Site icon Vistara News

ಮಕ್ಕಳ ಕಥೆ: ದುರಾಸೆಯ ರಾಜ

Greedy king
https://vistaranews.com/wp-content/uploads/2023/08/WhatsApp-Audio-2023-08-27-at-2.20.35-PM.mp3

ಗ್ರೀಸ್‌ ದೇಶದ ರಾಜನೊಬ್ಬನ ಕಥೆಯಿದು. ಆ ದೊರೆಯ ರಾಜ್ಯದಲ್ಲಿ ಬೇಕಾದಷ್ಟು ಸಂಪತ್ತಿತ್ತು. ಆತ ಸಾಕಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದ್ದ. ಪ್ರಜೆಗಳಿಗೆ ಅನುಕೂಲವನ್ನೂ ಒದಗಿಸಿಕೊಟ್ಟಿದ್ದ. ಆದರೆ ಅವನಲ್ಲೊಂದು ಕೆಟ್ಟ ಬುದ್ಧಿಯಿತ್ತು. ಅದು ಚಿನ್ನದ ಮೇಲಿನ ಅವನ ವ್ಯಾಮೋಹ. ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನು ಕೂಡಿಡಬೇಕು ಅನ್ನೋದು ಅವನ ಬಯಕೆಯಾಗಿತ್ತು. ಅದಕ್ಕಾಗಿಯೇ ಸಂಪತ್ತಿನ ದೇವತೆಯನ್ನು ಅವನು ಆರಾಧನೆ ಮಾಡುತ್ತಿದ್ದ. ಅವನ ಪೂಜೆಗೆ ಒಲಿದ ಸಂಪತ್ತಿನ ದೇವತೆ ಕಣ್ಮುಂದೆ ಪ್ರತ್ಯಕ್ಷಳಾಗಿ, ಏನು ಬೇಕು ಎಂದು ಕೇಳಿದಳು.

ಹೆಚ್ಚು ಯೋಚಿಸದ ಆತ, ತಾನು ಮುಟ್ಟಿದ್ದೆಲ್ಲಾ ಚಿನ್ನವಾಗಬೇಕು ಎಂದು ಕೇಳಿದ. ʻಸ್ವಲ್ಪ ಯೋಚಿಸು, ನಿಜಕ್ಕೂ ಅದೇ ನಿನ್ನ ಬಯಕೆಯೇ?ʼ ಎಂದು ಕೇಳಿದಳು ದೇವತೆ. ಹೌದು ಎಂದ ರಾಜ. ಅವನ ಕೋರಿಕೆಯನ್ನು ಆತನಿಗೆ ಕೊಟ್ಟು ದೇವತೆ ಮಾಯವಾದಳು. ಈ ವರ ನಿಜವೋ ಸುಳ್ಳೋ ನೋಡಬೇಕಲ್ಲ, ಹಾಗಾಗಿ ಉದ್ಯಾನವನಕ್ಕೆ ತೆರಳಿದ ರಾಜ ಸೇಬು ಹಣ್ಣಿನ ಮರವನ್ನು ಮುಟ್ಟಿದ. ಹಣ್ಣುಗಳ ಸಮೇತ ಇಡೀ ಮರ ಚಿನ್ನವಾಯಿತು. ರಾಜನಿಗೆ ಕುಣಿದಾಡುವಷ್ಟು ಖುಷಿಯಾಯಿತು. ಉದ್ಯಾನವನದಲ್ಲಿದ್ದ ಒಂದೊಂದೇ ಹೂವುಗಳನ್ನು ಮುಟ್ಟುತ್ತಾ ಬಂದ. ಸ್ವಲ್ಪ ಹೊತ್ತಿನಲ್ಲಿ ಇಡೀ ಉದ್ಯಾನವನ ಚಿನ್ನದ್ದಾಯಿತು. ಕುತೂಹಲಕ್ಕೆಂದು ಕೊಳದ ನೀರನ್ನು ಮುಟ್ಟಿದ- ನೀರು ಮಾತ್ರ ಚಿನ್ನವಾಗಲಿಲ್ಲ. ಅವನಿಗದು ವಿಚಿತ್ರವೆನಿಸಿತು.

