ಸಮುದ್ರದಂಚಿನಲ್ಲಿ ಬೆಸ್ತನೊಬ್ಬ ವಾಸಿಸುತ್ತಿದ್ದ. ದಿನವೂ ಮೀನು ಹಿಡಿದು, ಬೇಕಷ್ಟನ್ನು ಇರಿಸಿಕೊಂಡು, ಉಳಿದಿದ್ದನ್ನು ಮಾರಿ ಆತ ಬದುಕು ಕಳೆಯುತ್ತಿದ್ದ. ಒಮ್ಮೆ ಮೀನು ಹಿಡಿಯುವಾಗ ಅತ್ಯಂತ ಸುಂದರವಾದ ಮೀನೊಂದು ಆತನ ಬಲೆಗೆ ಬಿತ್ತು. ಅದನ್ನು ಕೈಯಲ್ಲಿ ಹಿಡಿಯುತ್ತಿದ್ದಂತೆ ಆ ಮೀನು ಮಾತಾಡತೊಡಗಿತು! “ಓ ಬೆಸ್ತನೇ! ನನಗಾಗಿ ನನ್ನ ಕುಟುಂಬ, ಬಂಧು-ಮಿತ್ರರೆಲ್ಲಾ ಕಾಯುತ್ತಿರುತ್ತಾರೆ. ನಾನು ಬಾರದಿದ್ದರೆ ಚಿಂತೆಯಿಂದ ಸತ್ತೇ ಹೋಗುತ್ತಾರೆ.
ಈಗಾಗಲೇ ಉಸಿರಾಡಲಾಗದೆ ಒದ್ದಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ನೀರಿಗೆ ಹಾಕು” ಎಂದು ಬೇಡಿಕೊಂಡಿತು.
ಈವರೆಗೆ ಮಾತುಡುವ ಮೀನನ್ನು ನೋಡದ ಆತನಿಗೆ ಸಂತೋಷವೂ, ಆಶ್ಚರ್ಯವೂ ಆಯಿತು. ಆ ಮೀನನ್ನು ನೀರಿಗೆ ಹಾಕಿದ. ಆತನೆಡೆಗೆ ನೋಡಿ ಕೃತಜ್ಞತೆ ಸೂಚಿಸಿದ ಮೀನು, “ನಿನ್ನ ಉಪಕಾರ ಮರೆಯುವುದಿಲ್ಲ” ಎಂದು ಹೇಳುತ್ತಾ ಹೊರಟುಹೋಯಿತು. ಆದರೆ ಆವತ್ತಿಗೆ ಅವನಿಗೆ ಬೇರಾವುದೇ ಮೀನೂ ದೊರೆಯಲಿಲ್ಲ. ಇವತ್ತು ಊಟಕ್ಕೇನೂ ಇಲ್ಲವಲ್ಲ ಎಂದು ಚಿಂತಿಸುತ್ತಾ ಮನೆಗೆ ಮರಳುತ್ತಿದ್ದಾಗ, ದಾರಿಯಲ್ಲೊಬ್ಬ ಸನ್ಯಾಸಿ ಎದುರಾದ. ಅವನೊಂದು ಹಸುವಿನೊಂದಿಗೆ ಬರುತ್ತಿದ್ದ. ದುಃಖದಿಂದ ನಡೆಯುತ್ತಿದ್ದ ಬೆಸ್ತನನ್ನು ತಡೆದ ಆತ, ಈ ಬೇಸರಕ್ಕೆ ಕಾರಣವೇನು ಎಂದು ಕೇಳಿದ. ಮಾತಾಡುವ ಮೀನಿನ ವೃತ್ತಾಂತವನ್ನೆಲ್ಲಾ ತಿಳಿಸಿದ ಬೆಸ್ತ.
“ನಿನ್ನ ಕಥೆ ಕೇಳಿ ನನಗೂ ಬೇಸರವಾಯಿತು. ನನ್ನಲ್ಲೊಂದು ಹಸುವಿದೆ. ಇದನ್ನು ನಿನಗೆ ಕೊಡುತ್ತೇನೆ. ಇದರ ಹಾಲನ್ನು ಕರೆದುಕೊಂಡು ನೀವು ಜೀವಿಸಬಹುದು. ಆದರೆ ಒಂದು ಶರತ್ತು. ಇವತ್ತಿಗೆ ಸರಿಯಾಗಿ ಮೂರು ವರ್ಷಕ್ಕೆ ನಾನು ಮರಳಿ ಬರುತ್ತೇನೆ. ಆಗ ಕೆಲವು ಪ್ರಶ್ನೆಗಳನ್ನು ನಿನಗೆ ಕೇಳುತ್ತೇನೆ. ಸರಿಯುತ್ತರ ಕೊಟ್ಟರೆ ಈ ಹಸು ನಿನ್ನಲ್ಲೇ ಉಳಿಯುತ್ತದೆ. ಇಲ್ಲದಿದ್ದರೆ ಹಸುವಿನೊಂದಿಗೆ ನಿನ್ನನ್ನೂ ಕರೆದೊಯ್ಯುತ್ತೇನೆ. ಆಗಬಹುದೇ?” ಕೇಳಿದ ಸನ್ಯಾಸಿ.
