Site icon Vistara News

ಮಕ್ಕಳ ಕಥೆ: ಹೆಬ್ಬೆಟ್ಟಿನ ಹುಡುಗ

Thumb Boy

ಒಂದೂರಿನಲ್ಲಿ ಬಡಗಿಯೊಬ್ಬನಿದ್ದ. ಸುತ್ತಲಿನ ಹತ್ತೂರಿನವರಿಗೆ ಬೇಕಾದ ಮರದ ಕೆಲಸಗಳನ್ನು ಮಾಡಿಕೊಟ್ಟು ಆತ ಸುಖದಿಂದ ಜೀವನ ನಡೆಸುತ್ತಿದ್ದ. ಆದರೆ ಆತನಿಗೆ ಮಕ್ಕಳಿರಲಿಲ್ಲ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ ಆಡುವುದಕ್ಕೊಂದು ಮಗುವಿದ್ದರೆ ಒಳ್ಳೆಯದಿತ್ತು ಎಂದು ಆತನ ಹಂಬಲಿಸುತ್ತಿದ್ದ. ಆತನ ಹೆಂಡತಿ ಒಂದು ದಿನ ಅಡುಗೆ ಮಾಡುತ್ತಾ ಇದ್ದವಳು, ಬಡಗಿಯೊಂದಿಗೆ ಇದೇ ಮಾತನ್ನು ಹೇಳಿದಳು. “ಒಂದು ಹೆಬ್ಬೆಟ್ಟಿನಷ್ಟು ಚಿಕ್ಕ ಮಗುವಾದ್ರೂ ಇದ್ದಿದ್ರೆ, ಮನಸ್ಸಿನ ಬೇಸರ ಹೋಗ್ತಾ ಇತ್ತು” ಎಂದಳು. ಅದೇ ಹೊತ್ತಿಗೆ ಇವರ ಮನೆಯ ಸುತ್ತಲೇ ಅಡ್ಡಾಡುತ್ತಿದ್ದ ಕಿನ್ನರಿಯೊಬ್ಬಳಿಗೆ ಈ ಮಾತು ಕೇಳಿಸಿತು. ಅವಳಿಗೆ ಈ ಮಾತು ಏನೆಂದು ಅರ್ಥವಾಯಿತೊ ಗೊತ್ತಿಲ್ಲ, “ಹೆಬ್ಬೆಟ್ಟಿನಷ್ಟು ದೊಡ್ಡ ಮಗು ಬೇಕೇ ನಿಮಗೆ…? ತಗೊಳ್ಳಿ!” ಎನ್ನುತ್ತಾ ಹೆಬ್ಬಿಟ್ಟಿನಷ್ಟೇ ದೊಡ್ಡ ಮಗುವನ್ನು ಬಡಗಿಯ ಕೈಯಲ್ಲಿಟ್ಟು ಹೊರಟುಹೋದಳು.

ತೀರಾ ಪುಟ್ಟದಾಗಿದ್ದ ಆ ಮಗು ಅಷ್ಟೇ ಮುದ್ದಾಗಿಯೂ ಇತ್ತು. ಬಡಗಿ ದಂಪತಿಗೆ ಸಂತೋಷವಾಯಿತು. ಕೈಯ ಹಿರಿ ಬೆರಳಿನಷ್ಟೇ ದೊಡ್ಡದಾಗಿದ್ದ ಆ ಮಗುವಿಗೆ ಹಿರಿಯಣ್ಣ ಎಂದು ಹೆಸರಿಟ್ಟರು. ಆದರೆ ಇವರ ಮಗುವನ್ನು ನೋಡಲು ಬಂದ ಊರಿನ ಜನರೆಲ್ಲಾ ಅದನ್ನು ಹೆಬ್ಬೆಟ್ಟು ಹುಡುಗ ಎಂದೇ ಕರೆದರು.

