Site icon Vistara News

ಮಕ್ಕಳ ಕಥೆ: ತಿಂಡಿಪೋತ ಇಲಿ ಮರಿ ಭಾಗ 2

Rat food
https://vistaranews.com/wp-content/uploads/2023/08/WhatsApp-Audio-2023-08-19-at-5.50.12-PM-2.mpeg.mp3

ಮಾರನೇ ದಿನ ಗೌರಿ ಹಬ್ಬ. ಬೆಳಗಿಂದಲೇ ಎಲ್ಲ ಕಡೆ ಜನರ ಓಡಾಟ, ಸರಿದಾಟ, ಗದ್ದಲ. ಹಿಂದಿನ ದಿನ ಮರಿ ಮಾಡಿದ ಅನಾಹುತ ಏನೆಂಬುದು ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಬೆಳಗಿನಿಂದ ಅದನ್ನು ಹೊರಗೆ ಹೋಗಲೇ ಬಿಟ್ಟಿರಲಿಲ್ಲ ಇಲಿಯಮ್ಮ. ಮಾತ್ರವಲ್ಲ, ಹಿಂದಿನ ದಿನ ತಿಂದ ಸಿಹಿ ಹೆಚ್ಚಾಗಿ ಅಜೀರ್ಣವೂ ಆಗಿದ್ದರಿಂದ ಹೊಟ್ಟೆ ನೋವು ಬಂದಿತ್ತು ಮರಿಗೆ. ಹಾಗಾಗಿ ಹೊಟ್ಟೆ ಹಿಡಿದು ಉರುಳಾಡುತ್ತಿತ್ತು ಮರಿ. ತಾನು ಬರುವವರೆಗೆ ಹೊರಗೆಲ್ಲಾದೂ ಹೋದರೆ ಜಾಗ್ರತೆ ಎಂದು ಅದಕ್ಕೆ ಗದರಿ, ಅಮ್ಮ ಔಷಧಿ ತರುವುದಕ್ಕೆ ಹೊರಗೆ ಹೋಯಿತು.

ಛೇ! ನಿನ್ನೆ ಅಷ್ಟೊಂದು ಉಂಡೆ ತಿನ್ನಬಾರದಿತ್ತು. ಅವತ್ತೀಗ ಹೊಟ್ಟೆ ನೋವು ತಡೆಯಲೇ ಆಗುತ್ತಿಲ್ಲ ಎಂದು ಪೆಚ್ಚಾಗಿ ಕೂತಿತ್ತು ಮರಿ. ಅಷ್ಟರಲ್ಲಿ ಬಿಲಕ್ಕೆ ಮರಳಿದ ಅಮ್ಮನ ಕೈಯಲ್ಲಿ ಸಣ್ಣದೊಂದು ಶುಂಠಿಯ ಚೂರಿತ್ತು. ಅದನ್ನು ಅಮ್ಮ ಈಗಷ್ಟೇ ಅಗೆದು ತಂದಿದ್ದರಿಂದ ಸ್ವಲ್ಪ ಮಣ್ಣೂ ಅದಕ್ಕೆ ತಾಗಿಕೊಂಡಿತ್ತು. ʻತಗೋ, ಜಗಿದೂ ಜಗಿದು ತಿನ್ನು. ಅಜೀರ್ಣ ಹೋಗತ್ತೆʼ ಎಂದು ಶುಂಠಿಯನ್ನು ಕೈಗಿತ್ತಿತು ಅಮ್ಮ. ʻಥೂ! ನಂಗ್ಬೇಡ. ಇದಕ್ಕೆ ಮಣ್ಣೆಲ್ಲಾ ಇದೆʼ ಅಂತು ಮರಿ. ʻಮಣ್ಣು ತಿನ್ನೋ ಕೆಲಸಾನೆ ಅಲ್ವಾ ನೀ ಮಾಡಿದ್ದು! ಏನಾಗಲ್ಲ, ಬಾಯಿಗೆ ಹಾಕಿ ಜಗಿ. ಹೊಟ್ಟೆ ನೋವು ಹೋಗತ್ತೆʼ ಅಂತು ಅಮ್ಮಿಲಿ.