ಮೀನು ಚೆನ್ನಾಗಿ ಸಿಕ್ಕರೆ ಜೀವನ ಚೆನ್ನಾಗಿರುತ್ತದೆ. ಸಿಗದಿದ್ದರೆ ಉಪವಾಸ ಮಲಗಬೇಕು. ಮನೆಯಲ್ಲಿ ಹೆಂಡತಿ-ಮಕ್ಕಳ ಹೊಟ್ಟೆಗೂ ತಣ್ಣೀರು ಬಟ್ಟೆ. ಬದಲಿಗೆ ಈ ಹಸುವನ್ನು ತೆಗೆದುಕೊಳ್ಳುತ್ತೇನೆ. ಮೂರು ವರ್ಷದ ನಂತರ ಏನಾಗುತ್ತದೋ ಕಂಡವರಾರು ಎಂದು ಯೋಚಿಸಿದ ಬೆಸ್ತ, ಸನ್ಯಾಸಿಯ ಮಾತಿಗೆ ಒಪ್ಪಿದ.
ಹಸುವನ್ನು ಕರೆದುಕೊಂಡು ಮನೆಗೆ ಹೋದ. ದಿನವೂ ಬೇಕಾದಷ್ಟು ಹಾಲು ಕೊಡುತ್ತಿತ್ತು ಆ ಹಸು. ಇವರ ಕುಟುಂಬಕ್ಕೆ ಸಾಕಾಗಿ ಹಾಲು ಮಾರುತ್ತಿದ್ದರು. ಬೆಣ್ಣೆ-ತುಪ್ಪ ಸಮೃದ್ಧವಾಗಿ ದೊರೆಯುತ್ತಿತ್ತು. ಬೆಸ್ತ ಮೀನು ಹಿಡಿಯುವುದ್ನು ಬಿಡಲಿಲ್ಲ. ಹಾಗಾಗಿ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತು. ಊಟ-ಬಟ್ಟೆ-ಮನೆ ಎಲ್ಲವೂ ಸುಧಾರಿಸಿದವು. ಹಸುವೀಗ ಅವರ ಕುಟುಂಬದ ಭಾಗವಾಗಿತ್ತು.
ಅಷ್ಟರಲ್ಲಿ ಮೂರು ವರ್ಷಗಳು ಮುಗಿಯುತ್ತಾ ಬಂದವು. ಬೆಸ್ತ ಮತ್ತು ಅವನ ಹೆಂಡತಿಗೆ ಚಿಂತೆ ಶುರುವಾಯಿತು. ಮೂರನೇ ವರ್ಷ ಮುಗಿಯುವ ದಿನ ಸಂಜೆ ಕಳವಳದಲ್ಲಿ ಕುಳಿತಿದ್ದರು ಎಲ್ಲರೂ. ಅದೇ ಸಮಯಕ್ಕೆ ಲಕ್ಷಣವಾದ ತರುಣನೊಬ್ಬ ಇವರ ಮನೆಗೆ ಬಂದ. “ಎಲ್ಲಿಗೋ ಹೋಗಬೇಕಾದವನು ನಾನು. ಈಗ ಕತ್ತಲಾಗುತ್ತಾ ಬಂದಿದ್ದರಿಂದ, ರಾತ್ರಿ ನಿಮ್ಮೂರಿನಲ್ಲೇ ಉಳಿಯಬೇಕಾಗಿದೆ. ಇದೊಂದು ರಾತ್ರಿ ನಿಮ್ಮನೆಯಲ್ಲಿ ಜಾಗ ಸಿಗಬಹುದೇ?” ಎಂದು ಕೇಳಿದ. ತಮ್ಮ ಚಿಂತೆಯ ನಡುವೆಯೂ ಅಪರಿಚಿತನಿಗೆ ಉಳಿಯಲು ಅವಕಾಶ ನೀಡಿತು ಬೆಸ್ತನ ಕುಟುಂಬ. ರಾತ್ರಿ ಊಟಕ್ಕೆ ಕುಳಿತಿದ್ದಾಗ, ʻನೀವೆಲ್ಲಾ ಏನೋ ಚಿಂತೆಯಲ್ಲಿ ಇರುವಂತಿದೆ, ಏನದು?ʼ ಕೇಳಿದ ಅಪರಿಚಿತ. ಸನ್ಯಾಸಿಯ ಕಥೆಯನ್ನು ಹೇಳಿದ ಬೆಸ್ತ. ʻಸನ್ಯಾಸಿ ಬಂದಾಗ ಪ್ರಶ್ನೆ ಕೇಳುವಾಗ ದೀಪ ಆರಿಸಿ. ಏಕೆಂದು ಕೇಳಿದರೆ ಇದು ನಿಮ್ಮ ಮನೆಯ ಪದ್ಧತಿ ಎಂದು ಹೇಳಿ. ಆಗುವುದೆಲ್ಲಾ ಒಳ್ಳೆಯದಕ್ಕೆಂದು ಸುಮ್ಮನಿರಿʼ ಎಂದು ಸಮಾಧಾನ ಮಾಡಿದ ಆ ತರುಣ.
