ಹಾವೇರಿ: ಹಾವೇರಿಯ ಈ ಸಮ್ಮೇಳನ ಸವಾಲಿನದಾಗಿತ್ತು. ಆದರೂ ಇಲ್ಲೇ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ದೈವಸಂಕಲ್ಪ. ಕೊರೊನಾದಿಂದಾಗಿ ಎರಡು ವರ್ಷಗಳು ಸಮ್ಮೇಳನ ನಡೆಯಲಿಲ್ಲ. ಈಗ ಮುಖ್ಯಮಂತ್ರಿಗಳ ನೆಲದಲ್ಲಿ, ಕಸಾಪ ರಾಜ್ಯಾಧ್ಯಕ್ಷನಾದ ನನ್ನ ತವರು ನೆಲದಲ್ಲಿ ಇದು ನಡೆಯುತ್ತಿರುವುದು ಯೋಗಾಯೋಗ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ನಾಡೋಜ ಮಹೇಶ ಜೋಶಿ ಹೇಳಿದರು.
ಹಾವೇರಿಯ ಕನಕ- ಶರೀಫ- ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಡೆದ ಬಳಿಕ ಅವರು ಮಾತನಾಡಿದರು. ಇದೇ ಸಮ್ಮೇಳನ ಒಂದು ವರ್ಷ ಹಿಂದೆ ನಡೆದಿದ್ದರೆ ನಾನು ಪ್ರೇಕ್ಷಕರ ಮಧ್ಯೆ ಕೂತಿರಬೇಕಾಗಿತ್ತು. ನಾನು ಅಧ್ಯಕ್ಷನಾದ ಬಳಿಕ ಆಗುವಂತಾಗಿದೆ. ಈ ಸಮ್ಮೇಳನ ನಡೆಸುವುದು ತುಂಬಾ ಸವಾಲಿನ ಕೆಲಸವಾಗಿತ್ತು. ಕೊರೊನಾದಿಂದಾಗಿ ನಿಂತುಹೋದ ಕನ್ನಡ ಸಮ್ಮೇಳನ ಹಲವು ಅಡೆತಡೆಗಳ ನಂತರ ನಡೆಯುತ್ತಿದೆ. ಇದಕ್ಕಾಗಿ ನಿಯೋಜಿತ ಅಧ್ಯಕ್ಷರಾದ ದೊಡ್ಡರಂಗೇಗೌಡರು ಎರಡು ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದಾರೆ. ಇಂದು ಅವರು ʻತೇರ ಏರಿ ಅಂಬರದಾಗೆ ನಗುವ ನೇಸರನಂತೆʼ ಕಂಗೊಳಿಸುತ್ತಿದ್ದಾರೆ. ಅವರಿಗೆ ನಮನ ಸಲ್ಲುತ್ತವೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಚ್ಚೇವು ಕನ್ನಡದ ದೀಪ ಎಂಬ ಇನ್ನೊಂದು ನಾಡಗೀತೆ
ಸಮ್ಮೇಳನವನ್ನು ಯಶಸ್ವಿಯಾಗಿಸಲು ಎಲ್ಲ ಕನ್ನಡದ ಮನಸ್ಸುಗಳೂ ಒಂದಾಗಬೇಕು. ಇಂದು ಅಡುಗೆಯ ಮನೆಯವರೆಗೆ ಪರಭಾಷೆ ಪ್ರವೇಶಿಸಿದೆ. ಮುಂದಿನ ಪೀಳಿಗೆ ಮಾತೃಭಾಷೆಯನ್ನು ಮರೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ನುಡಿಸಂಸ್ಕೃತಿ ಉಳಿಸಿಕೊಳ್ಳಬೇಕಿದೆ. ಆ ಯತ್ನವನ್ನು ಬಿಂಬಿಸುವ ಸಮ್ಮೇಳನ ಇದಾಗಲಿ. ನಮ್ಮ ಸಿಎಂ ಬೊಮ್ಮಾಯಿ ಅವರಿಗೆ ಕನ್ನಡ ಕೈಗಾರಿಕಾ ನೀತಿ, ಗಡಿನಾಡಿನ ಸಮಸ್ಯೆ ಪರಿಹಾರ, ಕನ್ನಡ ಅನ್ನದ ಭಾಷೆಯಾಗಿಸುವುದು, ಸರ್ಕಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವ ಇಚ್ಛಾಶಕ್ತಿಯಿದೆ. ಹಾವೇರಿಯು ಕನಕದಾಸ, ಶಿಶುನಾಳ ಷರೀಫ, ಗಳಗನಾಥ, ವಿಕೃ ಗೋಕಾಕ, ಸು.ರಂ ಎಕ್ಕುಂಡಿ, ಶಾಂತಕವಿ, ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ ಮುಂತಾದ ಮಹನೀಯರ ನೆಲ. ಅವರ ಆದರ್ಶಗಳಲ್ಲಿ ನಾವು ನಡೆಯೋಣ ಎಂದು ಮಹೇಶ ಜೋಶಿ ನುಡಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯನ್ನು ರಂಗೇರಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