Site icon Vistara News

ಮಕ್ಕಳ ಕಥೆ : ತಿಂಡಿಪೋತ ಇಲಿಮರಿ

Food Rat
http://vistaranews.com/wp-content/uploads/2023/08/WhatsApp-Audio-2023-08-19-at-5.50.11-PM-1.mp3


ಅದೊಂದು ದೊಡ್ಡ ಮನೆ. ಆ ಮನೆಯ ಅಡುಗೆ ಮನೆಗೆ ಹೊಂದಿಕೊಂಡಂತೆ ವಿಶಾಲವಾದ ಉಗ್ರಾಣವೊಂದಿತ್ತು. ಆ ಉಗ್ರಾಣದ ಮೂಲೆಯಲ್ಲಿ ಯಾರ ಕಣ್ಣಿಗೂ ಗೋಚರಿಸದ ಸಣ್ಣ ಬಿಲವೊಂದಿತ್ತು. ಆ ಬಿಲದಲ್ಲಿ ಅಮ್ಮ ಇಲಿಯೊಂದು ತನ್ನ ಮರಿಯೊಂದಿಗೆ ವಾಸಿಸುತ್ತಿತ್ತು. ಆಗಾಗ ತನ್ನ ಮೂತಿಯನ್ನು ಬಿಲದಿಂದ ಹೊರಗೆ ತೂರಿಸಲು ಪ್ರಯತ್ನಿಸುತ್ತಿದ್ದ ಮರಿಯ ಬಾಲ ಎಳೆದು ಒಳಗೆ ಕೂರಿಸುತ್ತಿತ್ತು ಅಮ್ಮ ಇಲಿ. ʻನೋಡು ಮಗೂ, ಅತಿಯಾಸೆ ಕೆಟ್ಟದ್ದು. ನಮ್ಮ ಹೊಟ್ಟೆ ತುಂಬಿದ ಮೇಲೆ ಮತ್ತೆ ತಿಂಡಿಗಾಗಿ ಆಸೆ ಪಡಬಾರದುʼ ಬುದ್ಧಿ ಹೇಳಿತು ಅಮ್ಮಿಲಿ. ʻಆದರೆ ಅಮ್ಮ… ಈ ಮನೆಯವರೆಲ್ಲ ಒಳ್ಳೆಯವರು. ನಮಗಾಗಿ ಎಂಥೆಂಥಾ ತಿಂಡಿಗಳನ್ನೆಲ್ಲಾ ಇಡುತ್ತಾರೆ ಅವರ ಅಡುಗೆ ಮನೆಯಲ್ಲಿ! ಆ ತಿಂಡಿಗಳ ಪರಿಮಳಕ್ಕೆ ಬಾಯಲ್ಲಿ ನೀರು ಬರುತ್ತದೆʼ ತನ್ನ ಕಷ್ಟ ಹೇಳಿಕೊಂಡಿತು ಮರಿ. ʻನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ. ಹಾಗಂತ ಹೊತ್ತು-ಗೊತ್ತು ನೋಡದೆ ಮುಕ್ಕುವುದಕ್ಕೆ ಹೋದರೆ ಅಪಾಯ ತಪ್ಪಿದ್ದಲ್ಲ. ಇವರ ಮನೆಯಲ್ಲೊಂದು ದೊಡ್ಡ ಕರಿಬೆಕ್ಕಿದೆಯಲ್ಲ, ಅದಂತೂ ಎಲ್ಲಿಂದಲಾದರೂ ಜಿಗಿಯುತ್ತದೆ. ಜೋಪಾನವಾಗಿರಬೇಕುʼ ಅಮ್ಮಿಲಿ ಮತ್ತೂ ಎಚ್ಚರಿಕೆ ನೀಡಿತು ಮರಿಗೆ.

