Site icon Vistara News

ಮಕ್ಕಳ ಕಥೆ: ಮಾವಿನ ಹಣ್ಣು ಹುಡುಕುತ್ತಾ ಬಂದ ಅರಸನಿಗೆ ಕಂಡಿದ್ದೇನು?

kapiraja kids story

ಈ ಕಥೆಯನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2023/09/RajaMattuKapiraja.mp3

ಒಂದಾನೊಂದು ಕಾಡು. ಆ ಕಾಡಲ್ಲೊಂದು ನದಿ ಹರಿಯುತಿತ್ತು. ಆ ನದಿಯಂಚಿಗೆ ದೊಡ್ಡ ಮಾವಿನ ಮರವೊಂದಿತ್ತು. ಹಣ್ಣಿನ ಋತುವಿನಲ್ಲಿ ಅದರಲ್ಲಿ ಕೆಂಪಾದ ರಸಭರಿತ ಮಾವಿನ ಹಣ್ಣುಗಳು ಇರ್ತಾಯಿದ್ದವು. ಆ ಮರದ ಸುತ್ತಲಿನ ಪ್ರದೇಶದಲ್ಲಿ ಮಂಗಗಳ ದೊಡ್ಡ ಹಿಂಡೊಂದು ವಾಸವಾಗಿತ್ತು. ಆ ಹಿಂಡಿಗೆ ಬೃಹತ್ ಗಾತ್ರದ ಗಡವ ಕೋತಿಯೊಂದು ರಾಜನಾಗಿತ್ತು. ತನ್ನ ಪ್ರಜೆಗಳನ್ನು ಅದು ಪ್ರೀತಿಯಿಂದ ನೋಡಿಕೊಳ್ಳುತ್ತಿತ್ತು. ಮರಿಮಂಗ, ಹಿರಿಮಂಗ ಸಹಿತ ಎಲ್ಲರ ಕಾಳಜಿ ಮಾಡುತ್ತಿತ್ತು.

ಹೊಳೆಯಂಚಿಗಿದ್ದ ಮಾವಿನ ಮರದಿಂದ ಒಂದೂ ಹಣ್ಣು ಹೊಳೆಗೆ ಬೀಳದಂತೆ ಎಚ್ಚರಿಕೆ ವಹಿಸಬೇಕೆಂದು ಅದು ತನ್ನ ಪ್ರಜೆಗಳಿಗೆ ಪದೇಪದೆ ಹೇಳುತ್ತಿತ್ತು. ಹೊಳೆ ನೀರಿಗೆ ಹಣ್ಣು ಬಿದ್ದರೇನು ಸಮಸ್ಯೆ ಎಂದರೆ- ಆ ಹಣ್ನು ನೀರಿನಲ್ಲಿ ತೇಲಿಕೊಂಡು ಹೋಗಿ ಯಾವುದಾದರೂ ಊರು ತಲುಪುತ್ತದೆ; ಮನುಷ್ಯರ ಕೈ ಸೇರುತ್ತದೆ; ಆ ಹಣ್ಣನ್ನು ಹುಡುಕಿಕೊಂಡು ಅವರು ಕಾಡಿಗೆ ಬರುತ್ತಾರೆ; ಆಗ ಕಾಡಿನಲ್ಲಿರುವ ಪ್ರಾಣಿಗಳಿಗೆ ಉಳಿಗಾಲವಿಲ್ಲ- ಇದು ಕಪಿರಾಜನ ನಿಲುವಾಗಿತ್ತು. ಹಾಗಾಗಿ ಹಣ್ಣು ನೀರಿಗೆ ಬೀಳದಂತೆ ಎಲ್ಲ ಕಪಿಗಳೂ ಎಚ್ಚರಿಕೆ ವಹಿಸುತ್ತಿದ್ದವು.

