Site icon Vistara News

ಮಕ್ಕಳ ಕಥೆ: ಮೂರ್ಖ ಮಾಲಿಯ ನೆರವಿಗೆ ಮಂಗಗಳು ಬಂದಾಗ ಏನಾಯ್ತು?

monkey story
http://vistaranews.com/wp-content/uploads/2023/09/WhatsApp-Audio-2023-09-30-at-8.10.12-PM.mp3

ಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಊರಂಚಿನಲ್ಲಿ ಆತನಿಗೊಂದು ಸುಂದರವಾದ ತೋಟವಿತ್ತು. (kIds Corner) ಹಲವು ರೀತಿಯ ಫಲಭರಿತ ಮರಗಳು, ನಾನಾ ಬಣ್ಣದ ಹೂವಿನ ಗಿಡಗಳನ್ನೆಲ್ಲಾ ಆತ ಅಲ್ಲಿ ಬೆಳೆಸಿದ್ದ. ಆ ತೋಟದ ಮೇಲೆ ಆತನಿಗೆ ಬಹಳ ಪ್ರೀತಿಯೂ ಇತ್ತು. ಆ ತೋಟ ಸಾಕಷ್ಟು ವಿಸ್ತಾರವಾಗಿ ಇದ್ದಿದ್ದರಿಂದ ಅದನ್ನು ನೋಡಿಕೊಳ್ಳುವುದಕ್ಕೆ ಮಾಲಿಯೊಬ್ಬನನ್ನು ನೇಮಿಸಿಕೊಂಡ. ಆ ಮಾಲಿಯೂ ತನ್ನ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದ.

ಬೇಸಿಗೆ ಶುರುವಾಯಿತು. ನೆತ್ತಿ ಸುಡುವಂಥ ಬಿಸಿಲಿನಿಂದಾಗಿ ಶ್ರೀಮಂತನ ತೋಟದ ಗಿಡಗಳೆಲ್ಲಾ ಬಸವಳಿದು ಹೋಗುತ್ತಿದ್ದವು. ಹಾಗಾಗಿ ಪ್ರತೀದಿನ ಬಾವಿಯಿಂದ ನೀರೆತ್ತಿಕೊಂಡು ಎಲ್ಲಾ ಗಿಡಗಳಿಗೂ ನೀರುಣಿಸಬೇಕಾಗುತ್ತಿತ್ತು. ಆಗ ಮಾತ್ರವೇ ಬಾಡದಂತೆ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಈ ಕೆಲಸಕ್ಕೆ ಮಾಲಿಗೇನೂ ಬೇಸರವಿರಲಿಲ್ಲ. ಅವನಿಗೆ ಬೇಸರವಿದ್ದಿದ್ದು ಒಂದೇ ಕಾರಣಕ್ಕೆ. ಗಿಡಗಳಿಗೆ ನೀರು ಹಾಕುವವರಿಲ್ಲ ಎಂಬ ಕಾರಣಕ್ಕೆ ಆತನಿಗೆ ಶ್ರೀಮಂತ ರಜೆಯನ್ನೇ ನೀಡುತ್ತಿರಲಿಲ್ಲ. ಎಷ್ಟೇ ಗೋಗರೆದರೂ ಆತನಿಗೆ ಒಂದೇ ಒಂದು ದಿನವೂ ಆ ಸಾಹುಕಾರ ರಜೆ ನೀಡುತ್ತಿರಲಿಲ್ಲ.

ಒಮ್ಮೆ ಆತನ ಊರಿನ ಜಾತ್ರೆ ಬಂತು. ತನ್ನ ಕುಟುಂಬವನ್ನೆಲ್ಲಾ ಆ ಜಾತ್ರೆಗೆ ಕರೆದೊಯ್ಯಬೇಕು. ತಾನೂ ಅಲ್ಲೆಲ್ಲಾ ಅಡ್ಡಾಡಬೇಕು ಎಂಬ ಆಸೆ ಆತನಿಗಿತ್ತು. ಆದರೆ ಎಷ್ಟೇ ಕೇಳಿದರೂ ಸಾಹುಕಾರ ರಜೆ ಕೊಡುವುದಿಲ್ಲ ಎಂಬುದು ಆತನಿಗೆ ಖಾತ್ರಿಯಾಗಿತ್ತು. ಹಾಗೆಂದು ತಾನು ಮರಳಿ ಬರುವಷ್ಟರಲ್ಲಿ ಎರಡು ದಿನಗಳಾಗುತ್ತವೆ, ಅಷ್ಟರಲ್ಲಿ ಗಿಡಗಳೆಲ್ಲಾ ಬಾಡಿ ಹೋಗುತ್ತವೆ ಎಂಬುದೂ ಆತನಿಗೆ ತಿಳಿದಿತ್ತು. ಸಮೀಪದ ಕಾಡಿನಲ್ಲಿ ಯಾರಿಂದಲಾದರೂ ತನಗೆ ನೆರವು ದೊರೆಯಬಹುದೇ ಎಂದು ಯೋಚಿಸಿದ. ಆತನಿಗೆ ಉಪಾಯವೊಂದು ಹೊಳೆಯಿತು.