ಆ ಮಗುವಿಗೆ ಎಷ್ಟೇ ಒಳ್ಳೆಯ ಆಹಾರ, ಹಾಲು, ಹಣ್ಣುಗಳನ್ನೆಲ್ಲಾ ನೀಡಿದರೂ ಆತನ ಎತ್ತರ ಹೆಚ್ಚು ಬೆಳೆಯಲೇ ಇಲ್ಲ. ಆದರೆ ಆರೋಗ್ಯವಾಗಿದ್ದ ಆತ ಜಾಣನಾಗಿದ್ದ. ಒಮ್ಮೆ ಹೀಗಾಯ್ತು- ಕಾಡಿಗೆ ಕಟ್ಟಿಗೆ ಕಡಿಯುವುದಕ್ಕೆಂದು ಬಡಗಿ ಹೊರಟಿದ್ದ. ಆದರೆ ಆತನ ಕುದುರೆ ಗಾಡಿ ಸಿದ್ಧವಾಗಿರಲಿಲ್ಲ. “ಅಯ್ಯೋ, ಇನ್ನೂ ತಡ ಮಾಡಿದರೆ ಬಿಸಿಲಾಗುತ್ತದೆ. ಆದರೆ ಇನ್ನೂ ಗಾಡಿಯೇ ಸಿದ್ಧಗೊಂಡಿಲಲ್ಲ. ಗಾಡಿ ಇಲ್ಲದಿದ್ದರೆ ಅಷ್ಟೊಂದು ಕಟ್ಟಿಗೆಯನ್ನು ತರಲಾಗದು” ಎಂದು ಚಿಂತಿಸುತ್ತಿದ್ದಾಗ ಹೆಬ್ಬೆಟ್ಟಿನ ಹುಡುಗ ಬಂದ. “ಅಪ್ಪಾ, ಚಿಂತೆ ಮಾಡಬೇಡ. ನೀವು ಕಾಡಿಗೆ ಹೋಗಿರಿ, ಕುದುರೆ ಗಾಡಿಯನ್ನು ನಾನು ತರುತ್ತೇನೆ” ಎಂದ. ಅಪ್ಪನಿಗೆ ಅಚ್ಚರಿಯಾಯಿತು. “ನೀ ಹೇಗೆ ತರುತ್ತೀ ಮಗೂ? ಗಾಡಿಯ ಮೇಲೆ ಏರುವುದಕ್ಕೇ ಆಗದು ನಿನಗೆ! ಏರಿದರೂ ಕುದುರೆಯನ್ನು ಹೇಗೆ ನಿಯಂತ್ರಿಸುತ್ತೀಯೆ?” ಎಂದು ಕೇಳಿದ ಬಡಗಿ. “ಗಾಡಿ ಸಿದ್ಧ ಮಾಡಿದ ಮೇಲೆ ನನ್ನನ್ನೆತ್ತಿ ಕುದುರೆಯ ಕಿವಿಯಲ್ಲಿ ಇರಿಸುವಂತೆ ಅಮ್ಮನಿಗೆ ಹೇಳುತ್ತೇನೆ” ಎಂದ ಹುಡುಗ. ಹುಡುಗನ ಚುರುಕು ಬುದ್ಧಿಗೆ ತಂದೆ ಖುಷಿ ಪಟ್ಟರೂ, ಒಂದೊಮ್ಮೆ ಎಡವಟ್ಟಾದರೆ… ಎಂದು ಆತಂಕವೂ ಆಯಿತು. “ಆತಂಕ ಬೇಡಪ್ಪಾ. ನಾನು ಎಲ್ಲವನ್ನೂ ಸರಿಯಾಗಿಯೇ ನಿಭಾಯಿಸುತ್ತೇನೆ” ಎಂದ ಹೆಬ್ಬೆಟ್ಟಿನ ಹುಡುಗ. ತಂದೆ ಕಾಡಿನತ್ತ ತೆರಳಿದ.

