳಗೆ-ಹೊರಗೆ ಎಂಬ ಭೇದವಿಲ್ಲದೆ, ಎಲ್ಲೆಂದರಲ್ಲಿ ಇರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಸೊಳ್ಳೆಯ ಕಡಿತಕ್ಕೆ ಒಳಗಾಗುವಂತಿಲ್ಲ. ‌

ಹಾಗೆಂದು ಸೋಂಕು ಹರಡುವುದಕ್ಕೆ ಇದೊಂದೇ ಮಾರ್ಗವೂ ಅಲ್ಲ. ತಾಯಿಯ ಹೊಟ್ಟೆಯಲ್ಲಿರುವ ಮಗುವಿಗೆ, ಎದೆಹಾಲಿನಿಂದ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ರೋಗ ಹರಡುತ್ತದೆ. ರಕ್ತಪೂರಣದಿಂದ ಹರಡುವ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಖಂಡಿತವಾಗಿಯೂ ಕೋವಿಡ್‌ನಂತೆ ಕೆಮ್ಮು, ಸೀನಿನಿಂದೆಲ್ಲ ಹರಡುವ ರೋಗವಲ್ಲ ಇದು.

ರಕ್ತಪರೀಕ್ಷೆಯಿಂದ ದೇಹದಲ್ಲಿ ವೈರಸ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಒಂದೊಮ್ಮೆ ಪರೀಕ್ಷೆಯಲ್ಲಿ ಝಿಕಾ ವೈರಸ್‌ ಸೋಂಕು ಖಾತ್ರಿಯಾದರೆ, ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕೋವಿಡ್‌ ರೋಗಿಗಳಂತೆ ಅವರನ್ನು 14 ದಿನಗಳ ಕ್ವಾರಂಟೈನ್‌ ಇಡಬೇಕಾದ ಅಗತ್ಯವಿಲ್ಲ. ಸಾಕಷ್ಟು ದ್ರವಾಹಾರ, ವಿಶ್ರಾಂತಿ ಕಡ್ಡಾಯವಾಗಿ ರೋಗಿಗಳಿಗೆ ಬೇಕು. ಮನೆಯ ಎಲ್ಲರೂ ಸೊಳ್ಳೆಪರದೆಯನ್ನು ಬಳಸುವುದು ಅತ್ಯಗತ್ಯ.

ಇದನ್ನೂ ಓದಿ: Karnataka Weather : ಕರಾವಳಿ, ದಕ್ಷಿಣ ಒಳನಾಡಲ್ಲಿ ಮಳೆ ಸಾಧ್ಯತೆ; ಉತ್ತರದಲ್ಲಿ ಒಣ ಹವೆ

ಈ ಮುಂಜಾಗ್ರತಾ ಕ್ರಮ ಅತ್ಯಗತ್ಯ

ಸೊಳ್ಳೆಗಳ ಮೂಲವನ್ನು ಮೊದಲು ನಾಶಪಡಿಸಿ. ನಿಂತ ನೀರಿನಲ್ಲಿ ಏಡಿಸ್‌ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಅಕಾಲಿಕ ಮಳೆಯಿಂದ ಎಲ್ಲೆಂದರೆ ನೀರು ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ. ಅಂಥವು ಮನೆಯ ಸುತ್ತಲೆಲ್ಲೂ ಇಲ್ಲದಂತೆ ನೋಡಿಕೊಳ್ಳಿ.

ತುಂಬು ತೋಳಿನ ಮತ್ತು ಕಾಲಿನ ವಸ್ತ್ರಗಳನ್ನೇ ಧರಿಸಿ. ಸೊಳ್ಳೆಗಳಿಂದ ದೂರವಿರಲು ನಿರೋಧಕ ಕ್ರೀಮ್‌, ಸ್ಪ್ರೇಗಳು ನಿಮಗೆ ಸಹನೀಯವಾದರೆ ಅವುಗಳನ್ನು ಬಳಸಿ. ಶಿಶುಗಳಿದ್ದರೆ, ಅವುಗಳ ತೊಟ್ಟಿಲು, ಹಾಸಿಗೆಗಳಿಗೆ ಅವಶ್ಯವಾಗಿ ಸೊಳ್ಳೆಪರದೆ ಕಟ್ಟಿ. ಸೊಳ್ಳೆಗಳ ಉಪಟಳ ತೀರಾ ಹೆಚ್ಚಿರುವ ಪ್ರದೇಶ ನಿಮ್ಮದಾಗಿದ್ದರೆ ಫಾಗಿಂಗ್‌ ಮಾಡುವುದು ಸಹಕಾರಿ.

ಯಾವುದೇ ಸಾಕು ಪ್ರಾಣಿಗಳಿಗೆ, ಉದಾ- ಮನೆಯ ನಾಯಿ, ಬೆಕ್ಕುಗಳಿಗೆ ಈ ವೈರಸ್‌ ಹರಡಿಲ್ಲ ಅಥವಾ ಈ ಪ್ರಾಣಿಗಳಿಂದ ಮಾನವರಿಗೆ ಹರಡಿದ ಉದಾಹರಣೆಗಳಿಲ್ಲ.

ಝಿಕಾ ವೈರಸ್‌ ಇರುವಂಥ ಸ್ಥಳಗಳಿಗೆ ಅಥವಾ ಸೊಳ್ಳೆಯ ಉಪದ್ರ ಹೆಚ್ಚಿರುವಂಥ ಸ್ಥಳಗಳಿಗೆ ಪ್ರಯಾಣ ಮಾಡುವುದು ಅನಿವಾರ್ಯ ಅಲ್ಲದಿದರೆ, ಪ್ರಯಾಣವನ್ನು ಮುಂದೂಡಿ. ರೋಗ ಲಕ್ಷಣಗಳು ಕಂಡುಬಂದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ. ಈ ರೋಗ ಸಾಮಾನ್ಯವಾಗಿ ಜೀವ ತೆಗೆಯುವಂಥದ್ದಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version