ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ (Zika Virus) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಝಿಕಾ ಸೋಂಕು ಯಾರೊಬ್ಬರಿಗೂ ಕಾಣಿಸಿಕೊಂಡಿಲ್ಲ ಬದಲಿಗೆ ಸೊಳ್ಳೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. 10 ದಿನಗಳ ಹಿಂದಷ್ಟೇ ರಿಪೋರ್ಟ್ ಬಂದಿದೆ. ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಝಿಕಾ ಹಾಗೂ ನಿಫಾ ವೈರಸ್ ಬೇರೆ ಬೇರೆಯಾಗಿವೆ. ನಿಫಾ ಗಂಭೀರ ವೈರಾಣಾಗಿದ್ದರೆ, ಝಿಕಾ ಬಗ್ಗೆ ಭಯ ಬೇಡ.
ಆದರೆ ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು. ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ರೋಗ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಇನ್ನೂ 3 ದಿನಗಳಲ್ಲಿ ರಿಪೋರ್ಟ್ ಬರುವ ಸಾಧ್ಯತೆ ಇದೆ. ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಮಾಡಿರುವುದಕ್ಕೆ ಈಗ ವೈರಸ್ ಪತ್ತೆಯಾಗಿದೆ ಎಂದರು.
ತಲಕಾಯಲಬೆಟ್ಟ ಸುತ್ತ ಹೈ ಅಲರ್ಟ್
ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯಲ್ಲಿ ಝಿಕಾ ವೈರಸ್ ಪತ್ತೆಯಾಗುತ್ತಿದ್ದಂತೆ ಶಿಡ್ಲಘಟ್ಟ ತಾಲೂಕಿನಲ್ಲಿ ವೈದ್ಯಾಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಹಾಸ್ಟೆಲ್‌ಗಳಲ್ಲಿ ರಕ್ತ ಪರೀಕ್ಷೆ ಮಾಡುವಂತೆ ಡಿಎಚ್‌ಓ ಸೂಚನೆ ನೀಡಿದ್ದಾರೆ. ಹೀಗಾಗ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿದ್ದಾರೆ. ತಲಕಾಯಲಬೆಟ್ಟ ಸುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಗ್ರಾಂ.ಪ ಸಿಬ್ಬಂದಿಗೆ ತರಾಟೆ
ತಲಕಾಯಲಕೊಂಡ ಗ್ರಾಮದಲ್ಲಿ ಝಿಕಾ ವೈರಸ್ ಬಗ್ಗೆ ಅರಿವು ಮೂಡಿಸುವ ವೇಳೆ ಗ್ರಾಮಪಂಚಾಯ್ತಿ ಸಿಬ್ಬಂದಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ತಲಕಾಯಲಕೊಂಡ ಗ್ರಾಮದ ಚರಂಡಿಗಳಲ್ಲಿ ಕೊಳಕು ನೀರು ತುಂಬಿ ತಳುಕುತ್ತಿದೆ. ಸ್ವಚ್ಛತೆ ಮಾಡದ ಗ್ರಾಮಪಂಚಾಯ್ತಿ ಸಿಬ್ಬಂದಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಕ್ಕೆ ತಾಲೂಕು ವೈದ್ಯಾಧಿಕಾರಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟು ಐದು ಗ್ರಾಮಗಳಲ್ಲಿ 888 ಮನೆಗಳಲ್ಲಿ ಝಿಕಾ ವೈರಸ್ ನಿಯಂತ್ರಣ ಸಮೀಕ್ಷೆ ಕಾರ್ಯ ನಡೆದಿದೆ. 4, 282 ಜನರನ್ನು ಝಿಕಾ ವೈರಸ್ ಪರೀಕ್ಷೆ ಒಳಪಡಿಸಲಾಗಿದೆ. 60 ವೈದ್ಯಕೀಯ ತಂಡದಿಂದ ವೈರಸ್ ಪತ್ತೆ ಹಚ್ಚುವ ಕಾರ್ಯ ಶುರುವಾಗಿದೆ. ಸುಮಾರು 2183 ಮನೆಗಳಲ್ಲಿ ಝಿಕಾ ಲಾರ್ವ ಸಮೀಕ್ಷೆ ನಡೆದಿದೆ. ಇದರಲ್ಲಿ ನಾಲ್ವರಿಗೆ ಜ್ವರದ ಲಕ್ಷಣಗಳು ಕಂಡು ಬಂದಿದೆ. ಒಟ್ಟು 33 ಮೂರು ಗರ್ಭಿಣಿಯರ ರಕ್ತ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಇಬ್ಬರು ಗರ್ಭಿಣಿಯರಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಹೇಶ್ ಮಾಹಿತಿ ನೀಡಿದ್ದಾರೆ.
ಸೊಳ್ಳೆಗಳಲ್ಲಿ ಸೋಂಕು
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ತಲಕಾಯಲಕೊಂಡ ಬಳಿ ಝಿಕಾ ವೈರಸ್ ಪತ್ತೆ ಆಗಿದೆ. ತಲಕಾಯಲಕೊಂಡ ಗ್ರಾಮದ ಬಳಿ ಕೀಟಶಾಸ್ತ್ರಜ್ಞ ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಸೋಂಕು ಕಂಡಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಾಕ್ಷಣ ವೈದ್ಯಕೀಯ ತಪಾಸಣೆ ಮಾಡಿಸುವಂತೆ ವೈದ್ಯರಿಗೆ ಸಲಹೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿಎಚ್ಒ ಪ್ರಸ್ತಾಪದ ಬೆನ್ನಲ್ಲೇ ವೈದ್ಯಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ವೆಂಕಟೇಶ್ ಮಾಹಿತಿ ನೀಡಿದ್ದು, ತಲಕಾಯಬೆಟ್ಟ ,ಬಚ್ಚನಹಳ್ಳಿ, ವೆಂಕಟಾಪುರ ದಿಬ್ಬೂರಹಳ್ಳಿ ಗ್ರಾಮಗಳಲ್ಲಿ ಗರ್ಭಿಣಿರ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ ರವಾನೆ ಮಾಡಲಾಗಿದೆ ಎಂದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಆರು ಕಡೆ ಸೊಳ್ಳೆಗಳ ಪರೀಕ್ಷೆ ನಡೆಸಲಾಗಿತ್ತು ಎಂದು ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ. ಸೊಳ್ಳೆಗಳ ರಕ್ತ ಮಾದರಿಯನ್ನು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಝಿಕಾ ವೈರಸ್ ಪತ್ತೆಯಾಗಿರುವ ಕುರಿತು ಕೇಂದ್ರ ಕಛೇರಿಯಿಂದ ವರದಿ ಬಂದಿತ್ತು. ಹೀಗಾಗಿ ತಕ್ಷಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾಹಿತಿ ನೀಡಿದ್ದೆವು. ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಹಾಗು ಸುತ್ತಮುತ್ತ ಐದು ಗ್ರಾಮಗಳಲ್ಲಿ ಸರ್ವೆ ಮಾಡಿದ್ದೇವೆ. ಐದು ಗ್ರಾಮಗಳಲ್ಲಿ ಮೂವತ್ತು ಗರ್ಭಿಣಿಯರ ರಕ್ತ ಮಾದರಿಯನ್ನು ಲ್ಯಾಬ್ ಕಳುಹಿಸಿದ್ದೇವೆ. ಸದ್ಯ ವರದಿಗಾಗಿ ಕಾಯುತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