ತಾಯಿಯ ನೆರವಿನಿಂದ ಕುದುರೆಯ ಕಿವಿಯಲ್ಲಿ ಕೂತು, ಅದಕ್ಕೆ ನಿರ್ದೇಶನ ನೀಡಿದ ಹುಡುಗ. ತುಂಬಾ ದಿನಗಳಿಂದ ಆತನ ಧ್ವನಿ ಕೇಳಿ ಅಭ್ಯಾಸವಿದ್ದ ಕುದುರೆ, ತನಗೆ ನೀಡಿದ ಆಜ್ಞೆಯಂತೆ ಕಾಡಿನತ್ತ ನಡೆಯಲಾರಂಭಿಸಿತು. ಇದೇ ಸಮಯದಲ್ಲಿ ಯಾವುದೋ ಊರಿನ ಇಬ್ಬರು ಕಳ್ಳರು ಆ ದಾರಿಯಲ್ಲಿ ಕುದುರೆ ಮೇಲೆ ಹೋಗುತ್ತಿದ್ದರು. ಎದುರಿನಿಂದ ಬಂದ ನಿರ್ಜನ ಕುದುರೆ ಗಾಡಿಯನ್ನು ಕಂಡು ಅವರಿಬ್ಬರಿಗೂ ಆಶ್ಚರ್ಯವಾಯಿತು. ತಾವು ಕುಳಿತಿದ್ದರೂ ತಮ್ಮ ಕುದುರೆಗಳು ಕೆಲವೊಮ್ಮೆ ಹೇಳಿದ ಮಾತು ಕೇಳುವುದಿಲ್ಲ. ಅಂಥದ್ದರಲ್ಲಿ ಸಾರಥಿ ಇಲ್ಲದಿದ್ದರೂ, ಈ ಕುದುರೆ ಹೇಗೆ ತನ್ನಷ್ಟಕ್ಕೆ ಗಾಡಿ ಎಳೆಯುತ್ತಿದೆ ಎಂದು ಕುತೂಹಲವೂ ಹುಟ್ಟಿಕೊಂಡಿತು. ಈ ಗಾಡಿಯನ್ನು ಹಿಂಬಾಲಿಸಲಾರಂಭಿಸಿದರು. ಕಾಡಿನ ಒಂದು ಜಾಗಕ್ಕೆ ಹೋಗಿ ಗಾಡಿಯನ್ನು ನಿಲ್ಲಿಸಿತು ಕುದುರೆ. ಅಲ್ಲಿದ್ದ ವ್ಯಕ್ತಿಯೊಬ್ಬ ಬಂದು, ಕುದುರೆಯ ಕಿವಿಯಿಂದ ಪುಟಾಣಿ ಪುಟ್ಟನೊಬ್ಬನನ್ನು ಇಳಿಸಿಕೊಂಡ.

ಇದನ್ನೆಲ್ಲಾ ನೋಡುತ್ತಿದ್ದ ಕಳ್ಳರಿಗೆ ಒಂದು ಉಪಾಯ ಹೊಳೆಯಿತು. ತಾವು ಕಳ್ಳತನವನ್ನೂ ಇವನ ನೆರವಿನಿಂದಲೇ ಮಾಡಬಹುದಲ್ಲ; ಅದಕ್ಕಾಗಿ ಆ ಪುಟ್ಟ ಹುಡುಗನನ್ನು ಖರೀದಿ ಮಾಡಿದರೆ ಹೇಗೆ ಎಂದು! ತಕ್ಷಣ ಇಬ್ಬರೂ ಬಡಗಿಯನ್ನು, “ಈ ಹುಡುಗನನ್ನು ಮಾರುವುದಾದರೆ ನಾವು ಕೊಂಡುಕೊಳ್ಳುತ್ತೇವೆ. ಎಷ್ಟು ಬೆಲೆ ಕೊಡಬೇಕು?” ಎಂದು ಕೇಳಿದರು. ಬಡಗಿಗೆ ಕೋಪ ಬಂತು.