ಒಮ್ಮೆ ಜೋರು ಮಳೆ ಬಂತು. ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಇತ್ತು. ಅದು ಮಾವಿನ ಹಣ್ಣಿನ ಕಾಲವೂ ಆಗಿದ್ದರಿಂದ, ಗಾಳಿಯ ರಭಸಕ್ಕೆ ನಾಲ್ಕಾರು ಹಣ್ಣುಗಳು ಹೊಳೆ ನೀರಿನಲ್ಲಿ ಕೊಚ್ಚಿಹೋದವು. ಹಾಗೆ ಹೋದಂಥ ಹಣ್ಣುಗಳಲ್ಲಿ ಒಂದೆರಡು ಹಣ್ಣುಗಳು ನದಿಯಾಚೆಯ ದಡ ತಲುಪಿದವು. ಆಚೆ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಅಗಸನೊಬ್ಬನಿಗೆ ಒಂದು ಹಣ್ಣು ಸಿಕ್ಕಿತು. ನೋಡುವುದಕ್ಕೆ ಕೆಂಪಗೆ ಆಕರ್ಷಕವಾಗಿದ್ದ ಈ ಹಣ್ಣನ್ನು ತಾನು ತಿನ್ನದೆ, ಊರಿನ ರಾಜನಿಗೆ ಆತ ಕಾಣಿಕೆಯಾಗಿ ನೀಡಿದ.

ಆ ಹಣ್ಣನ್ನು ಸವಿದ ರಾಜನಿಗೆ ಇಂಥ ಅದ್ಭುತವಾದ ಮಾವು ಇನ್ನಷ್ಟು ಬೇಕು ಎನಿಸಿತು. ಅಗಸನನ್ನು ಆತ ಕರೆಸಿ ಕೇಳಿದಾಗ, ತನಗದು ಹೊಳೆ ದಡದಲ್ಲಿ ಸಿಕ್ಕಿದ್ದಾಗಿ ತಿಳಿಸಿದ.ಹೊಳೆಯಂಚಲ್ಲೇ ಎಲ್ಲೋ ಈ ಹಣ್ಣಿನ ಮರ ಇರಬೇಕೆಂದು ತರ್ಕಿಸಿದ ರಾಜನ ಭಟರು ಈವರೂರಿನ ದಂಡೆಯನ್ನೆಲ್ಲಾ ಹುಡುಕಾಡಿದರು. ಆದರೆ ಅಷ್ಟು ಸಿಹಿಯಾದ ಮಾವಿನ ಹಣ್ಣಿನ ಮರ ಕಾಣಲಿಲ್ಲ. ಹಾಗಾದರೆ ಇನ್ನೊಂದು ದಡದಲ್ಲಿ ಇರಬೇಕೆಂದು ತರ್ಕಿಸಿದ ರಾಜ, ತನ್ನ ಭಟರು ಮತ್ತು ಈಜುಗಾರರ ಪಡೆಯೊಂದಿಗೆ ತಾನೇ ಹೊರಟ.

ಎರಡು ದೊಡ್ಡ ದೋಣಿಗಳಲ್ಲಿ ಮನುಷ್ಯರು ಹೊಳೆದಾಟಿ ತಮ್ಮ ಕಾಡಿನತ್ತ ಬರುವುದು ಕಪಿಗಳಿಗೆ ಕಾಣಿಸಿತು. ಇದನ್ನು ಕಂಡು ಆತಂಕಗೊಂಡ ವಾನರರು, ತಮ್ಮ ರಾಜನಿಗೆ ವಿಷಯ ತಿಳಿಸಿದರು. ಅವರ ಮಾವಿನ ಮರವನ್ನೇ ಹುಡುಕುತ್ತಿರಬಹುದು ಎಂದು ಅಂದಾಜಿಸಿದ ಕಪಿರಾಜ, ಎಲ್ಲಾ ಮಂಗಗಳನ್ನೂ ಹೊಳೆಯಾಚೆಯ ಕಾಡಿಗೆ ಸಾಗಿಸಲು ತೀರ್ಮಾನಿಸಿದ. ಚುರುಕಾಗಿ ಒಂದಿಷ್ಟು ಬಳ್ಳಿಗಳನ್ನು ತಂದು, ಒಂದಕ್ಕೊಂದು ಬಿಗಿದು, ಉದ್ದ ಹಗ್ಗವನ್ನಾಗಿ ಮಾಡಿ, ಹೊಳೆಯಾಚೆಯ ಮರದ ರೆಂಬೆಗೆ ಬಿಗಿದ. ಈ ದಡದಲ್ಲಿದ್ದ ಒಂದೊಂದೇ ಕಪಿಗಳನ್ನು ಆ ಬಳ್ಳಿಗಳ ಹಗ್ಗದ ಮೂಲಕ ಆಚೆ ದಡಕ್ಕೆ ರವಾನಿಸಲಾಯಿತು. ಇದಕ್ಕೆ ಕಪಿರಾಜ ತಾನೇ ಉಸ್ತುವಾರಿ ವಹಿಸಿ ಓಡಾಡುತ್ತಿದ್ದ. ಮರಿಕಪಿ, ಹಿರಿಕಪಿಗಳನ್ನು ಅತ್ಯಂತ ಜಾಗ್ರತೆಯಿಂದ ಸಾಗಿಸಲಾಯಿತು.