ಧ್ಯಾಹ್ನದ ಊಟ ಆಗಿತ್ತು. ಎಂದಿನಂತೆ ಸಣ್ಣದೊಂದು ನಿದ್ದೆ ತೆಗೆಯುವ ಇರಾದೆಯಿಂದ ಅಮ್ಮಿಲಿ ತನ್ನ ಮರಿಯನ್ನು ಮಗ್ಗುಲಲ್ಲೇ ಹಾಕಿಕೊಂಡು ಚಾಪೆಯ ಮೇಲೆ ಉರುಳಿಕೊಂಡಿತು. ಆದರೆ ಬೆಳಗಿನಿಂದ ಅಡುಗೆ ಮನೆಯ ಕಡೆಯಿಂದ ಸಿಕ್ಕಾಪಟ್ಟೆ ಪರಿಮಳ ಬರುತ್ತಿತ್ತು. ಹೊಟ್ಟೆ ತುಂಬಿದ್ದೆಲ್ಲವೂ ಮರೆತು ಹೋದಂತೆ ಮರಿಗೆ ಕಳ್ಳ ಹಸಿವು ಕಾಡುತ್ತಿತ್ತು. ಮಾತ್ರವಲ್ಲ, ʻಗಣಪತಿ ಪೂಜೆಗೆ ಇಷ್ಟು ಸಾಕಾ?ʼ, ʻಕರಿಗಡುಬು ನಾಳೆ ಮಾಡದಾ, ನಾಡಿದ್ದಾ?ʼ ಎಂದೆಲ್ಲಾ ಧ್ವನಿಗಳು ಮಾತಾಡಿಕೊಳ್ಳುತ್ತಿದ್ದವು. ಹಾಗಾದರೆ ಇವತ್ತು ಮಾಡಿದ್ದಲ್ಲದೆ ನಾಳೆಯೂ ತಿಂಡಿ ಮಾಡುತ್ತಾರೆ. ಎಷ್ಟು ತಿನ್ನುತ್ತಾರಪ್ಪಾ ಇವರು, ಹೊಟ್ಟೆಬಾಕರು! ಎಂದುಕೊಂಡ ಮರಿ ಅಮ್ಮನ ಪಕ್ಕದಲ್ಲಿಂದ ಮೆಲ್ಲಗೆ ಎದ್ದು ಕೂತಿತು.

