Site icon Vistara News

ಮಕ್ಕಳ ಕಥೆ: ಜಾಣ ಮುಂಗುಸಿ

Childern Story
http://vistaranews.com/wp-content/uploads/2023/08/WhatsApp-Audio-2023-08-26-at-4.42.43-PM.mp3

ಅದು ದೊಡ್ಡದೊಂದು ಕಾಡು. ಆ ಕಾಡಿನ ಮರವೊಂದರ ಮೇಲೆ ಚೆಂದದ ಹಸಿರು ಮೈಯ, ಕೆಂಪು ಕೊಕ್ಕಿನ ಗಿಳಿಯೊಂದು ಗೂಡು ಕಟ್ಟಿಕೊಂಡಿತ್ತು. ಆ ಗೂಡೊಳಗೆ ಎರಡು ಮೊಟ್ಟೆಗಳನ್ನಿಟ್ಟು ಅವುಗಳಿಗೆ ಕಾವು ಕೊಟ್ಟು ಆರೈಕೆ ಮಾಡುತ್ತಿತ್ತು. ಕೆಲವೇ ದಿನಗಳಲ್ಲಿ ಎರಡು ಮುದ್ದಾದ ಮರಿಗಳು ಮೊಟ್ಟೆಯೊಡೆದು ಹೊರಬಂದವು. ಗಿಳಿಯಮ್ಮನ ಪುಟ್ಟ ಗೂಡು ಮರಿಗಳ ಕಲರವದಿಂದ ತುಂಬಿಹೋಯಿತು. ಅವುಗಳಿಗೆ ಆಹಾರ ತರುವುದಕ್ಕೆ ಅಮ್ಮ ಗಿಳಿ ಹೊರಗೆ ಹೋದಾಗೆಲ್ಲಾ ಮರಿಗಳು ತಾವಿಬ್ಬರೇ ಗೂಡಲ್ಲಿ ಇರುತ್ತಿದ್ದವು. ಅಮ್ಮ ಗಿಳಿ ಬರುತ್ತಲೇ ಖುಷಿಯಿಂದ ರೆಕ್ಕೆಯಡಿ ಸೇರುತ್ತಿದ್ದವು.

