Site icon Vistara News

ಮಕ್ಕಳ ಕಥೆ: ಎಲ್ಲಿ ಕಳೆದು ಹೋಯ್ತು ಚುಕ್ಕಿ ಚಿರತೆಯ ನಗು?

leopard
http://vistaranews.com/wp-content/uploads/2023/09/Makkala-Kathe.mp3

ಒಂದು ಕಾಡು. ಆ ಕಾಡಲ್ಲೊಂದು ಚುಕ್ಕಿ ಚಿರತೆ ವಾಸ ಮಾಡ್ತಿತ್ತು. ಒಂದು ದಿನ ಆ ಚಿರತೆಗೆ ಸಿಕ್ಕಾಪಟ್ಟೆ ಬೇಜಾರಾಗೋಯ್ತು. ವಿಷಯ ಏನಪಾ ಅಂದ್ರೆ, ತನ್ನ ನಗು ಕಳೆದೋಗಿದೆ ಅಂತ ಚುಕ್ಕಿ ಚಿರತೆಗೆ ಚಿಂತೆ ಆಗಿತ್ತು. ʻಎಷ್ಟು ದಿನ ಆಯ್ತು ನಾನು ನಕ್ಕು! ಎಲ್ಲಿ ಕಳೆದೋಯ್ತು ನನ್ನ ನಗುʼ ಅಂತ ತನ್ನ ಸುತ್ತಮುತ್ತೆಲ್ಲಾ ಹುಡುಕಾಡಿದ್ರೂ ಅದಕ್ಕೆ ನಗು ಸಿಕ್ಕಿರಲಿಲ್ಲ. ಅದಕ್ಕೆ ಹ್ಯಾಪ್‌ ಮೋರೆ ಹಾಕ್ಕೊಂಡು ಕೂತಿತ್ತು. ಕಾಡಿನ ಪ್ರಾಣಿಗಳೆಲ್ಲಾ ಅದರ ಹತ್ತಿರ ಬಂದು, ʻಚಿಕ್ಕಿ ಚಿರತೆ, ಯಾಕೆ ಅಳತಾ ಕೂತೆ?ʼ ಅಂತ ವಿಚಾರಿಸಿದ್ವು. ಅಷ್ಟ್ ಕೇಳಿದ್ದೇ ಗೋಳೋ ಅಂತಾಳೋದಕ್ಕೆ ಶುರು ಮಾಡಿತು ಚಿರತೆ. ʻನನ್ನ ನಗುವೇ ಕಳೆದೋಗಿದೆ. ಎಲ್ಲಿ ಹುಡುಕಿದ್ರೂ ಸಿಗ್ತಿಲ್ಲ. ಏನ್‌ ಮಾಡ್ಲಿ?ʼ ಅಂತ ಬಿಕ್ಕುತ್ತಾ ಹೇಳಿತು. ಉಳಿದೆಲ್ಲಾ ಪ್ರಾಣಿಗಳಿಗೂ ಪಾಪ ಅನ್ನಿಸಿ, ಅವೂ ಚುಕ್ಕಿ ಚಿರತೆಯ ಕಳೆದೋದ ನಗುವನ್ನು ಹುಡುಕೋದಕ್ಕೆ ಶುರು ಮಾಡಿದ್ವು. ʻಚುಕ್ಕಿ, ನಿನ್ನ ನಗು ಎಷ್ಟು ದೊಡ್ಡದು?ʼ ಅಂತ ಒಂದು ಪ್ರಾಣಿ ಕೇಳಿದ್ರೆ, ಇನ್ನೊಂದು ʻನಿನ್ನ ನಗು ಯಾವ ಬಣ್ಣಕ್ಕಿತ್ತು?ʼ ಅಂತ ಕೇಳಿತು. ಹೀಗೆ ಪ್ರಾಣಿಗಳು ಕೇಳೋ ಯಾವ ಪ್ರಶ್ನೆಗೂ ಚುಕ್ಕಿ ಚಿರತೆಗೆ ಉತ್ತರ ಕೊಡೋದಕ್ಕೇ ಆಗ್ಲಿಲ್ಲ. ನೀನು ಏನೂ ಹೇಳದಿದ್ರೆ ನಾವಾದ್ರೂ ಹೇಗೆ ಹುಡುಕೋದು ಅಂತ ಉಳಿದ ಪ್ರಾಣಿಗಳು ಹೊರಟೋದ್ವು.