ಇದನ್ನೂ ಓದಿ : ಮಕ್ಕಳ ಕಥೆ: ಬೆಸ್ತನಿಗೆ ಬಂದ ಭಾಗ್ಯ

“ಹಾಗೆಲ್ಲಾ ಮಾರುವುದಕ್ಕೆ ಈತ ನನ್ನ ಮಗ” ಎಂದು ಕಿರುಚಿದ. ಆದರೆ ಬಡಗಿಯ ಕಿವಿಯಲ್ಲಿ ಒಂದಿಷ್ಟು ಉಪಾಯಗಳನ್ನು ಪಿಸುಗುಟ್ಟಿದ ಹೆಬ್ಬೆಟ್ಟಿನ ಹುಡುಗ. ತಕ್ಷಣ ಕಳ್ಳರ ಮಾತಿಗೆ ಒಪ್ಪಿದ ಬಡಗಿ, ಸಿಕ್ಕಾಪಟ್ಟೆ ಬೆಲೆ ಹೇಳಿದ. ಆತನ ಬೆಲೆಗೆ ಒಪ್ಪಿದ ಕಳ್ಳರು, ಹುಡುಗನನ್ನು ಖರೀದಿಸಿದರು. ಅವನೊಡನೆ ಒಂದಿಷ್ಟು ದೂರ ಹೋದ ಮೇಲೆ ಆಯಾಸ ಪರಿಹಾರಕ್ಕಾಗಿ ಒಂದು ಮರದ ಕೆಳಗೆ ಕುಳಿತರು. ಕೂತಲ್ಲೇ ಇಬ್ಬರಿಗೂ ತೂಕಡಿಕೆ ಹತ್ತಿತು.
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಹೆಬ್ಬೆಟ್ಟಿನ ಹುಡುಗ, ಆ ಮರದಲ್ಲಿದ್ದ ಸಣ್ಣ ಪೊಟರೆಯೊಂದನ್ನು ಹೊಕ್ಕು ಅಡಗಿ ಕುಳಿತ. ಎಚ್ಚರವಾದ ಮೇಲೆ, ಕಳ್ಳರಿಬ್ಬರೂ ಈ ಹುಡುಗನಿಗಾಗಿ ಎಲ್ಲ ಕಡೆ ಹುಡುಕಾಡಿದರು. ಬರುವ ದಾರಿಯಲ್ಲೇ ಆತ ಬಿದ್ದು ಹೋದನೋ ಅಥವಾ ಏನಾದನೋ ಎಂಬುದು ಇವರಿಗೆ ಗೊತ್ತಾಗಲಿಲ್ಲ. ಎಷ್ಟು ಹುಡುಕಿದರೂ ಈ ಪುಟ್ಟ ಹುಡುಗನನ್ನು ಪತ್ತೆ ಮಾಡಲೇ ಅವರಿಗೆ ಆಗಲಿಲ್ಲ. ಕುದುರೆ ಗಾಡಿಯಿದ್ದ ಜಾಗಕ್ಕೆ ಮರಳಿ ಹೋದರೆ, ಬಡಗಿ ಅಲ್ಲಿಂದ ಹೊರಟು ಹೋಗಿದ್ದ. ಆತ ಯಾವ ಊರಿನವ, ಎಲ್ಲಿಗೆ ಹೋದ ಎಂಬುದೂ ಇವರಿಗೆ ತಿಳಿಯದೆ ನಿರಾಶೆಯಿಂದ ಮರಳಿದರು. ಅವರು ಅಲ್ಲಿಂದ ತೆರಳಿದ ಮೇಲೆ ಪೊಟರೆಯಿಂದ ಹೊರಬಂದ ಹುಡುಗ ನಿಧಾನಕ್ಕೆ ತನ್ನ ಮನೆಗೆ ಮರಳಿದ. ತಂದೆ-ತಾಯಿಯ ಜೊತೆ ಸುಖವಾಗಿದ್ದ.

Exit mobile version