ಹೊಟ್ಟೆ ನೋವು ಹೋಗುವುದಾದರೆ ಏನೂ ಮಾಡುವುದಕ್ಕೆ ಇಲಿ ಮರಿ ಸಿದ್ಧವಾಗಿತ್ತು. ಬಾಯಿಗೆ ಹಾಕಿದರೆ… ʻಅಯ್ಯೋ! ಖಾರಾ ಖಾರಾʼ ಎಂದು ಬೊಬ್ಬೆ ಹಾಕಿತು ಮರಿ ಇಲಿ. ʻಖಾರ ತಿನ್ನಕ್ಕೆ ತಾನೆ ನೆನ್ನೆ ಹೋಗಿದ್ದು ನೀನು. ಈಗ ಖಾರ ಇದೆಯಲ್ಲ ತಿನ್ನು. ಔಷಧಿಯನ್ನು ಉಗಿದರೆ ನಿನ್ನ ಗ್ರಹಚಾರ ಬಿಡಸ್ತೀನಿ, ಹುಷಾರ್!‌ʼ ಎಂದು ಅಮ್ಮ ಕಣ್ಣು ಬಿಟ್ಟಿತು. ಶುಂಠಿಯ ಖಾರಕ್ಕೆ ಇಲಿ ಮರಿಯ ಕಣ್ಣು, ಮೂಗಲೆಲ್ಲಾ ನೀರಿಳಿಯುತ್ತಿತ್ತು. ಅಂತೂ ಮೂಲೆಯಲ್ಲಿ ಕೂತು ಸೊರ ಸೊರ ಶಬ್ದ ಮಾಡುತ್ತಾ ತಿಂದು ಮುಗಿಸಿತು ಮರಿ. ಇಂಥಾ ಘೋರ ಔಷಧಿಯನ್ನದು ಯಾವತ್ತೂ ತಿಂದಿರಲಿಲ್ಲ. ಇನ್ನು ಹಾಳಾದ ರವೆ ಉಂಡೆಯನ್ನು ಎಂದಿಗೂ ತಿನ್ನಬಾರದು ಎಂದು ನಿರ್ಧರಿಸಿತ್ತು.

ರಾತ್ರಿಯವರೆಗೂ ಇಲಿಮರಿಗೆ ಹಸಿವೆಯೇ ಆಗಿರಲಿಲ್ಲ. ಹಾಗಾಗಿ ಅಮ್ಮ ಕೊಟ್ಟಿದ್ದ ದೋಸೆಯನ್ನು ಬೇಡ ಎಂದು ತಳ್ಳಿಹಾಕಿತ್ತು. ಆದರೆ ಮಲಗಿದ ಮೇಲೆ ಹೊಟ್ಟೆ ಚುರುಗುಡಲಾರಂಭಿಸಿತು. ಅಮ್ಮನಿಗೋ… ಜೋರು ನಿದ್ದೆ. ತಾನೇ ಹೋಗಿ ನೋಡಿದರಾಯ್ತು ಎಂದು ಮೆಲ್ಲನೆ ಬಿಲದಿಂದ ಹೊರಗೋಡಿತು. ಅಡುಗೆ ಮನೆಗೆ ಬಂದರೆ ಎಲ್ಲಿಂದಲೋ ಘಮ್ಮೆಂದು ವಡೆ ಕರಿದಿದ್ದ ಪರಿಮಳ ಬರುತ್ತಿತ್ತು. ಹಸಿವೆ ಹೆಚ್ಚಾದಂತೆನಿಸಿ ಇಲಿ ಮರಿ ವಡೆಯನ್ನು ಹುಡುಕತೊಡಗಿತು. ಮಿಯಾಂವ್‌ ಎನ್ನುತ್ತಾ ಆ ಕಗ್ಗತ್ತಲೆಯಲ್ಲಿ ಅದೆಲ್ಲಿಂದ ಬಂತೋ ಕರಿಬೆಕ್ಕು! ಅಂಗೈಯಲ್ಲಿ ಜೀವ ಹಿಡಿದು ಓಡತೊಡಗಿತು ಮರಿ. ಎಲ್ಲೆಲ್ಲೋ ಸಂದು-ಮೂಲೆಗಳಲ್ಲೆಲ್ಲಾ ಓಡಿ, ಕಡೆಗೊಂದು ಪೆಟ್ಟಿಗೆಯಂತೆ ಕಾಣುತ್ತಿದ್ದ ಜಾಗದೊಳಗೆ ಓಡಿತು. ಆ ಪೆಟ್ಟಿಗೆ ಬಾಗಿಲು ಫಟ್ಟನೆ ಮುಚ್ಚಿಕೊಂಡಿತು.