ಚುಕ್ಕಿ ಚಿರತೆಯ ಬೇಸರ ಇನ್ನೂ ಹೆಚ್ಚಾಯ್ತು. ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ ಬೇಜಾರಿನಿಂದ ಕಾಡೊಳಗೆ ಹೋಗ್ತಾ ಇರಬೇಕಾದ್ರೆ ಜಿರಾಫೆಯೊಂದು ಕಂಡಿತು. ʻಇದ್ಯಾಕೆ ಚುಕ್ಕಿ. ಆಕಾಶ ತಲೆ ಮೇಲೆ ಬಿದ್ದಂಗಿದ್ದೀಯ?ʼ ಅಂತ ಕೇಳಿತು ಜಿರಾಫೆ. ʻಏನ್‌ ಹೇಳಲಿ ಜಿರಾಫೆಯಕ್ಕ, ನನ್ನ ನಗು ಕಳೆದೋಗಿದೆ. ನೀ ತುಂಬಾ ಎತ್ತರ ಇದೀಯಲ್ಲಾ… ನೋಡು, ಮೇಲೆ ಗಾಳಿಲ್ಲೆಲ್ಲಾದ್ರೂ ಇದೆಯಾ ನಗು ಅಂತʼ ಕೇಳಿತು ಚುಕ್ಕಿ ಚಿರತೆ. ಮೇಲೆಲ್ಲಾ ಹುಡುಕಾಡಿದ ಜಿರಾಫೆ, ʻಊಹುಂ! ಕಾಣ್ತಿಲ್ವಲ್ಲೇ ಚುಕ್ಕಿ ಗಾಳಿಲ್ಲೆಲ್ಲೂ. ಎಲ್ಲಿ ಕಳಕೊಂಡಿದ್ದೀಯೊ ಏನೊʼ ಅಂತು.

ಅಲ್ಲಿಂದ ಗೋಳಾಡುತ್ತಾ ಮುಂದು ಹೋಗಬೇಕಾದ್ರೆ ಹೆಗ್ಗಣವೊಂದು ಎದುರಾಯ್ತು. ʻಇದೇನೆ ಚುಕ್ಕಿ, ಹಿಂಗೆ ಹರಳೆಣ್ಣೆ ಕುಡಿದ ಮುಖ ಮಾಡ್ಕಂಡಿದ್ದೀಯಲ್ಲೇʼ ಅಂತ ವಿಚಾರಿಸಿತು ಹೆಗ್ಗಣ್ಣ. ʻನೀನಾದ್ರೂ ಇದೀಯಲ್ಲ ನನ್ನ ಕಷ್ಟಕ್ಕೆ ಹೆಗ್ಗಣ್ಣ! ನನ್ನ ನಗು ಕಳೆದೋಗಿದೆ. ಭೂಮಿ ಒಳಗೆಲ್ಲಾದ್ರೂ ಇದೆಯಾ ನೋಡು ಸ್ವಲ್ಪʼ ವಿನಂತಿಸಿತು ಚಿರತೆ. ಭೂಮಿಯೊಳಗಿಳಿದ ಹೆಗ್ಗಣ್ಣ ಅಲ್ಲೆಲ್ಲಾ ಹುಡುಕಾಡಿ, ಎಲ್ಲೂ ಸಿಗದೆ ಪೆಚ್ಚ ಮೋರೆಯೊಂದಿಗೆ ಮೇಲೆ ಬಂತು. ಈಗಂತೂ ಚುಕ್ಕಿ ಚಿರತೆಯ ಗೋಳು ಇನ್ನೂ ಹೆಚ್ಚಾಯ್ತು.