ನಿದ್ದೆಯಲ್ಲಿದ್ದ ಅಮ್ಮನಿಗೆ ಎಚ್ಚರವಾಗದಂತೆ ಮೆಲ್ಲಗೆ ತೆವಳುತ್ತಾ ಬಿಲದಿಂದ ಮರಿ ಹೊರಬಂತು. ಅಡುಗೆಮನೆಯಿಂದ ಬರುತ್ತಿದ್ದ ಪರಿಮಳವಂತೂ ಇಲಿ ಮರಿಯ ರೋಮರೋಮಗಳಲ್ಲೂ ಹಸಿವನ್ನು ಕೆರಳಿಸುತ್ತಿತ್ತು. ಮನೆಯೆಲ್ಲಾ ನಿಶ್ಶಬ್ದವಾಗಿತ್ತು. ಕರಿಬೆಕ್ಕಿನ ಸುಳಿವೂ ಕಾಣಲಿಲ್ಲ. ಚಕ್ಕುಲಿಗಳಲ್ಲಿ ಗಾಜಿನ ಡಬ್ಬಿಗಳಲ್ಲಿ ತುಂಬಿಸಿಟ್ಟಿದ್ದರು. ಆದರೆ ರವೆ ಉಂಡೆಗಳಿನ್ನೂ ಡಬ್ಬಿಯೊಳಗೆ ಹೋಗಿರಲಿಲ್ಲ. ನೇರವಾಗಿ ಉಂಡೆಯ ಡಬರಿಯೊಳಗೇ ಇಳಿದ ಮರಿ ಹೊಟ್ಟೆಬಿರಿ ಮುಕ್ಕಿತು. ಒಂದಿಷ್ಟು ಉಂಡೆಗಳನ್ನು ಪುಡಿಮಾಡಿ, ಅದರೊಳಗೇ ಹೊರಳಾಡಿತು. ಮರಳಿನಲ್ಲಿ ಮಕ್ಕಳು ಆಟವಾಡಿದಂತೆ, ಇಲಿಮರಿ ರವೆಯಲ್ಲಿ ಉರುಳಾಡುತ್ತಿತ್ತು. ಬಾಯಿ-ಕೈ-ಮೈಯೆಲ್ಲಾ ಸಿಕ್ಕಾಪಟ್ಟೆ ಸಿಹಿ ಎನಿಸಿದ್ದರಿಂದ ಏನಾದರೂ ಖಾರದ ತಿನಿಸು ಸಿಕ್ಕೀತೇ ಎಂದು ಅರಸಲಾರಂಭಿಸಿತು. ಕಂಡಿದ್ದು ಗಾಜಿನ ಡಬ್ಬಿಯ ಚಕ್ಕುಲಿ. ಹೇಗಾದರೂ ಡಬ್ಬಿಯ ಮುಚ್ಚಳವೊಂದು ತೆಗೆಯೋಣ ಎಂದು ಪ್ರಯತ್ನಿಸತೊಡಗಿತು. ಡಬ್ಬಿಯ ಮೇಲೆ ಹತ್ತಿ, ಕೆಳಗಿಳಿದು, ಸುತ್ತಿರುಗಿ, ಕುಣಿದು-ಕುಪ್ಪಳಿಸಿ ಲಾಗ ಹಾಕಿದರೂ ಮುಚ್ಚಲು ಅಲ್ಲಾಡಲಿಲ್ಲ. ಚಕ್ಕುಲಿ ಕರಿಯುವುದಕ್ಕೆಂದು ಬಳಸಿದ್ದ ಜಾಲರಿಸೌಟು ಸ್ವಲ್ಪ ದೂರದಲ್ಲಿತ್ತು. ಇದರಿಂದ ಸಹಾಯವಾದೀತು ಎಂದು ಭಾವಿಸಿದ ಮರಿ ಇಲಿ, ತನಗಿಂತ ಹತ್ತಾರು ಪಟ್ಟ ದೊಡ್ಡದಾಗಿದ್ದ ಆ ಜಾಲರಿ ಸೌಟನ್ನು, ಹಲ್ಲುಕಚ್ಚಿ ದರದರನೇ ಎಳೆದುಕೊಂಡು ಬಂತು. ಆದರೆ ಅದನ್ನು ಉಪಯೋಗಿಸಿ ಮುಚ್ಚಳ ಹೇಗೆ ತೆಗೆಯುವುದು ಎಂಬುದು ಬಗೆಹರಿಯಲಿಲ್ಲ.

ಆ ಜಾಲರಿಸೌಟನ್ನು ನೆಲದ ಮೇಲಿಟ್ಟರೆ ಜಾಲರಿಯ ಭಾಗ ಮೇಲೆದ್ದು ನಿಲ್ಲುತ್ತಿತ್ತು. ಅದನ್ನು ಹೇಗಾದರೂ ಮಾಡಿ ಮುಚ್ಚಳಕ್ಕೆ ತಾಗಿಸಬೇಕೆಂದು ಇಲಿ ಮರಿ ಇನ್ನಿಲ್ಲದ ಸರ್ಕಸ್‌ ಮಾಡಲಾರಂಭಿಸಿತು. ಎಷ್ಟು ಪ್ರಯತ್ನಿಸಿದರೂ ಆ ಸೌಟನ್ನು ಅದಕ್ಕೆ ನೂಕುವುದಕ್ಕೆ ಆಯಿತೇ ಹೊರತು ಎತ್ತುವುದಕ್ಕೆ ಆಗಲಿಲ್ಲ. ಸೌಟು ನೂಕುವುದರಿಂದ ಅದಕ್ಕೆ ತಾಗಿದ್ದ ಚಕ್ಕುಲಿಯ ಡಬ್ಬಿಯೂ ಮುಂದೆ ತಳ್ಳುತ್ತಾ ಹೋಗುತ್ತಿರುವುದು ಮರಿಯ ಅರಿವಿಗೆ ಬರಲೇ ಇಲ್ಲ. ಅದು ಗೊತ್ತಾಗಿದ್ದು ಯಾವಾಗೆಂದರೆ ಚಕ್ಕುಲಿ ಡಬ್ಬಿ ಕೆಳಗೆ ಉರುಳಿದಾಗ! ಗಾಜಿನ ಡಬ್ಬಿ ಮೇಲಿಂದ ಬಿದ್ದ ಹೊಡೆತಕ್ಕೆ ಒಡೆದೇಹೋಗಿತ್ತು. ಏನಾಯಿತೆಂದು ಅರ್ಥವಾಗದ ಮರಿ, ತಾನೇ ಮಾಡಿದ ಶಬ್ದಕ್ಕೆ ಹೆದರಿ, ಅಲ್ಲಿಂದ ಪರಾರಿಯಾಯಿತು. ಬಿಲ ಸೇರುತ್ತಿದ್ದಂತೆಯೇ ಅಡುಗೆ ಮನೆಯಲ್ಲಿ ದೊಡ್ಡ ಗಲಾಟೆ ಕೇಳಿಬರತೊಡಗಿತು. ʻಚಕ್ಲಿ-ಉಂಡೆ ಎಲ್ಲಾ ಹೋಯ್ತುʼ ಎಂದೆಲ್ಲಾ ಧ್ವನಿಗಳು ಮಾತಾಡುತ್ತಿದ್ದವು.

