ಮುಂಬೈ : ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರು ತಮ್ಮ ಅಭಿಮಾನಿಗಳಿಗೆ ನೋವಿನ ಸುದ್ದಿಯನ್ನು ಕೊಟ್ಟಿದ್ದಾರೆ. ಅದೇನೆಂದರೆ ಅವರು ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಗಾಯಕಿ ಅಲ್ಕಾ ಯಾಗ್ನಿಕ್ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮಗೆ ಅಪರೂಪದ ಸಂವೇದನಾ ನರಗಳ ಶ್ರವಣ ನಷ್ಟ ರೋಗವಿರುವುದಾಗಿ ತಿಳಿಸಿದ್ದಾರೆ. ಈ ರೋಗದಿಂದ ಬಳಲುವವರು ಇದ್ದಕ್ಕಿದ್ದಂತೆ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರಂತೆ. ಅಲ್ಕಾ ಅವರು ಈ ಬಗ್ಗೆ ವೈದ್ಯರ ಬಳಿ ತಪಾಸಣೆ ನಡೆಸಿದಾಗ ರೋಗ ಪತ್ತೆಯಾಗಿದೆಯಂತೆ. ಹಾಗೇ ತನ್ನ ಸಹೋದ್ಯೋಗಿಗಳಿಗೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.
ಕೆಲವು ವಾರಗಳ ಹಿಂದೆ ಅವರಿಗೆ ವಿಮಾನ ಪ್ರಯಾಣದ ವೇಳೆ ಏನೂ ಕೇಳುತ್ತಿರಲಿಲ್ಲವಂತೆ. ಆಗ ಈ ಬಗ್ಗೆ ವೈದ್ಯರ ಬಳಿ ತಪಾಸಣೆಗೆ ಹೋದಾಗ ರೋಗದ ವಿಚಾರ ತಿಳಿದುಬಂದಿದೆ. ಹಾಗಾಗಿ ಅವರು ತಮ್ಮ ಗಾಯಕ ವೃತ್ತಿಯಿಂದ ಹಿಂದೆ ಉಳಿದಿದ್ದರಂತೆ. ಈ ಬಗ್ಗೆ ಅವರ ಸ್ನೇಹಿತರು ಹಾಗೂ ಹಿತೈಷಿಗಳು ವಿಚಾರಿಸಲು ಶುರು ಮಾಡಿದ್ದರು. ಅಂದು ಏನನ್ನೂ ಹೇಳಲು ಬಯಸದ ಅವರು ಈಗ ಸ್ವಲ್ಪ ಧೈರ್ಯ ಮಾಡಿ ತಮ್ಮನ್ನು ಕಾಡುತ್ತಿರುವ ಕಾಯಿಲೆಯ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಬಹಿರಂಗಪಡಿಸಿದ್ದಾರೆ.
ಅಲ್ಕಾ ಅವರ ಸಂವೇದನಾ ನರಗಳಲ್ಲಿ ಸಮಸ್ಯೆಯಾಗಿ ಸರಿಯಾಗಿ ಕೇಳಿಸುವುದಿಲ್ಲವಂತೆ. ಹಾಗಾಗಿ ಅವರು ತಮ್ಮ ಅಭಿಮಾನಿಗಳು ಮತ್ತು ಯುವ ಸಹದ್ಯೋಗಿಗಳಿಗೆ ತುಂಬಾ ಜೋರಾಗಿ ಸಂಗೀತ ಮತ್ತು ಹೆಡ್ ಫೋನ್ ಗಳ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಹಾಗೇ ಎಲ್ಲರ ಬೆಂಬಲದೊಂದಿಗೆ ತಾನು ಈ ಕಾಯಿಲೆಯ ವಿರುದ್ಧ ಹೋರಾಡಿ ಅದನ್ನು ಗುಣಪಡಿಸಿಕೊಂಡು ಮತ್ತೆ ತನ್ನ ಜೀವನವನ್ನು ಮೊದಲಿನ ಹಾದಿಯಲ್ಲಿ ತಂದು ನಿಲ್ಲಿಸುವ ಮೂಲಕ ಎಲ್ಲರನ್ನೂ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ.
ಅವರ ಈ ಪೋಸ್ಟ್ ಗೆ ಹಲವು ಗಾಯಕರು ಬೆಂಬಲ ಸೂಚಿಸುವ ಮೂಲಕ ಕಾಮೆಂಟ್ ಮಾಡಿದ್ದಾರೆ. ಗಾಯಕ ಸೋನು ನಿಗಮ್ ಅವರು ಮತ್ತೆ ಅವರನ್ನು ಮೊದಲಿನಂತೆ ನೋಡುವ ಆಶಯ ವ್ಯಕ್ತಪಡಿಸಿ ಹಾರೈಸಿದ್ದಾರೆ. ಇಲಾ ಅರುಣ್ ಅವರು, ಗಾಯಕಿ ವೈದ್ಯರ ಆರೈಕೆಯಿಂದ ಬಹಳ ಬೇಗನೆ ಚೇತರಿಸಿಕೊಳ್ಳಲಿ ಮತ್ತೆ ಅವರ ಧ್ವನಿ ಕೇಳುವಂತಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Job News: ಕೇಂದ್ರ ಸರ್ಕಾರದಿಂದ ‘ಎಲೆಕ್ಟ್ರಾನಿಕ್’ ಯೋಜನೆ; 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ!
ಅಲ್ಕಾ ಅವರು 1980ರಲ್ಲಿ ಬಾಲಿವುಡ್ ನಲ್ಲಿ ತಮ ಗಾಯನ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಹಲವಾರು ಹಿಟ್ ಹಾಡುಗಳನ್ನು ಬಾಲಿವುಡ್ ಚಿತ್ರರಂಗಕ್ಕೆ ನೀಡಿದ್ದಾರೆ. ತೇಜಾಬ್ ದಲ್ಲಿ ಏಕ್ ದೋ ತೀನ್, ಲಾವಾರಿಸ್‌ನಲ್ಲಿ ಮೇರೆ ಅಂಗನೇ ಮೇ, ಕೂಲಿಯಿಂದ ಮುಜೆ ಪೀನೆ ಕಾ ಶಾಕ್ ನಹೀ, ಫೂಲ್ ಔರ್ ಕಾಂತೆಯಲ್ಲಿ ಧೀರೆ ಧೀರೆ ಪ್ಯಾರ್ ಕೋ ಬಡಾನಾ, ದಿಲ್ ವಾಲೆಯಲ್ಲಿ ಸಾತೋ ಜನಮ್ ಮೇ ತೇರೆ, ಕೋಯಿ ಮಿಲ್ ಗಯಾದಲ್ಲಿ ಹೈಲಾ ಹೈಲಾ, ಕಲ್ ಹೋ ನಾ ಹೋ ದಲ್ಲಿ ಕುಚ್ ತೋ ಹುವಾ ಹೈ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.