ಇದನ್ನೂ ಓದಿ: ಮಕ್ಕಳ ಕಥೆ: ದುರಾಸೆಯ ರಾಜ
ರಾತ್ರಿಯಾಯಿತು. ಸನ್ಯಾಸಿ ಬಾಗಿಲು ತಟ್ಟಿದ. ಬೆಸ್ತ ಸನ್ಯಾಸಿಯನ್ನು ಬರಮಾಡಿಕೊಂಡ. ಆತನ ಹೆಂಡತಿ ಉಪಚರಿಸಿದಳು. ಸನ್ಯಾಸಿ ಸಂತೊಷಗೊಂಡ. “ಹೇಳಿದ ಮಾತಿನಂತೆ ಬಂದಿದ್ದೇನೆ. ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಸಿದ್ಧವೇ?” ಕೇಳಿದ ಸನ್ಯಾಸಿ. ಅಷ್ಟರಲ್ಲಿ ಬೆಸ್ತನ ಹೆಂಡತಿ ದೀಪ ಆರಿಸಿದಳು. ಹೀಗೆ ಮಾಡಿದ್ದೇಕೆ ಎಂದು ಸನ್ಯಾಸಿ ಕೇಳಿದಾಗ, ಇದೇ ತಮ್ಮ ಮನೆಯ ಪದ್ಧತಿ ಎಂದಳು.
ಸನ್ಯಾಸಿ: ಹೇಗೆ ಬದುಕುತ್ತಿದ್ದಿ?
ಉತ್ತರ: ಸಮುದ್ರವನ್ನೇ ಆಶ್ರಯಿಸಿ
ಸ: ಹಸುವನ್ನು ಕಡೆಗಣಿಸಿದ್ದೀಯಾ?
ಉ: ಖಂಡಿತ ಇಲ್ಲ. ಎಲ್ಲಾ ಪ್ರಾಣಿಗಳೂ ಸಮಾನ ನಮಗೆ
ಸ: ಮೀನನ್ನು ಬಿಟ್ಟಿದ್ದಕ್ಕೆ ಬೇಸರವಾಗಿತ್ತೇ?
ಉ: ಮೀನಿಗೆ ಸಂತೋಷವಾಗಿತ್ತಲ್ಲ, ಅಷ್ಟು ಸಾಕು
ಸ: ನಿನ್ನ ಕುಟುಂಬಕ್ಕೆ ಬೇಸರವಾಗಿರಬಹುದು
ಉ: ಖಂಡಿತ ಇಲ್ಲ, ನನ್ನ ಕುಟುಂಬದವರೆಲ್ಲಾ ಖುಷಿ ಪಟ್ಟಿದ್ದರು
ಸ: ನಾನು ಮರಳಿ ಬರಬಾರದೆಂಬ ಆಸೆಯಿತ್ತೇ?
ಉ: ಇಲ್ಲ, ಬರುವುದನ್ನು ತಡೆಯಲಾಗದು ಎಂದು ತಿಳಿದಿತ್ತು
ಈ ಉತ್ತರಗಳಿಂದ ಸನ್ಯಾಸಿ ಸಂತುಷ್ಟನಾಗಿದ್ದ. ಹಸುವನ್ನು ಅವನಿಗೇ ಬಿಟ್ಟು ಹೊರಟುಹೋದ. ಎಲ್ಲಾ ಪ್ರಶ್ನೆಗಳಿಗೂ ಕತ್ತಲೆಯಲ್ಲಿ ಉತ್ತರ ಕೊಟ್ಟಿದ್ದು ಬೆಸ್ತನಲ್ಲ, ಅಪರಿಚಿತ ತರುಣ! ಎಲ್ಲರೂ ಅವನಿಗೆ ಧನ್ಯವಾದ ಹೇಳಿದರು. “ಉಪಕಾರ ಸ್ಮರಣೆ ನನಗೂ ಇದೆ. ಎಂದಾದರೂ ನಿನಗೆ ನೆರವಾಗುತ್ತೇನೆಂದು ಹೇಳಿದ್ದೆನಲ್ಲ, ಅದೇ ಮೀನು ನಾನು” ಎಂದು ಹೇಳಿದ ತರುಣ ಹೊರಗಿನ ಕತ್ತಲೆಯಲ್ಲಿ ಮಾಯವಾದ.