ಅಷ್ಟರಲ್ಲಿ ಅವನಿಗೆ ಹಸಿವಾಗತೊಡಗಿತ್ತು. ತನಗಾಗಿ ನೀಡಿದ ವಿಶೇಷ ತಿನಿಸುಗಳನ್ನು ಆತ ಮುಟ್ಟುತ್ತಿದ್ದಂತೆಯೇ ಅದೆಲ್ಲಾ ಚಿನ್ನವಾಯಿತು. ಅರೆ! ಇದು ಎಡವಟ್ಟಾಯ್ತಲ್ಲ. ಈಗ ತಿನ್ನುವುದು ಹೇಗೆ ಎಂದು ಯೋಚಿಸಿದ ರಾಜನಿಗೆ ಸೇವಕಿಯರು ಊಟ ಮಾಡಿಸಿದರು. ಆದರೂ ತನ್ನದೇ ಕೈಯಲ್ಲಿ ಊಟ ಮಾಡಿದಷ್ಟು ರುಚಿಯಾಗಲಿಲ್ಲ ಆತನಿಗೆ. ಅಷ್ಟರಲ್ಲಿ ಆತನೆಡೆಗೆ ಓಡೋಡುತ್ತಾ ಬಂದಳು ಆತನ ಪುಟ್ಟ ಮಗಳು. ಅವಳನ್ನು ಎತ್ತಿಕೊಳ್ಳಬೇಕೆಂದು ಹಿಡಿಯುತ್ತಿದ್ದಂತೆಯೇ ಆಕೆ ಚಿನ್ನದ ಗೊಂಬೆಯಾಗಿ ಹೋದಳು!

ರಾಜ ದುಃಖದಿಂದ ಕುಸಿದು ಬಿದ್ದ. ಅವನಿಗೆ ಮಗಳೆಂದರೆ ಅತ್ಯಂತ ಪ್ರೀತಿಯವಳಾಗಿದ್ದಳು. ಈಗ ಇನ್ನೆಲ್ಲಿಯ ಮಗಳು! ಈ ಹಾಳಾದ ವರವನ್ನು ಯಾಕಾದರೂ ಪಡೆದೆನೊ ಎಂದು ಅಳುತ್ತಾ ಕುಳಿತ. ರಾಣಿಯಂತೂ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿ ಮಾಡಿದ್ದಕ್ಕೆ ರಾಜನನ್ನು ಮನಸೋಇಚ್ಛೆ ಬಯ್ಯುತ್ತಿದ್ದಳು. ಬೇರೆ ದಾರಿ ಕಾಣದ ರಾಜ, ಸಂಪತ್ತಿನ ದೇವತೆಯನ್ನೇ ಮತ್ತೆ ಪ್ರಾರ್ಥಿಸಿದ. ಪ್ರತ್ಯಕ್ಷಳಾದ ಆಕೆ ರಾಜನ ಬಯಕೆಯೇನು ಎಂದು ಕೇಳಿದಳು.

ಇದನ್ನೂ ಓದಿ : ಮಕ್ಕಳ ಕಥೆ: ಜಾಣ ಮುಂಗುಸಿ

ಮುಟ್ಟಿದ್ದೆಲ್ಲಾ ಚಿನ್ನವಾಗುವ ವರವನ್ನು ಮರಳಿ ತೆಗೆದುಕೊಳ್ಳಬೇಕೆಂದು ರಾಜ ಭಿನ್ನವಿಸಿಕೊಂಡ. ʻಇದೇ ನಿನ್ನ ಬಯಕೆಯೇ?ʼ ಮತ್ತೆ ಕೇಳಿದಳು ದೇವತೆ. ʻಹೌದು. ಅಷ್ಟೇ ಅಲ್ಲ, ಈವರೆಗೆ ಮುಟ್ಟಿ ಚಿನ್ನವಾಗಿದ್ದನ್ನೆಲ್ಲ ಮರಳಿ ಮೊದಲಿನಂತೆ ಮಾಡಬೇಕುʼ ಎಂದು ಅರಸ ಕೇಳಿದ. ಮುಟ್ಟಿದರೂ ಚಿನ್ನವಾಗದೇ ಉಳಿದಿದ್ದ ಉದ್ಯಾನವನದ ಕೊಳದ ನೀರನ್ನು ಎಲ್ಲದರ ಮೇಲೂ ಹಾಕುವಂತೆ ದೇವತೆ ಹೇಳಿಹೋದಳು.

ರಾಜ ಹಾಗೆಯೇ ಮಾಡಿದ. ಮರ-ಗಿಡ-ಹೂವು-ಹಣ್ಣುಗಳೆಲ್ಲ ಮೊದಲಿನಂತಾದವು. ರಾಜನ ಮಗಳೂ ಚಿನ್ನದ ಗೊಂಬೆಯಿಂದ ಮರಳಿ ಹುಡುಗಿಯಾದಳು. ಅಂದಿನಿಂದ ರಾಜನಿಗೆ ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಯಿತು.

Exit mobile version