Site icon Vistara News

ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

Animal Holyday
https://vistaranews.com/wp-content/uploads/2023/09/WhatsApp-Audio-2023-09-16-at-2.21.59-PM.mp3

ಅಂದು ಬೆಳಗ್ಗೆಯೇ ರಾಜು ರೈತನ ತೋಟದ ಕೋಳಿಗಳೆಲ್ಲಾ ಸಭೆ ಸೇರಿದ್ದವು. ಆ ಕೋಳಿಗಳ ಮುಖಂಡನ ಸ್ಥಾನದಲ್ಲಿ ನಿಂತು, ತನ್ನ ದೊಡ್ಡ ರೆಕ್ಕೆಗಳನ್ನು ಅಗಲಿಸುತ್ತಾ ಏರುಶ್ರುತಿಯಲ್ಲಿ ಮಾತಾಡುತ್ತಿತ್ತು ಕೆಂಪಿಕೋಳಿ. “ನನ್ನ ಪ್ರೀತಿಯ ಕುಕ್ಕುಟ ಬಾಂಧವರೇ! ಈ ವಾರ ನಾವೆಲ್ಲರೂ ಸಿಕ್ಕಾಪಟ್ಟೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಕೆಲವರು ಮಾಡಿದ ಕೆಲಸ ಹೆಚ್ಚಾಗಿ, ಬಸವಳಿದು ಬೆಂಡಾಗಿ, ರೆಕ್ಕೆ-ಪುಕ್ಕಗಳೆಲ್ಲಾ ಉದುರಿ ಹೋಗುವಷ್ಟಾಗಿದ್ದಾರೆ. ಹಾಗಾಗಿ ಇನ್ನೊಂದು ವಾರ ನಾವೆಲ್ಲಾ ಕೆಲಸಕ್ಕೆ ರಜೆ ತೆಗೆದುಕೊಳ್ಳಲಿದ್ದೇವೆ” ಎಂಬ ಕೆಂಪಿಕೋಳಿಯ ಮಾತಿಗೆ ಉಳಿದ ಕೋಳಿಗಳೆಲ್ಲಾ ಖುಷಿಯಿಂದ ರೆಕ್ಕೆ ಬಡಿದವು.

ಅಲ್ಲಿಯೇ ಮೇಯುತ್ತಿದ್ದ ಹಸುಗಳಿಗೆ ಕೋಳಿಗಳ ವ್ಯವಹಾರ ಕಂಡು ಅಚ್ಚರಿಯಾಯಿತು. ಇದ್ದಕ್ಕಿದ್ದಂತೆ ತಿಂಡಿ ಬುಟ್ಟಿಗಳನ್ನೆಲ್ಲ ತುಂಬಿಸಿಕೊಂಡು, ಮಕ್ಕಳು ಮರಿಗಳನ್ನೆಲ್ಲಾ ದಬ್ಬಿಕೊಂಡು ಈ ಕೋಳಿಗಳು ಹಳ್ಳದತ್ತ ಯಾಕಾಗಿ ಹೋಗುತ್ತಿವೆ ಎಂಬ ಕುತೂಹಲ ತಡೆಯಲಾಗದ ಹಸುಗಳು, ಕೋಳಿಗಳನ್ನು ಅಡ್ಡಗಟ್ಟಿದವು. “ಎಲ್ಲೋ ಹೊರಟಂಗಿದೆ ಎಲ್ಲರೂ” ಎಂಬ ಹಸುಗಳ ಮಾತಿಗೆ, “ಹೂಂ, ನಾವೆಲ್ಲಾ ಇನ್ನೊಂದು ವಾರ ರಜ ತಗೊಂಡಿದ್ದೀವಿ. ಅದ್ಕೆ ಹಳ್ಳದ ದಂಡೆಗೆ ಪಿಕ್‌ನಿಕ್‌ ಹೋಗ್ತಿದ್ದೀವಿ” ಎಂದವು ಕೋಳಿಗಳು. “ನಿಮಗ್ಯಾಕೆ ರಜ? ಯಾರ್ಕೊಟ್ಟೋರು?” ಕೇಳಿದವು ಹಸುಗಳು.
“ಈಗ ಮಳೆಗಾಲ ಅಲ್ವಾ… ಬೆಳಗ್ಗೆ ಯಾರೂ ಎಷ್ಟೊತ್ತಾದ್ರೂ ಏಳೋದೇ ಇಲ್ಲ. ಎಲ್ಲರನ್ನೂ ಎಬ್ಬಿಸೋಕೆ ಅಂತೆ ಬೆಳಗ್ಗೆ ಅರಚೀಅರಚಿ ಇಡಬೇಕು. ಅದೂ ಅಲ್ದೆ ಈ ತಿಂಗಳು ಯದ್ವಾತದ್ವಾ ಮೊಟ್ಟೆ ಇಟ್ಟಿದೀವಿ. ಎಷ್ಟೊತ್ತು ಕೂತ್ಕೋಬೇಕು ಗೊತ್ತಾ ಕಾವು ಕೊಡೋದಕ್ಕೆ. ಆಮೇಲೆ ಈ ಮರಿಗಳನ್ನು ಬೇರೆ ನೋಡ್ಕೋಬೇಕು… ಉಸ್ಸಪ್ಪಾ! ಅದ್ಕೆ ಈ ವಾರ ಪೂರ್ತಿ ರಜೆ ಹಾಕಿದ್ದೀವಿ” ಅಂದವು ಕೋಳಿಗಳು. ಹಸುಗಳಿಗೆ ಹೌದು ಅನಿಸಿತು.