ಆ ದಿನವೂ ಎಂದಿನಂತೆ ಆಹಾರ ಅರಸಿಕೊಂಡು ಮನೆಗೆ ಹಿಂದಿರುಗಿತು ಗಿಳಿಯಮ್ಮ. ನೋಡಿದರೆ… ಗೂಡು ಖಾಲಿ! ಅರೆ, ತನ್ನ ಮರಿಗಳೆಲ್ಲಲಿ ಹೋದವು ಎಂದು ಸುತ್ತೆಲ್ಲಾ ಹುಡುಕಾಡಿತು. ಗಿಳಿ ಮರಿಗಳ ಪುಕ್ಕಗಳು ಅಲ್ಪಸ್ವಲ್ಪ ಬಂದಿದ್ದವೇ ಹೊರತು ಹಾರುವಷ್ಟು ರೆಕ್ಕೆ ಬಲಿತಿರಲಿಲ್ಲ. ಹಾಗಾಗಿ ಎಲ್ಲಿ ಹೋದವು ತನ್ನ ಮಕ್ಕಳು ಎಂದು ಚಿಂತಿಸುತ್ತಾ ಹುಡುಕುತ್ತಿರುವಾಗ, ಗೂಡಿನ ಮರದಡಿಯ ಮಣ್ಣಿನಲ್ಲಿ ಸಿಂಹದ ಹೆಜ್ಜೆ ಗುರುತುಗಳು ಕಂಡವು. ವಿಷಯವೇನು ಎಂಬುದು ಗಿಳಿಯಮ್ಮನಿಗೆ ಅರಿವಾಯಿತು. ತನ್ನೆಲ್ಲಾ ಧೈರ್ಯವನ್ನು ಒಗ್ಗೂಡಿಸಿಕೊಂಡು ಸಿಂಹದ ಗುಹೆಯತ್ತ ಹಾರಿತು.
ಗುಹೆಯೊಳಗೆ ಸಿಂಹದ ಎದುರಿಗೆ ಗಿಳಿಮರಿಗಳು ಕುಳಿತಿದ್ದವು. ಅವಕ್ಕೆ ತಮ್ಮೆದುರಿಗಿರುವ ಅಪಾಯದ ಅರಿವೇ ಇರಲಿಲ್ಲ. ಆದರೆ ಗುಹೆಯ ಬಾಗಿಲಿಗೆ ಗಿಳಿಯಮ್ಮ ಬಂದಿದ್ದು ಸಿಂಹಕ್ಕೂ ಸ್ವಲ್ಪವೂ ಇಷ್ಟವಾಗಲಿಲ್ಲ. ಅದರತ್ತ ಕೆಂಗಣ್ಣು ಬೀರಿತು. ಹೆದರದ ಗಿಳಿಯಮ್ಮ ತನ್ನ ಮಕ್ಕಳನ್ನು ಹಿಂದಿರುಗಿಸಬೇಕು ಎಂದು ಕಾಡಿನ ರಾಜನನ್ನು ಕೇಳಿಕೊಂಡಿತು. ʻಇಲ್ಲಿ ನಿನ್ನ ಮಕ್ಕಳು ಯಾರೂ ಇಲ್ಲ. ಇವೆರಡೂ ನನ್ನವು, ನನ್ನ ಮಕ್ಕಳು. ತೊಲಗಿಲ್ಲಿಂದʼ ಎಂದು ಅಬ್ಬರಿಸಿತು ಸಿಂಹ. ದೈರ್ಯ ಒಗ್ಗೂಡಿಸಿಕೊಂಡ ಗಿಳಿಯಮ್ಮ, ʻಕಾಡಿನ ಪ್ರಾಣಿಗಳಲ್ಲಿ ನ್ಯಾಯ ಕೇಳೋಣ. ಅವೆಲ್ಲಾ ಈ ಮರಿಗಳು ನಿನ್ನ ಮಕ್ಕಳು ಎಂದರೆ ನಿನಗೇ ಬಿಟ್ಟುಕೊಡುತ್ತೇನೆʼ ಎಂದಿತು. ಸಿಂಹ ಒಪ್ಪಿಕೊಂಡಿತು.

ಸಿಂಹರಾಜನಿಗೆ ಧೈರ್ಯವಿತ್ತು. ಹೇಗಿದ್ದರೂ ಕಾಡಿನ ಪ್ರಾಣಿಗಳು ತನ್ನ ವಿರುದ್ಧ ಮಾತನಾಡಲಾರವು ಎಂದು. ಹಾಗೆಯೇ ಆಯಿತು. ಸಿಂಹದ ಬಳಿಯಿದ್ದ ಮರಿಗಳು ಗಿಳಿಯವು ಎಂಬುದು ಗೊತ್ತಿದ್ದರೂ, ಕಾಡಿನ ರಾಜನ ಎದುರು ಮಾತಾಡಲು ಯಾರೂ ಸಿದ್ಧರಾಗಲಿಲ್ಲ. ಆದರೆ ಮುಂಗುಸಿಗೆ ರಾಜನ ವರ್ತನೆ ಇಷ್ಟವಾಗಲಿಲ್ಲ. ʻಹೀಗೆ ಯಾರದ್ದಾದರೂ ಮರಿಗಳನ್ನು ಅಪಹರಿಸಿಕೊಂಡು ಬಂದು ತನ್ನವು ಎನ್ನಬಹುದೇ? ರಾಜನೇ ಹೀಗಾದರೆ ನಾಳೆ ಎಲ್ಲರೂ ಇದನ್ನೇ ಮಾಡಬಹುದಲ್ಲʼ ಎಂದು ಯೋಚಿಸಿದ ಮುಂಗುಸಿ, ಉಪಾಯವೊಂದನ್ನು ಸೂಚಿಸಿತು. ಅಂದು ರಾತ್ರಿ ತನ್ನ ಬಿಲದ ಬಳಿಯಿಂದ ಸಿಂಹದ ಗುಹೆಯ ಎದುರಿನವರೆಗೂ ಸುರಂಗವೊಂದನ್ನು ಕೊರೆಯಿತು. ಬಿಲದ ಬಳಿಯಲ್ಲಿನ ಸುರಂಗದ ಬಾಯನ್ನು ಒಣ ಎಲೆಗಳಿಂದ ಮುಚ್ಚಿತು.

