ಚೀನಾ ದೇಶದಲ್ಲಿ ಕುದುರೆಗಳ ವ್ಯಾಪಾರಿಯೊಬ್ಬನಿದ್ದ. ಅರಬ್ ದೇಶಗಳಿಂದ ಕುದುರೆಗಳನ್ನು ತಂದು ಆತ ಚೀನಾದಲ್ಲಿ ಮಾರುತ್ತಿದ್ದ. ಒಂದಕ್ಕಿಂತ ಒಂದು ಉತ್ತಮವಾದ ಕುದುರೆಗಳನ್ನು ಆತ ಸಾಕಿಕೊಂಡಿದ್ದ. ಒಳ್ಳೆಯ ದರ ಸಿಕ್ಕುತ್ತಿದ್ದಂತೆ ಅವುಗಳನ್ನು ಮಾರುತ್ತಿದ್ದ. ಆತನಿಗೆ ಒಬ್ಬನೇ ಮಗ. ಆ ಮಗನಿಗೂ ಕುದುರೆಗಳ ತಳಿಗಳನ್ನು ಗುರುತಿಸುವುದು, ಅವುಗಳನ್ನು ಸಾಕುವುದು ಮತ್ತು ವ್ಯಾಪಾರ ಮಾಡುವ ಬಗ್ಗೆ ಒಳ್ಳೆಯ ತರಬೇತಿ ನೀಡಿದ್ದ. ಕ್ರಮೇಣ ಈತನ ವ್ಯಾಪಾರವನ್ನು ಮಗನೇ ನೋಡಿಕೊಳ್ಳತೊಡಗಿದ.
ಒಂದು ದಿನ ಆತನ ಮಗ ಕುದುರೆ ಲಾಯದ ಬಾಗಿಲನ್ನು ಮುಚ್ಚುವುದಕ್ಕೆ ಮರೆತ. ರಾತ್ರಿಯಾಯಿತು, ಎಲ್ಲರೂ ಮಲಗಿಬಿಟ್ಟರು. ಬೆಳಗ್ಗೆದ್ದು ನೋಡುವಷ್ಟರಲ್ಲಿ ಉತ್ತಮ ತಳಿಯ ಗಂಡು ಕುದುರೆಯೊಂದು ಲಾಯದಿಂದ ತಪ್ಪಿಸಿಕೊಂಡಿತ್ತು. ವ್ಯಾಪಾರಿಯ ದುಬಾರಿ ಬೆಲೆಯ ಗಂಡು ಕುದುರೆ ಕಾಣೆಯಾಗಿದೆ ಎಂಬುದನ್ನು ತಿಳಿದ ಊರಿನ ಜನ ಬಂದು, ಹಿರಿಯ ವ್ಯಾಪಾರಿಗೆ ಸಮಾಧಾನ ಹೇಳಿದರು. ಆದರೆ ಯಾವುದೇ ಚಿಂತೆಯಿಲ್ಲದವರಂತೆ ನಿರ್ಲಿಪ್ತನಾಗಿದ್ದ ಆತ, ʻಅಯ್ಯೋ ಬಿಡಿ, ಆಗುವುದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳಿ ತಣ್ಣಗೆ ಕೂತಿದ್ದ. ಊರಿನ ಜನರಿಗೆಲ್ಲಾ ಅಚ್ಚರಿಯಾಯಿತು. ಇಷ್ಟೊಂದು ನಷ್ಟವಾಗಿದ್ದಕ್ಕೆ ಬೇಸರದಿಂದ ಆತನಿಗೆ ಹಾಗಾಗಿದೆ ಎಂದು ಭಾವಿಸಿ ಸುಮ್ಮನಾದರು.
ಕೆಲವು ದಿನಗಳ ನಂತರ ಆತನ ಲಾಯದಿಂದ ಓಡಿಹೋಗಿದ್ದ ಕುದುರೆ ಮರಳಿ ಬಂತು. ಆ ಕುದುರೆಯ ಜೊತೆಯಲ್ಲಿ ಕಾಡು ತಳಿಯ ಹೆಣ್ಣು ಕುದುರೆಯೊಂದು ಲಾಯಕ್ಕೆ ಬಂದಿತ್ತು. ಈತನ ಕಾಣೆಯಾದ ದುಬಾರಿ ಕುದುರೆಯ ಜೊತೆಗೆ ಇನ್ನೊಂದು ಕುದುರೆಯೂ ಆತನಿಗೆ ಅನಾಯಾಸವಾಗಿ ಲಭ್ಯವಾಗಿತ್ತು. ಹಾಗಾಗಿ ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುತ್ತಾ ನಷ್ಟದಲ್ಲೂ ಭರವಸೆ ಕಳೆದುಕೊಳ್ಳದೆ ಇದ್ದ ವ್ಯಾಪಾರಿಯ ಮನಸ್ಸು ಏನೆಂಬುದು ಆತನ ಮಗನಿಗೆ ಅರ್ಥವಾಗಿತ್ತು. ಆದರೂ ಎಲ್ಲಾ ಸಂದರ್ಭಗಳಲ್ಲೂ ಹೀಗೆಯೇ ಹೇಳುತ್ತಾನಲ್ಲ ತಂದೆ ಎಂದು ವಿಚಿತ್ರವೆನಿಸಿತು.