ಪಕ್ಕದ ಕಾಡಿನಲ್ಲಿ ದೊಡ್ಡ ಹಿಂಡು ಮಂಗಗಳು ವಾಸವಾಗಿದ್ದವು. ಆ ಮಂಗಗಳ ರಾಜನನ್ನು ಮಾಲಿ ಭೇಟಿ ಮಾಡಿದ. ಅಪರೂಪಕ್ಕೊಮ್ಮೆ ತಮ್ಮ ಹಿಂಡು ಆ ತೋಟಕ್ಕೆ ಭೇಟಿ ನೀಡಿದಾಗ, ಹೆದರಿಸಿ ಓಡಿಸುತ್ತಿದ್ದ ಈ ಮಾಲಿ ಈಗ ತನ್ನನ್ನೇಕೆ ನೋಡಲು ಬಂದಿದ್ದಾನೆ ಎಂದು ಮಂಗರಾಜನಿಗೆ ಕುತೂಹಲವಾಯಿತು. ವಿಷಯವೇನು ಎಂದು ಮಾಲಿಯನ್ನು ವಿಚಾರಿಸಿದ.

ʻಮಂಗರಾಜ, ನನಗೆ ಎರಡು ದಿನಗಳ ಮಟ್ಟಿಗೆ ನಮ್ಮೂರಿಗೆ ಹೋಗಬೇಕು. ನನಗೆ ನಮ್ಮ ಸಾಹುಕಾರರು ರಜೆ ಕೊಡುತ್ತಿಲ್ಲ. ಹಾಗಾಗಿ ನೀವೆಲ್ಲಾ ಸೇರಿ ನನಗೊಂದು ಉಪಕಾರ ಮಾಡಬೇಕುʼ ಎಂದು ಮಾಲಿ ವಿನಂತಿಸಿದ.
ʻಉಪಕಾರವೇ! ನಮಗೆಲ್ಲಾ ಮಾಲಿ ಕೆಲಸ ಮಾಡಲು ಬರುವುದಿಲ್ಲʼ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮಂಗರಾಜ.

ʻಅಯ್ಯೋ! ತುಂಬಾ ಕಷ್ಟದ ಕೆಲಸವಲ್ಲ. ತೋಟದ ಬಾವಿಯಿಂದ ನೀರೆತ್ತಿ ಎಲ್ಲಾ ಗಿಡಗಳಿಗೂ ಹಾಕಬೇಕು, ಅಷ್ಟೆ. ಗಿಡ ಹಸಿರಾಗಿದ್ದರೆ ನಾನು ರಜೆಯ ಮೇಲೆ ಹೋದರೂ ನಮ್ಮ ಸಾಹುಕಾರರು ಬಯ್ಯುವುದಿಲ್ಲ. ಇದೊಂದು ಉಪಕಾರ ಮಾಡಿʼ ಎಂದು ಕೇಳಿದ ಮಾಲಿ. ಮಂಗಗಳು ಒಪ್ಪಿಕೊಂಡವು. ಈತ ನೆಮ್ಮದಿಯಿಂದ ಸಂಸಾರ ಸಮೇತ ಜಾತ್ರೆಗೆ ಹೋದ.

ಮಾರನೇದಿನ ಮಂಗಗಳ ಹಿಂಡು ತೋಟಕ್ಕೆ ಬಂದಿಳಿಯಿತು. ಒಂದೆರಡು ಮಂಗಗಳು ಬಾವಿಯಿಂದ ನೀರೆತ್ತುವ ಕೆಲಸವನ್ನು ಶುರು ಹಚ್ಚಿದವು. ಉಳಿದವು ಗಿಡಗಳಿಗೆ ನೀರು ಹಾಕುವ ಕೆಲಸ ವಹಿಸಿಕೊಂಡವು. ಆದರೆ ಅವುಗಳಿಗೊಂದು ಗಂಭೀರವಾದ ಸಮಸ್ಯೆ ಎದುರಾಯಿತು. ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು? ತಮ್ಮ ರಾಜನನ್ನು ಕೇಳಿದವು. ʻಅಯ್ಯೋ! ಈ ವಿಷಯವನ್ನು ಮಾಲಿಯ ಬಳಿ ಕೇಳಲೇ ಇಲ್ಲವಲ್ಲ. ನನ್ನ ಪ್ರಜೆಗಳಿಗೆ ರಾಜನಾಗಿ ಏನಾದರೂ ಉತ್ತರ ಹೇಳಬೇಕುʼ ಎಂದು ಯೋಚಿಸಿದ ಮಂಗರಾಜ, ಗಿಡಗಳ ಬೇರು ಎಷ್ಟು ದೊಡ್ಡದಿದೆಯೋ ಅಷ್ಟು ಹೆಚ್ಚು ನೀರು ಹಾಕಿ ಎಂದು ಸೂಚಿಸಿತು.

