Site icon Vistara News

ಮಕ್ಕಳ ಕಥೆ : ಒಂಟೆ ಮತ್ತು ಜೀಬ್ರಾದ ಗೆಳೆತನ

Zebra and camel
https://vistaranews.com/wp-content/uploads/2023/10/WhatsApp-Audio-2023-10-07-at-11.15.19-AM.mp3


ಮರುಭೂಮಿಯಿಂದ ಸ್ವಲ್ಪ ದೂರದಲ್ಲಿ ಹಸುರಾದ ಹುಲ್ಲುಗಾವಲಿತ್ತು. ಆ ವಿಸ್ತಾರವಾದ ಹುಲ್ಲುಗಾವಲಿನಲ್ಲಿ ಜೀಬ್ರಾವೊಂದು ವಾಸಿಸುತ್ತಿತ್ತು. ಅದಕ್ಕೆ ಪಕ್ಕದ ಮರುಭೂಮಿಯಲ್ಲಿ ವಾಸಿಸುವ ಒಂಟೆಯೊಂದು ಸ್ನೇಹಿತನಾಗಿತ್ತು. ಇಬ್ಬರೂ ಬಾಲ್ಯದಲ್ಲೇ ಭೇಟಿಯಾಗಿ ಆಡುತ್ತಾ ಬೆಳೆದಿದ್ದರಿಂದ ಆತ್ಮೀಯ ಗೆಳೆಯರಾಗಿದ್ದವು. ವಾರದಲ್ಲಿ ನಾಲ್ಕಾರು ಬಾರಿ ಭೇಟಿಯಾಗಿ ಹರಟೆ ಹೊಡೆಯುತ್ತಿದ್ದವು. ತಂತಮ್ಮ ಅನುಭವಕ್ಕೆ ಬಂದ ಮೋಜಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದವು.

ಜೀಬ್ರಾಗೆ ತನ್ನ ಬಗ್ಗೆ ಬಹಳ ಹೆಮ್ಮೆಯಿತ್ತು. ಚಂದದ ಕಪ್ಪು-ಬಿಳಿ ಪಟ್ಟೆಯ ಕೋಟು ತನ್ನ ಮೈಮೇಲಿದೆ. ಒಂಟೆಯಂತೆ ಕೊಳಕಾದ ಮಣ್ಣು ಬಣ್ಣದ ಮೈಯಲ್ಲ ತನ್ನದು; ದೇಹದ ಆಕೃತಿ ತೀಡಿದಂತೆ ಶಿಸ್ತಾಗಿದೆ, ವಿಚಿತ್ರವಾದ ಡುಬ್ಬ ಬೆನ್ನಿಲ್ಲ ತನಗೆ; ಮೈಯ ಚರ್ಮ ಮಿರಿಮಿರಿ ಮಿಂಚುತ್ತಿದೆ, ಕೂದಲು ತುಂಬಿಕೊಂಡಿಲ್ಲ. ಭಯವಾಗುವಷ್ಟು ಉದ್ದನೆಯ ರೆಪ್ಪೆಯಿಲ್ಲದೆ, ಸುಂದರ ಕಣ್ಣುಗಳಿವೆ ಎಂದೆಲ್ಲಾ ಒಳಗೊಳಗೇ ಜಂಬವಿತ್ತು. ʻಮಣ್ಣಲ್ಲಿ, ಮರಳಲ್ಲಿ ಆಡೋಣ ಬಾʼ ಎಂದು ಒಂಟೆ ಹಲವಾರು ಬಾರಿ ಜೀಬ್ರಾವನ್ನು ಕರೆದಿತ್ತು. ʻಅಯ್ಯೋ, ಇಲ್ಲಪ್ಪ. ನಾ ಬರಲ್ಲ. ನನ್ನ ಚಂದದ ಕೋಟೆಲ್ಲಾ ಮಣ್ಣಾಗಿ ಬಿಡುತ್ತದೆ. ಮಿರಿಮಿರಿ ಮಿಂಚುವ ಚರ್ಮವೆಲ್ಲಾ ಕೊಳಕಾಗಿ ಹೋಗುತ್ತದೆʼ ಎಂದು ಹೇಳಿತ್ತು ಜೀಬ್ರಾ. ಒಂಟೆಯೇನೂ ಹೆಚ್ಚು ಬೇಸರ ಮಾಡಿಕೊಳ್ಳದೆ ಸುಮ್ಮನಿತ್ತು.

ಆ ವರ್ಷ ಆ ಪ್ರಾಂತ್ಯಕ್ಕೆಲ್ಲಾ ಬರಗಾಲ ಬಂತು. ಹುಲ್ಲುಗಾವಲಿನಲ್ಲಿ ದೂರ ದೂರದವರೆಗೆ ಎಲ್ಲೂ ನೀರು ದೊರೆಯದೆ ಪರದಾಡುವ ಸ್ಥಿತಿ ಉಂಟಾಯಿತು. ಹುಲ್ಲುಗಾವಲಿನ ಉಳಿದೆಲ್ಲಾ ಪ್ರಾಣಿಗಳಂತೆಯೇ ಜೀಬ್ರಾ ಸಹ ಕಂಗಾಲಾಯಿತು. ಒಂಟೆಯ ಜೊತೆಗಿನ ಭೇಟಿಯಲ್ಲಿ ತನ್ನ ಆತಂಕವನ್ನು ಹಂಚಿಕೊಂಡಿತು. ʻನೀರಿಲ್ಲದಿದ್ದರೆ ಬದುಕೋದು ಹೇಗೆ? ಇಲ್ಲಿಂದ ತುಂಬಾ ದೂರ ನಡೆದ ಮೇಲೆ ಸ್ವಲ್ಪ ನೀರಿರೊ ಕೆರೆ ಇದೆಯಂತೆ. ಏನು ಮಾಡೋದು ಗೊತ್ತಾಗ್ತಿಲ್ಲʼ ಎಂದು ದುಗುಡದಿಂದ ಹೇಳಿತು.