ಇನ್ನೊಂದು ದಿನ, ತಾನೇ ಸಾಕಿದ್ದ ಕುದುರೆಯೊಂದರ ಮೇಲೆ ವ್ಯಾಪಾರಿಯ ಮಗ ಸವಾರಿ ಮಾಡುತ್ತಿದ್ದ. ಸವಾರ ಹೇಳಿದ ಮಾತನ್ನು ಕೇಳುವಂತೆ ಆ ಕುದುರೆಯನ್ನು ಚನ್ನಾಗಿ ಪಳಗಿಸಲಾಗಿತ್ತು. ಆದರೆ ಹುಲ್ಲುಗಾವಲಿನಲ್ಲಿ ಓಡುತ್ತಿದ್ದ ಕುದರೆ ಇದ್ದಕ್ಕಿದ್ದಂತೆ ಮುಗ್ಗರಿಸಿತು. ಇದರಿಂದ ಕುದುರೆಯ ಮೇಲಿದ್ದ ವರ್ತಕನ ಮಗ ಕೆಳಗೆ ಉರುಳಿ ಬಿದ್ದ. ಆತ ಒಂದು ಕಾಲು ಮುರಿದುಹೋಯಿತು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಮುರಿದ ಕಾಲು ಮೊದಲಿನಂತಾಗುವುದು ಅನುಮಾನ, ಆದರೂ ವರ್ಷಗಟ್ಟಲೆ ಸಮಯ ಬೇಕು ಎಂದರು. ಏನೇನೋ ಗಿಡಮೂಲಿಕೆಯ ಔಷಧಿಗಳನ್ನು ಆತನ ಕಾಲಿಗೆ ಕಟ್ಟಿದರು.
ಈ ವಿಷಯ ಊರಿಗೆಲ್ಲಾ ತಿಳಿಯಿತು. ಊರ ಜನರೆಲ್ಲಾ ಇವರ ಮನೆಗೆ ಬಂದು ಸಮಾಧಾನ ಮಾಡತೊಡಗಿದರು. ವರ್ತಕನ ೨೫ ವರ್ಷದ ಮಗ, ಪಾಪ, ಇನ್ನು ವರ್ಷಗಟ್ಟಲೆ ಕುಂಟಬೇಕಲ್ಲ. ಆದರೂ ಪೂರಾ ಮೊದಲಿನಂತಾಗುವುದು ಅನುಮಾನ ಎಂದಿದ್ದಾರಲ್ಲ ವೈದ್ಯರು ಎಂದು ಜನರೆಲ್ಲಾ ಬೇಸರಗೊಂಡು ಆ ಕುದುರೆಯನ್ನು ಶಪಿಸಿದರು. ಆದರೆ ಇದಕ್ಕೂ ನಿರ್ಲಿಪ್ತನಾಗಿದ್ದ ವರ್ತಕ. ʻಚನ್ನಾಗಿ ಪಳಗಿದ ಕುದುರೆ ಮುಗ್ಗರಿಸಿದರೆ ಏನು ಮಾಡುವುದು? ಅದೇನು ಬೇಕೆಂದು ಮಾಡಲಿಲ್ಲವಲ್ಲ, ಪಾಪದ ಪ್ರಾಣಿ. ಆಗೋದೆಲ್ಲ ಒಳ್ಳೆಯದಕ್ಕೆ ಎಂದುಕೊಂಡರಾಯಿತುʼ ಎಂದು ವರ್ತಕ. ಮಗನಿಗೆ ಕಾಲು ಮುರಿದ ದುಃಖದಲ್ಲಿ ಆ ವ್ಯಾಪಾರಿಯ ತಲೆ ಕಟ್ಟಿದೆ ಎಂದುಕೊಂಡರು ಜನ.
ಇದನ್ನೂ ಓದಿ : ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?
ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಯುದ್ಧ ಘೋಷಣೆಯಾಯಿತು. ಪ್ರತಿ ಮನೆಯಿಂದಲೂ ಯುವಕರು ಸೇನೆಗೆ ಬರಲೇಬೇಕು ಎಂದು ರಾಜನ ಆಜ್ಞೆಯಾಯಿತು. ಊರೂರಿಗೆ ಸೈನಿಕರು ಬಂದರು. ಮನೆಮನೆಗೆ ಭೇಟಿ ನೀಡಿ, ಯುವಕರನ್ನು ಕರೆದೊಯ್ದರು. ವರ್ತಕನ ಮನೆಗೆ ಬಂದರೆ, ಮನೆಯಲ್ಲಿರುವ ಇಬ್ಬರು ಗಂಡಸರ ಪೈಕಿ ಒಬ್ಬ ಮುದುಕ, ಇನ್ನೊಬ್ಬನಿಗೆ ಕಾಲು ಮುರಿದಿದೆ. ಸೈನಿಕರು ತಮ್ಮಷ್ಟಕ್ಕೆ ಮಾತಾಡಿಕೊಂಡು ಹೊರಟುಹೋದರು. ಹಲವಾರು ದಿನಗಳವರೆಗೆ ನಡೆದ ಯುದ್ಧದಲ್ಲಿ ಬಹಳಷ್ಟು ಮಂದಿ ಜೀವ ಕಳೆದುಕೊಂಡರು. ಸಾವಿರಾರು ಮಂದಿ ಕೈ-ಕಾಲು ಕಳೆದುಕೊಂಡರು. ತನಗೆ ಕಾಲು ಮುರಿದಾಗಲೂ ಅಪ್ಪ ಬೇಸರ ಮಾಡದೆ ಇದ್ದಿದ್ದು ಮಗನಿಗೆ ನೆನಪಾಯಿತು. ಕಷ್ಟಗಳ ನಡುವೆ ಭರವಸೆ ಕಳೆದುಕೊಳ್ಳದೆ ಇರಬೇಕೆಂಬ ತಂದೆಯ ಮಾತು ಮಗನಿಗೆ ಅರ್ಥವಾಯಿತು.