ಬೇರು ಎಷ್ಟು ದೊಡ್ಡದಿದೆ ಎಂದು ನೋಡುವುದು ಹೇಗೆ ಎಂದು ಮಂಗಗಳು ತಂತಮ್ಮಲ್ಲೇ ಚರ್ಚಿಸಿದವು. ʻಕಿತ್ತು ನೋಡೋಣʼ ಎಂದು ಒಂದು ಮಂಗ. ಎಲ್ಲರಿಗೂ ಸರಿ ಎನಿಸಿತು. ಒಂದಿಷ್ಟು ಮಂಗಗಳು ಕೀಳುವ ಕಾರ್ಯ ವಹಿಸಿಕೊಂಡರೆ, ಇನ್ನಷ್ಟು ನೀರು ಹಾಕುವ ಹಾಗೂ ಮತ್ತಷ್ಟು ಪುನಃ ನೆಡುವ ಕೆಲಸ ವಹಿಸಿಕೊಂಡವು. ಕೆಲವೇ ನಿಮಿಷಗಳಲ್ಲಿ ಇಡೀ ತೋಟ ಬುಡಮೇಲಾಯಿತು. ಒಂದು ಗಿಡವನ್ನು ಇನ್ನೊಂದು ಗಿಡದ ಪಕ್ಕ ಹಿಡಿದು ಬೇರಿನ ಉದ್ದ ನೋಡುವುದು, ನೀರಲ್ಲಿ ತೇಲಿಸುವುದು ಮಾಡುತ್ತಾ, ಇಡೀ ತೋಟವನ್ನು ಕೆಸರು ಗದ್ದೆಯನ್ನಾಗಿ ಮಾಡಿದವು. ಬಾವಿಯ ನೀರೆಲ್ಲಾ ಖರ್ಚಾಗುತ್ತಾ ಬಂದಂತೆ ಇವರ ಕೆಲಸವೂ ಪೂರ್ಣಗೊಂಡಿತು. ಮಾಲಿ ಒಪ್ಪಿಸಿದ್ದ ಕೆಲಸವನ್ನು ಮಾಡಿ ಮುಗಿಸಿದ ತೃಪ್ತಿಯಿಂದ ಎಲ್ಲವೂ ಕಾಡಿನತ್ತ ತೆರಳಿದವು.

ಇದನ್ನೂ ಓದಿ : ಮಕ್ಕಳ ಕಥೆ: ಆಗೋದೆಲ್ಲಾ ಒಳ್ಳೆಯದಕ್ಕೆ!

ಮಾರನೇ ದಿನ ಬೆಳಗ್ಗೆ ಎಂದಿನಂತೆ ಸಾಹುಕಾರ ತೋಟದ ವೀಕ್ಷಣೆಗೆ ಬಂದ. ನೋಡಿದರೆ… ಇಡೀ ತೋಟ ಆನೆ ಹೊಕ್ಕಂತಿತ್ತು. ಕೆಂಡಾಮಂಡಲವಾದ ಶ್ರೀಮಂತ ಎಲ್ಲಿ ಹುಡುಕಿದರೂ ಮಾಲಿ ಮಾತ್ರ ಕಾಣಲಿಲ್ಲ. ಜಾತ್ರೆ ಮುಗಿಸಿದ ಮಾಲಿ ಮಧ್ಯಾಹ್ನದ ಹೊತ್ತಿಗೆ ತೋಟಕ್ಕೆ ಮರಳಿ ಬಂದ. ಆತನಿಗಾಗಿಯೇ ಕಾಯುತ್ತ ಕುಳಿತಿದ್ದ ಸಾಹುಕಾರ. ತೋಟದ ಸ್ಥಿತಿ ಕಂಡು ಮಾಲಿಯ ಕಣ್ಣಲ್ಲೂ ನೀರು ಬಂತು. ಜಾತ್ರೆಗೆ ಹೋಗಬೇಕಿದ್ದರಿಂದ ತಾನು ಮಾಡಿ ಹೋಗಿದ್ದ ಬದಲಿ ವ್ಯವಸ್ಥೆಯ ಬಗ್ಗೆ ಸಾಹುಕಾರನಲ್ಲಿ ಹೇಳಿದ ಮಾಲಿ ಕ್ಷಮೆ ಕೋರಿದ. ಕೆಟ್ಟ ಮೇಲೆ ಬುದ್ಧಿ ಬಂದರೆ ಏನು ತಾನೆ ಲಾಭ!

Exit mobile version