ಅಷ್ಟರಲ್ಲಿ ಹಸುಗಳ ಗುಂಪಿನಲ್ಲಿದ್ದ ಬೆಳ್ಳಿ ಹಸು ತಕರಾರು ತೆಗೆಯಿತು. “ಏನು ಅವರು ಮಾತ್ರ ಕೆಲಸ ಮಾಡೋದಾ? ನಾವ್ಯಾರೂ ಮಾಡಲ್ವಾ? ಹೊತ್ತು ಹೊತ್ತಿಗೆ ಒಂದೊಂದ್‌ ಬಕೀಟು ಹಾಲು ಕೊಡೋದಕ್ಕೆ ಅಂತ ರಾಶಿಗಟ್ಟಲೆ ತಿನ್ನಬೇಡ್ವಾ? ಅದಕ್ಕೇಂತ ದಿನವಿಡೀ ಸುತ್ತೀಸುತ್ತಿ ಮೇಯಬೇಕು. ರಾಜು ರೈತನಿಗೆ ರಾಶಿಗಟ್ಟಲೆ ಗೊಬ್ಬರ ಕೊಡಬೇಕು. ಇಷ್ಟೆಲ್ಲಾ ಕೆಲಸ ಮಾಡಿಲ್ವಾ ನಾವೂನು… ನಾವೂ ರಜೆ ತಗೊಳ್ಳೋಣ” ಎಂಬ ಬೆಳ್ಳಿ ಹಸುವಿನ ಮಾತುಗಳು ಎಲ್ಲ ಹಸುಗಳಿಗೂ ನಿಜ ಎನಿಸಿದವು. ಅವೆಲ್ಲವೂ ಹೊಳೆ ದಡಕ್ಕೆ ಹೋಗಿ ಬಿದ್ದುಕೊಂಡು ಮೆಲುಕು ಹಾಕುವ ತೀರ್ಮಾನ ಮಾಡಿದವು.

ಈ ವಿಷಯ ಬೆಕ್ಕುಗಳಿಗೆ ಗೊತ್ತಾಯಿತು. “ಏನು… ಇವರೊಂದೇ ಕೆಲಸ ಮಾಡೋದಾ ಈ ತೋಟದಲ್ಲಿ ನಾವಂತೂ ಈ ವಾರ ಹಿಡಿದು ತಿಂದ ಇಲಿಗಳ ಲೆಕ್ಕ ಇಟ್ಟವರೇ ಇಲ್ಲ. ನಾವಷ್ಟು ಕೆಲಸ ಮಾಡದಿದ್ರೆ ಈ ಹಸುಗಳಿಗೆ ಎಲ್ಲಿರ್ತಿತ್ತು ಬೂಸಾ? ನಮಗೂ ಸ್ವಲ್ಪ ರೆಸ್ಟ್‌ ಬೇಕಪ್ಪಾ” ಎನ್ನುವ ತೀರ್ಮಾನಕ್ಕೆ ಬಂದವು. ಬೆಕ್ಕುಗಳ ತೀರ್ಮಾನ ನಾಯಿಗಳಿಗೆ ತಿಳಿಯದೇ ಇದ್ದೀತೆ? “ನಾವು ಸಹ ಈ ತೋಟ, ಮನೆಗಳನ್ನೆಲ್ಲಾ ಹಗಲು-ರಾತ್ರಿ ಕಾಯ್ತಿದ್ದೀವಿ. ಎಷ್ಟು ಕಾದಿದ್ದೀವಿ ಅಂದರೆ ನಮ್ಮ ಕರೀನಾಯಿಯ ಬಣ್ಣನೂ, ಪಾಪ… ಕೆಂಪಾಗೋಗಿದೆ ಕಾದು ಕಾದು. ನಮಗೂ ರಜೆ ಬೇಕಲ್ಲ” ಎಂದು ಮನೆ ಕಾಯುವ ಕೆಲಸಕ್ಕೆ ರಜೆ ಹಾಕಲು ನಾಯಿಗಳು ನಿರ್ಧರಿಸಿದವು.