ಸ್ವಲ್ಪ ನೀರಾದ್ರೂ ಕುಡಿಯೋಣ ಅಂತ ನದೀ ಹತ್ರ ಹೋಯ್ತು ಚಿರತೆ. ನೀರೆಲ್ಲಾ ಕುಡಿದು ಉಸ್ಸಪ್ಪಾ ಅಂತ ಕೂತಿದ್ದಾಗ, ʻಏನ್‌ ಚುಕ್ಕಿ, ಚನ್ನಾಗಿದ್ದೀಯ?ʼ ಅನ್ನೋ ಧ್ವನಿ ಕೇಳಿತು. ಯಾರದು ಮಾತಾಡಿದ್ದು ಅಂತ ಆಚೀಚೆ ನೋಡ್ತಿದ್ದಾಗ, ನೀರೊಳಗಿಂದ ನೀರಾನೆಯೊಂದು ಹೊರಬಂತು. ʻಓಹ್‌ ನೀನಾ!ʼ ಅಂದ ಚುಕ್ಕಿ, ಅದರ ಹತ್ರವೂ ತನ್ನ ಕಷ್ಟ ಹೇಳಿಕೊಂಡ್ತು. ʻಸ್ವಲ್ಪ ನೀರೊಳಗೆ ನೋಡ್ತೀಯಾ, ಅಲ್ಲೆಲ್ಲಾದ್ರೂ ಬಿದ್ದೋಗಿದ್ರೆ…ʼ ಅನ್ನೋ ಮನವಿಗೆ ನೀರಾನೆ ಹೊಳೆಯೊಳಗಿಳಿದು ಹುಡುಕಾಡ್ತು. ʻಇಲ್ಲ ಕಣೆ ಚುಕ್ಕಿ. ಎಲ್‌ ಬಿಟ್ಯೋ ಏನೋʼ ಅಂತು ನೀರಾನೆ. ಗಾಳಿ, ನೀರು, ಭೂಮಿ ಎಲ್ಲೂ ಇಲ್ವಲ್ಲಾ ತನ್ನ ನಗು ಅಂತ ಬಿಕ್ಕಿಬಿಕ್ಕಿ ಅಳುತ್ತಾ ಬರುವಾಗ ಅದಕ್ಕೊಂದು ಮಂಗಣ್ಣ ಎದುರಾಯ್ತು.

ʻಇದೇನು ಹಿಂಗೆ ಅಳ್ತಿದ್ದೀಯ? ಅಂಥದ್ದೇನಾಯ್ತು?ʼ ಕೇಳಿತು ಮಂಗಣ್ಣ. ತನ್ನ ನಗು ಕಳೆದ ಕಥೆಯನ್ನು ಮಂಗಣ್ಣನಿಗೂ ಒಪ್ಪಿಸಿತು ಚುಕ್ಕಿ. ಅದರ ಕಥೆಯನ್ನೆಲ್ಲಾ ಕೇಳಿದ ಮಂಗಣ್ಣ, ʻನಿನ್ನ ನಗು ಯಾವತ್ತು ಕಳೆದೋಯ್ತು?ʼ ವಿಚಾರಿಸ್ತು. ʻಯಾವತ್ತೂಂದ್ರೆ…!ʼ ಯೋಚನೆ ಮಾಡ್ತು ಚುಕ್ಕಿ. ʻನಾನು ಚಿಕ್ಕವಳಿರಬೇಕಾದ್ರೆ ತುಂಬಾ ನಗ್ತಿದ್ದೆ. ಆದರೆ ದೊಡ್ಡವಳಾಗ್ತಾ, ನಾನು ನಗ್ತಿದ್ದಂತೆ ನನ್ನ ಕೋರೆ ಹಲ್ಲುಗಳು ಹೊರಗೆ ಬರೋದನ್ನ ನೋಡಿ, ಉಳಿದ ಪ್ರಾಣಿಗಳು ಹೆದರಿ ನನ್ನ ಹತ್ರನೇ ಬರ್ತಿರಲಿಲ್ಲ. ಹಂಗಾಗಿ ನಗೋದನ್ನು ಕಡಿಮೆ ಮಾಡಿದೆ. ಅದ್ಯಾವತ್ತು ಕಳೆದೋಯ್ತು ಅನ್ನೋದೆ ನಂಗೆ ಗೊತ್ತಾಗ್ಲಿಲ್ಲʼ ಅಂತು ಚಿರತೆ.