ದೋಣಿಯಲ್ಲಿ ಹೊಳೆ ದಾಟುತ್ತಿದ್ದ ಅರಸನ ಮಂಗಗಳ ಹಗ್ಗದ ನಡಿಗೆಯನ್ನು ಗಮನಿಸಿದ. ಇಂಥದ್ದೊಂದು ವಿಚಿತ್ರವನ್ನು ಆತ ಹಿಂದೆಂದೂ ಕಂಡಿರಲಿಲ್ಲ. ಕಪಿಗಳು ಹೀಗೇಕೆ ಮಾಡುತ್ತಿವೆ ಎಂಬುದು ಅಲ್ಲಿದ್ದ ಯಾರಿಗೂ ಅರ್ಥವಾಗದೆ ಈ ವಿದ್ಯಮಾನವನ್ನೇ ಗಮನಿಸತೊಡಗಿದರು. ದೊಡ್ಡ ಗಾತ್ರದ ಗಡವವೊಂದು ಎಲ್ಲರನ್ನೂ ಸಂಭಾಳಿಸುತ್ತಿದೆ ಎನ್ನುವುದು ಅವರ ಕಣ್ಣಿಗೆ ಬಿತ್ತು. ಆ ಹಿಂಡಿನ ನಾಯಕನಿರಬೇಕು ಅದು ಎಂದು ರಾಜ ತೀರ್ಮಾನಿಸಿದ. ದೋಣಿಯಲ್ಲೇ ಕೂತು ಮುಂದೇನಾಗುತ್ತದೆ ಎಂಬುದನ್ನು ಆತ ವೀಕ್ಷಿಸುತ್ತಿದ್ದ.

ಎಲ್ಲಾ ಕಪಿಗಳೂ ಆಚೆ ದಡ ದಾಟಿದ್ದವು, ರಾಜನ ಹೊರತಾಗಿ. ಅಷ್ಟರಲ್ಲಾಗಲೇ ನೂರಾರು ಕಪಿಗಳು ದಾಟಿದ್ದರಿಂದ ಬಳ್ಳಿಯ ಹಗ್ಗ ಬಲ ಕಳೆದುಕೊಂಡಿತ್ತು. ಜೊತೆಗೆ ಕಪಿರಾಜನ ಗಾತ್ರವೂ ದೊಡ್ಡದಾಗಿದ್ದರಿಂದ, ಬಳ್ಳಿಯ ಆಧಾರದಿಂದ ಹೊಳೆ ದಾಟುತ್ತಿರುವಾದಲೇ ಆ ಹಗ್ಗ ಹರಿದುಬಿತ್ತು. ಕಪಿರಾಜ ನೀರಿಗೆ ಬಿದ್ದ. ಇದನ್ನೆಲ್ಲಾ ನೋಡುತ್ತಿದ್ದ ಅರಸ, ಕೋತಿಯನ್ನು ರಕ್ಷಿಸುವಂತೆ ತನ್ನ ಈಜುಗಾರರಿಗೆ ಆದೇಶಿಸಿದ. ಮಂಗರಾಜನ ಜೀವ ಉಳಿಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಬೆಸ್ತನಿಗೆ ಬಂದ ಭಾಗ್ಯ