ಇದನ್ನೂ ಓದಿ : ಮಕ್ಕಳ ಕಥೆ : ಬಾತ್ಕೋಳಿ ಮರಿಗಳ ಕಾಡಿನ ವಾಕಿಂಗ್

ಗದ್ದಲಕ್ಕೆ ಇಲಿಯಮ್ಮನಿಗೂ ಎಚ್ಚರವಾಗಿತ್ತು. ಬಿಲದೊಳಗೆ ನುಗ್ಗಿಬಂದ ಮರಿಯ ಮೈಯೆಲ್ಲಾ ರವೆ ಮೆತ್ತಿಕೊಂಡಿದ್ದು ಕಂಡು ಅಮ್ಮನಿಗೆ ಗಾಬರಿಯಾಯಿತು. ಹತ್ತಿರ ಕರೆದು ನೋಡಿದರೆ, ಮರಿಯ ಮೂತಿ, ಮೀಸೆ ಎಲ್ಲದರಿಂದಲೂ ಸಿಹಿ ಪರಿಮಳ ಬರುತ್ತಿತ್ತು. ಮರಿಯ ಕಿತಾಪತಿ ಏನೆಂದು ಸರಿಯಾಗಿ ಗೊತ್ತಾಗದಿದ್ದರೂ, ಈ ಭಾರೀ ಸದ್ದಿಗೆ ಇದೇ ಕಾರಣ ಎಂಬುದು ಅಮ್ಮನಿಗೆ ತಿಳಿಯಿತು. ಅದರ ಬಾಲ ಹಿಡಿದು ತಲೆ ಕೆಳಗಾಗಿ ನೇತಾಡಿಸಿದ ಅಮ್ಮ, ಮೂತಿಗೆರಡು ಬಾರಿಸಿತು. ʻಇನ್ನೊಂದು ಸಾರಿ ಹೇಳದೆ ಕೇಳದೆ ಬಿಲದಿಂದ ಹೊರಗೋಡಿದರೆ, ನಮ್ಮನೆಯ ಫ್ಯಾನಿಗೆ ನಿನ್ನ ಬಾಲ ಕಟ್ಟಿ ಹೀಗೆಯೇ ನೇತಾಡಿಸುತ್ತೇನೆʼ ಎಂದು ಖಡಕ್‌ ಎಚ್ಚರಿಕೆ ನೀಡಿತು.

ಅಮ್ಮನ ಮಾತನ್ನು ಕೇಳಿತೆ ಮರಿ? ಓದಿ, ಮುಂದಿನ ಭಾಗದಲ್ಲಿ!

Exit mobile version