ಆದರೆ ಒಂಟೆ ನಿರಾತಂಕವಾಗಿತ್ತು. ಬರಗಾಲದಿಂದ ಉಂಟಾಗುವ ಕಷ್ಟಗಳ ಬಗ್ಗೆ ಅದರ ಮುಖದಲ್ಲಿ ಯಾವ ಬೇಸರವೂ ಇರಲಿಲ್ಲ. ʻನಮಗೇ ನೀರಿಲ್ಲ ಅಂದಮೇಲೆ, ಮರುಭೂಮಿಯಲ್ಲಿ ನಿಮಗಿನ್ನೂ ಕಷ್ಟತಾನೆ?ʼ ಕೇಳಿತು ಜೀಬ್ರಾ. ʻಮಳೆಯಿಲ್ಲದ್ದು, ನೀರಿಲ್ಲದಿರುವುದು ನಮಗೆ ಮಾಮೂಲಿ. ಅದಕ್ಕೆ ಆತಂಕವೆಲ್ಲಾ ಇಲ್ಲʼ ಎಂದಿತು ನಗುತ್ತಾ. ಜೀಬ್ರಾ ಮುಖದಲ್ಲಿ ಚಿಂತೆಯ ಗೆರೆಗಳು ಹೋಗಲಿಲ್ಲ.

ʻಮರುಭೂಮಿಯಲ್ಲಿ ನೀರುಣಿಸುವ ಒಯಸಿಸ್‌ಗಳಿವೆ. ನಾವು ನೀರು ಬೇಕೆನಿಸಿದಾಗ ಅಲ್ಲಿಗೆ ಹೋಗುತ್ತೇವೆ. ನಿನ್ನನ್ನೂ ಬೇಕಿದ್ದರೆ ಕರೆದೊಯ್ಯುತ್ತೇನೆʼ ಎಂದಿತು ಒಂಟೆ. ಆದರೆ ಆ ಸುಡುಬಿಸಿಯಾದ ಮರಳಿನಲ್ಲಿ ನಡೆಯುವುದು ಹೇಗೆ? ಮರಳು ಗಾಳಿ ಬೀಸಿದರೆ ಅದನ್ನು ತಡೆದುಕೊಳ್ಳುವುದು ಹೇಗೆ ಎಂಬ ಚಿಂತೆ ಜೀಬ್ರಾಗೆ.

ʻನಮ್ಮ ದೇಹ ಜೀಬ್ರಾಗಳಂತೆ ತಿದ್ದಿ-ತೀಡಿದಂತಿಲ್ಲ, ನಿಜ. ಆದರೆ ಬಿಸಿ ಮರಳಿನಲ್ಲಿ ನಡೆಯಲು ಅನುಕೂಲವಾಗುವ ಹಾಗಿದೆ. ಬೆನ್ನಿನ ಮೇಲಿರುವ ಡುಬ್ಬಿನಿಂದಲೇ ತಿಂಗಳುಗಟ್ಟಲೆ ನಾವು ನೀರು ಕುಡಿಯದೆಯೂ ಬದುಕಿರುವುದು. ನಮ್ಮ ಚರ್ಮ, ಕಣ್ಣು ರೆಪ್ಪೆಗಳೆಲ್ಲಾ ಮರಳು ಗಾಳಿಯನ್ನು ತಡೆಯುವುದಕ್ಕೆಂದೇ ಹೀಗಿವೆ. ಮರಳುಗಾಡಿನಲ್ಲಿ ಬದುಕುವುದಕ್ಕೆ ನಮ್ಮಂತೆ ಇದ್ದರೆ ಮಾತ್ರವೇ ಸಾಧ್ಯʼ ಎಂದಿತು ಒಂಟೆ. ಜೀಬ್ರಾಗೆ ತನ್ನ ತಪ್ಪಿನ ಅರಿವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

ʻಮರಳುಗಾಡಿನಲ್ಲಿ ಹಗಲಿಗೆ ಬಿಸಿ ಇದ್ದಂತೆಯೇ ರಾತ್ರಿ ತಂಪಾಗುತ್ತದೆ. ರಾತ್ರಿಯ ವೇಳೆ ನಿನ್ನನ್ನು ಒಯಸಿಸ್‌ ಬಳಿಗೆ ಕರೆದೊಯ್ಯುತ್ತೇನೆ. ಬೇಕಷ್ಟು ನೀರು ಕುಡಿದು, ದೂರದ ನೀರಿರುವ ಕೆರೆಯತ್ತ ಹೊರಡು. ಬರಗಾಲ ಕಳೆದ ಮೇಲೆ ಮರಳಿ ಬಾʼ ಎಂದಿತು ಒಂಟೆ. ಮಿತ್ರನ ಒಳ್ಳೆಯತನಕ್ಕೆ ಸಂತೋಷಪಟ್ಟ ಜೀಬ್ರಾ, ಒಂಟೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿತು.

Exit mobile version