“ಕೋತಿಯೇ! ನಿನ್ನ ಸಾಹಸವನ್ನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದೆ. ಎಲ್ಲರನ್ನೂ ರಕ್ಷಿಸಿ ಕಡೆಯದಾಗಿ ನಿನ್ನ ಸುರಕ್ಷೆಯ ಬಗ್ಗೆ ನೀನು ಗಮನ ನೀಡಿದ್ದು ನನಗೆ ಮೆಚ್ಚುಗೆಯಾಗಿದೆ. ದಣಿದಂಥ ನೀನು ಕೆಲವು ದಿನಗಳು ನಮ್ಮ ಅರಮನೆಯಲ್ಲಿ ವಿಶ್ರಮಿಸಬಹುದು” ಎಂದು ಹೇಳಿದ ಅರಸ. “ಅರಸನೇ, ನಿನ್ನ ಮೆಚ್ಚುಗೆಗೆ ನಾ ಆಭಾರಿ. ನನ್ನ ಪ್ರಜೆಗಳ ಸುರಕ್ಷತೆಯ ಬಗ್ಗೆ ಗಮನ ನೀಡುವುದು ರಾಜನಾಗಿ ನನಗೆ ಕರ್ತವ್ಯ. ಅದನ್ನೇ ಮಾಡಿದ್ದೇನಷ್ಟೆ. ನಿನ್ನ ಅರಮನೆಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಆದರೆ ನನ್ನವರ ಬಿಟ್ಟು ನಾ ಬರಲಾರೆ. ಅವರ ಯೋಗಕ್ಷೇಮ ಹೊರತಾಗಿ ನನಗೆ ಬೇರೆ ಧ್ಯಾನವಿಲ್ಲ” ಎಂಬ ಮಾತುಗಳು ಕಪಿರಾಜ ಬಾಯಿಂದ ಬಂದವು.

“ಆದರೆ ನೀವೆಲ್ಲಾ ನಿನ್ನೊಂದು ದಡಕ್ಕೆ ಹೋಗುತ್ತಿರುವುದೇಕೆ?” ಕೇಳಿದ ಅರಸ.

“ಮಾನವರು ಬಂದಲ್ಲೆಲ್ಲಾ ಪ್ರಾಣಿಗಳ ಶಾಂತಿ ಕದಡುವುದು ಸಾಮಾನ್ಯ. ಹಾಗಾಗಿ ನನ್ನ ಹಿಂಡಿನ ಶಾಂತಿ, ನೆಮ್ಮದಿಗೆ ಭಂಗ ಬಾರದಿರಲೆಂದು ಈ ಕೆಲಸ ಮಾಡಬೇಕಾಯಿತು” ಎಂದಿತು ಕೋತಿ.

“ಆಕೃತಿಯಲ್ಲಿ ವಾನರನಾದ ನಿನ್ನಿಂದ ಕಲಿಯುವುದಕ್ಕೆ ಬಹಳಷ್ಟಿದೆ. ಕಾಡಿನ ಜಾಗದಲ್ಲಿದ್ದ ಮಾವಿನ ಹಣ್ಣಿನ ಆಸೆಗೆ ಬಂದವನೇ ಹೊರತು ನಿಮ್ಮ ನೆಮ್ಮದಿ ಹಾಳು ಮಾಡುವ ಉದ್ದೇಶವಿಲ್ಲ. ಆದರೆ ಅದು ನಿಮ್ಮ ಜಾಗ. ಅದರಲ್ಲಿರುವುದನ್ನು ನಿಮ್ಮಿಂದ ಕಸಿಯುವುದು ಸರಿಯಲ್ಲ. ಹಾಗಾಗಿ ನಿಮ್ಮ ಜಾಗ ನಿಮಗೇ ಇರಲಿ” ಎನ್ನುತ್ತಾ ಮರಳಿ ಹೊರಡಲು ಅನುವಾದ ರಾಜ. “ಒಂದು ಕ್ಷಣ ನಿಲ್ಲಿ” ಎನ್ನುತ್ತಾ ಮಾವಿನ ಮರದತ್ತ ಜಿಗಿಯಿತು ಕಪಿರಾಜ.

ಅಲ್ಲಿಂದ ಮರಳಿ ಬರುವಾಗ ಒಂದಿಷ್ಟು ರುಚಿಯಾದ ಮಾವಿನ ಹಣ್ಣುಗಳನ್ನು ತಂದು ರಾಜನಿಗೆ ಒಪ್ಪಿಸಿತು. ರಾಜ ಸಂತೋಷದಿಂದ ಮರಳಿ ಹೋದ. ರಾಜನಿಗೆ ಹಣ್ಣೂ ಸಿಕ್ಕಿತು, ಮಂಗಗಳಿಗೆ ನೆಮ್ಮದಿಯೂ ಉಳಿಯಿತು.

ಇದನ್ನೂ ಓದಿ: ಮಕ್ಕಳ ಕಥೆ: ಹೆಬ್ಬೆಟ್ಟಿನ ಹುಡುಗ

Exit mobile version