ಅಬ್ಬ! ಬದುಕಿದೆ. ಇಷ್ಟು ಸಣ್ಣ ಪೆಟ್ಟಿಗೆಯೊಳಗೆ ಬೆಕ್ಕು ಹೇಗೂ ನುಗ್ಗುವುದಿಲ್ಲ ಎಂದು ಇಲಿ ಮರಿಗೆ ಸಂತೋಷವಾಯ್ತು. ನೋಡಿದರೆ, ಆ ಪೆಟ್ಟಿಗೆಯೊಳಗಿನ ಕೊಕ್ಕೆಗೆ ಇದು ಹುಡುಕುತ್ತಿದ್ದ ವಡೆ ಸಿಕ್ಕಿಕೊಂಡಿತ್ತು! ಅರೆ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ಸಿಕ್ಕಿತು ಎಂದು ಖುಷಿಯಿಂದ ವಡೆ ತಿಂದಿತು ಮರಿ. ಹೊಟ್ಟೆ ತುಂಬಿದ ಮೇಲೆ ಹೊರಗೆ ಹೋಗುವುದಕ್ಕೆ ನೋಡಿದರೆ, ಅರೆ! ಇದರ ಬಾಗಿಲೇ ತೆಗೆಯುತ್ತಿಲ್ಲವಲ್ಲ ಎಂದು ಪರದಾಡಿತು. ಬಾಗಿಲು ತೆಗೆಯಲು ಹೇಗೆ ಸಾಧ್ಯ? ಇಲಿ ಮರಿ ಸಿಲುಕಿದ್ದು ಬೋನಿನಲ್ಲಿ!

ಇದನ್ನೂ ಓದಿ : ಮಕ್ಕಳ ಕಥೆ : ತಿಂಡಿಪೋತ ಇಲಿಮರಿ

ʻಛೇ! ಅಮ್ಮನ ಮಾತನ್ನು ಕೇಳಬೇಕಿತ್ತು ನಾನುʼ ಎಂದು ಕಣ್ಣೀರು ಹಾಕುತ್ತಾ ಬೆಳಗಿನವರೆಗೆ ಕುಳಿತಿತ್ತು ಇಲಿ ಮರಿ. ಬೆಳಗ್ಗೆ ಅಡುಗೆ ಮನೆಯೊಳಗೆ ಬಂದ ಅಜ್ಜನೊಬ್ಬ, ʻಇಲಿ ಬಿದ್ದಿದೆ ಬೋನಿಗೆ, ನೋಡು ಬಾ ಪಾಪುʼ ಎಂದು ಜೋರಾಗಿ ಕೂಗಿದರು. ಪಾಪುವೊಂದು ದಡದಡನೇ ಓಡಿಬಂತು. ʻಅಯ್ಯೋ, ಎಷ್ಟು ಮುದ್ದಾಗಿದೆʼ ಎಂದು ಸಂಭ್ರಮಿಸಿತು. ʻಇದನ್ನೇನು ಮಾಡ್ತೀರಾ ತಾತಾ?ʼ ಎಂದು ಅಜ್ಜನನ್ನು ಕೇಳಿತು. ʻಇದನ್ನ ಸಾಯಿಸಿಬಿಡ್ತೀನಿ!ʼ ಎಂದರು ತಾತ. ಮಗುವಿನ ಮುಖ ಬಾಡಿತು. ʻಗಣೇಶನ ಜೊತೆಗೆ ಇಲಿ ತಂದಿದ್ದೀರಲ್ಲಾ, ಇವತ್ತು ಪೂಜೆ ಮಾಡ್ತೀನಿ ಅಂದ್ರಿ ಮತ್ತೆ. ಇದನ್ನು ಸಾಯಿಸ್ತೀರಾ?ʼ ಕಣ್ಣಲ್ಲಿ ನೀರು ತುಂಬಿಕೊಂಡು ಕೇಳಿತು ಪಾಪು. ಅಜ್ಜನಿಗೆ ಏನನ್ನಿಸಿತೊ ಏನೋ, ಥಟ್ಟನೆ ಬೋನಿನ ಬಾಗಿಲು ತೆರೆದುಬಿಟ್ಟರು. ಅಲ್ಲಿಂದ ಒಂದುಸುರಿಗೆ ಓಡಿದ ಇಲಿ ಮರಿ ಬಿಲದೊಳಗೆ ಹೋಗಿ ಅಮ್ಮನನ್ನು ಅಪ್ಪಿಕೊಂಡಿತು. ಕಣ್ಣೊರೆಸಿಕೊಂಡ ಪಾಪು, ಅಜ್ಜನೊಂದಿಗೆ ನಗುತ್ತಿತ್ತು.

Exit mobile version