ಸೀದಾ ಮರವೊಂದನ್ನು ಏರಿದ ಮಂಗ, ಅಲ್ಲಿದ್ದ ಹಕ್ಕಿಯ ಗೂಡೊಂದರಿಂದ ಪುಕ್ಕವೊಂದನ್ನು ತಂತು. ಅದನ್ನು ಚುಕ್ಕಿಯ ಕಿವಿಯೊಳಗೆ ಹಾಕಿ ತಿರುಗಿಸತೊಡಗಿತು. ಮಂಗಣ್ಣ ನೀಡುತ್ತಿದ್ದ ಕಚುಗುಳಿಯನ್ನು ತಡೆಯಲಾಗದ ಚುಕ್ಕಿ, ನಗುತ್ತಾ ಉರುಳಾಡೋದಕ್ಕೆ ಶುರು ಮಾಡ್ತು. ʻಅಯ್ಯೋ, ಸಾಕು ಸಾಕು ಮಂಗಣ್ಣಾ, ನಗು ತಡೆಯೋದಕ್ಕಾಗ್ತಿಲ್ಲ. ಹೊಟ್ಟೆಯಲ್ಲಾ ನೋವು ಬಂತುʼ ಅಂತು ಚಿರತೆ ಬಿದ್ದೂಬಿದ್ದು ನಗುತ್ತಾ. ಚುಕ್ಕಿಯ ನಗುವ ಧ್ವನಿಗೆ ಕಾಡಿನ ಪ್ರಾಣಿಗಳೆಲ್ಲಾ ಬಂದು ಸೇರಿದವು. ʻನಗು ಎಲ್ಲಿ ಸಿಗ್ತು?ʼ ಅನ್ನೋದೊಂದೇ ಅವುಗಳ ಪ್ರಶ್ನೆ.

ಇದನ್ನೂ ಓದಿ : ಮಕ್ಕಳ ಕಥೆ: ಪ್ರಾಣಿಗಳ ರಜಾ ದಿನ ಹೇಗಿತ್ತು ಗೊತ್ತಾ?

ʻಸಿಗೋದಕ್ಕೆ ಚುಕ್ಕಿಯ ನಗು ಎಲ್ಲೂ ಕಳೆದಿರಲಿಲ್ಲ, ಅವಳ ಒಳಗೇ ಇತ್ತು. ನಂನಮ್ಮ ನಗು ನಮ್ಮೊಳಗೇ ಇರತ್ತೆ. ಅದನ್ನು ಹುಡುಕಬೇಕಾದ್ದು ನಾವು. ಚುಕ್ಕಿ ನಕ್ಕಾಗ ಅವಳ ಹಲ್ಲುಗಳು ಎಷ್ಟು ಚಂದ ಕಾಣತ್ತೆ ನೋಡಿʼ ಅಂತು ಮಂಗಣ್ಣ. ಉಳಿದ ಪ್ರಾಣಿಗಳಿಗೂ ಈಗ ಚುಕ್ಕಿಯ ಹಲ್ಲು ಹೆದರಿಕೆ ಹುಟ್ಟಿಸುವ ಬದಲು, ಸುಂದರವಾಗಿ ಕಂಡಿತು. ಚುಕ್ಕಿಯ ನಗು ಮರಳಿ ಬಂತು.

Exit mobile version