ಹೀಗೆ ಕೋಳಿ, ಹಸು, ಬೆಕ್ಕು, ನಾಯಿಗಳೆಲ್ಲಾ ರಜೆಯ ಮೇಲೆ ಹೋಗಿರುವುದನ್ನು ಕಂಡ ತೋಟದ ಮರಗಳಿಗೆ ಕೋಪಬಂತು. “ಏಯ್‌ ಎದ್ದೇಳ್ರೋ ಸೋಮಾರಿಗಳಾ! ಏನ್‌ ಹಾಗೆ ಎಲ್ಲರೂ ಬಿದ್ದುಕೊಂಡಿದ್ದೀರಿ” ಎಂದು ಮರಗಳು ಅಬ್ಬರಿಸಿದವು. ಎಲ್ಲ ಪ್ರಾಣಿಗಳಿಗೂ ಅಚ್ಚರಿಯಾಯಿತು. ಯಾವತ್ತೂ ಸುಮ್ಮನಿರುವ ಮರಗಳು ಇಂದೇಕೆ ಗದ್ದಲ ಮಾಡುತ್ತಿವೆ ಎಂಬುದು ಅವುಗಳಿಗೆ ಅರ್ಥವಾಗಲಿಲ್ಲ. “ಯಾಕೆ ಇಷ್ಟೊಂದು ಗಲಾಟೆ ಮಾಡ್ತಿದ್ದೀರಿ?” ಮರಗಳನ್ನು ಕೇಳಿದವು ಪ್ರಾಣಿಗಳು.

ಇದನ್ನೂ ಓದಿ : ಮಕ್ಕಳ ಕಥೆ: ಮಾವಿನ ಹಣ್ಣು ಹುಡುಕುತ್ತಾ ಬಂದ ಅರಸನಿಗೆ ಕಂಡಿದ್ದೇನು?

“ಇನ್ನೇನು ಮತ್ತೆ! ಏನೋ ಮಹಾ ಕಡಿದು ಗುಡ್ಡ ಹಾಕಿದ್ದೀರಿ ಅನ್ನುವ ಹಾಗೆ ಎಲ್ಲರೂ ರಜೆ ತಗೊಂಡು ಕೂತಿದ್ದೀರಲ್ಲಾ. ಎದೇಳಿ ಮೇಲೆ, ಎಲ್ಲರೂ ಹೋಗಿ ನಿಮ್‌ನಿಮ್ಮ ಕೆಲಸಕ್ಕೆ” ಎಂದು ಮರಗಳು ಗುರುಗುಟ್ಟಿದವು. ಆದ್ರೆ ರಜಾ-ಮಜಾ ಅನ್ನುವ ನಿರ್ಧಾರ ಮಾಡಿದ್ದ ಪ್ರಾಣಿಗಳು ಕೂತಲ್ಲಿಂದ ಏಳಲಿಲ್ಲ. ಈ ಮರಗಳು ಬೈದರೆ ಬೈಯಲಿ ಎಂದು ತಮ್ಮಷ್ಟಕ್ಕೆ ತೂಕಡಿಸಿದವು ಪ್ರಾಣಿಗಳು.

“ವರ್ಷಕ್ಕೆ ಎಷ್ಟೊಂದು ಹೂವು-ಮಿಡಿ-ಕಾಯಿ-ಹಣ್ಣುಗಳನ್ನು ಬಿಡುತ್ತೇವೆ ನಾವು ಎಂಬ ಕಲ್ಪನೆ ಲೋಕದಲ್ಲಿ ಯಾರಿಗೂ ಇಲ್ಲ. ನಮ್ಮ ಸೊಪ್ಪು-ಎಲೆಗಳು ಲೋಕದಲ್ಲಿ ಎಲ್ಲರಿಗೂ ಬೇಕು. ನಾವು ಬೀಸುವ ಗಾಳಿ ಇಲ್ಲದಿದ್ದರೆ ನೀವೆಲ್ಲ ಎಲ್ಲಿ ಉಳಿಯುತ್ತೀರಿ? ನಾವು ಉತ್ಪತ್ತಿ ಮಾಡುವ ಪ್ರಾಣವಾಯುವಿಗೆ ಲೆಕ್ಕ ಇದೆಯೇ? ನಿಮ್ಮಗಳ ಹಾಗೆ ನಾವೂ ರಜೆ ತೆಗೆದುಕೊಂಡರೆ ಹೇಗೆ?” ಎಂದು ಮರಗಳು ಕೇಳುತ್ತಿದ್ದಂತೆ ಪ್ರಾಣಿಗಳಿಗೆಲ್ಲಾ ಚುರುಕು ಮುಟ್ಟಿತು. ಹೌದಲ್ಲಾ! ಆಮ್ಲಜನಕ ಉತ್ಪಾದನೆ ಮಾಡುವುದನ್ನೇ ಬಿಟ್ಟು, ಈ ಮರಗಳೂ ರಜೆ ತೆಗೆದುಕೊಂಡರೆ ಲೋಕದ ಗತಿಯೇನು ಎಂದು ಕಂಗಾಲಾದ ಪ್ರಾಣಿಗಳು ಧಡಕ್ಕನೆದ್ದು, ತಂತಮ್ಮ ಕೆಲಸಗಳಿಗೆ ತಕ್ಷಣವೇ ಮರಳಿದವು.

Exit mobile version