ಮರುದಿನ ಕಾಡಿನ ಪ್ರಾಣಿಗಳಿಗೆಲ್ಲಾ ಸಿಂಹರಾಜನ ಗುಹೆಯ ಮುಂದೆ ಸೇರಿದವು. ತನ್ನ ಮರಿಯನ್ನು ಸಿಂಹ ಅಪಹರಿಸಿರುವುದಾಗಿ ಗಿಳಿ ಹೇಳಿದಾಗ ಮರಿ ತನ್ನವೇ ಎಂದು ವಾದಿಸಿತು ಸಿಂಹ. ಇದು ಅನ್ಯಾಯ ಎಂಬುದನ್ನು ಉಳಿದ ಪ್ರಾಣಿಗಳು ತಿಳಿದಿದ್ದರೂ ಗಿಳಿಯ ಪರವಾಗಿ ಯಾರೂ ಮಾತಾಡಲು ಒಪ್ಪಲಿಲ್ಲ. ಈ ಸಮಯಕ್ಕೆ ಮಾತಾಡಿದ ಮುಂಗುಸಿ, “ಕೂದಲುಗಳಿರುವ ಪ್ರಾಣಿಗೆ ಪುಕ್ಕಗಳಿರುವ ಮರಿಗಳು ಹುಟ್ಟಿದ್ದನ್ನು ಎಲ್ಲಾದರೂ ನೋಡಿದ್ದೀರಾ?” ಎಂದು ಕಾಡಿನ ಪ್ರಜೆಗಳನ್ನು ಪ್ರಶ್ನಿಸಿತು. ಎಲ್ಲರೂ ಇಲ್ಲವೆಂದರು ಒಕ್ಕೊರಲಿನಿಂದ. “ಹಾಗಾದರೆ ಕೂದಲುಗಳಿರುವ ಸಿಂಹಕ್ಕೆ ಪುಕ್ಕಗಳಿರುವ ಮರಿ ಇರುವುದಕ್ಕೆ ಸಾಧ್ಯವೇ?” ಎಂದು ಮುಂಗುಸಿ ಪ್ರಶ್ನಿಸಿತು. ಸಾಧ್ಯವಿಲ್ಲ ಎಂಬ ಧ್ವನಿ ಪ್ರಾಣಿಗಳಿಂದ ಬಂತು. ಮರಿಗಳನ್ನು ಗಿಳಿಯಮ್ಮನಿಗೆ ಹಿಂದಿರುಗಿಸುವುದು ಸಿಂಹಕ್ಕೆ ಅನಿವಾರ್ಯವಾಯಿತು.

ಇದನ್ನೂ ಓದಿ : ಮಕ್ಕಳ ಕಥೆ: ತಿಂಡಿಪೋತ ಇಲಿ ಮರಿ ಭಾಗ 2

ಈಗದರ ಕೋಪ ತಿರುಗಿದ್ದು ಮುಂಗುಸಿಯ ಮೇಲೆ. ಅದನ್ನು ಹಿಡಿಯಲು ಯತ್ನಿಸುವಷ್ಟರಲ್ಲೇ ಛಂಗನೆ ಸುರಂಗದೊಳಗೆ ನೆಗೆದ ಮುಂಗುಸಿ, ಕಾಡಿನ ಇನ್ನೊಂದು ತುದಿಯಲ್ಲಿದ್ದ ತನ್ನ ಬಿಲವನ್ನು ಸುರಕ್ಷಿತವಾಗಿ ಸೇರಿತು. ಬುದ್ಧಿವಂತ ಮುಂಗುಸಿಯಿಂದಾಗಿ ಗಿಳಿಯಮ್ಮನಿಗೆ ತನ್ನ ಮರಿಗಳು ಮರಳಿ ದೊರೆತವು.

Exit mobile version