Site icon Vistara News

Amnesia Disease: ಈ ಗ್ರಾಮದಲ್ಲಿರುವ ಎಲ್ಲರೂ ಮರೆಗುಳಿಗಳು! ಇಲ್ಲಿ ಏನು ಖರೀದಿಸಿದರೂ ದುಡ್ಡೇ ಕೇಳುವುದಿಲ್ಲ!

Unique Village


ಸಾಮಾನ್ಯವಾಗಿ ಮರೆಗುಳಿತನ ಸಮಸ್ಯೆ ವಯಸ್ಸಾದಂತೆ ಕಾಡುತ್ತದೆ. ಆದರೆ ಇತ್ತೀಚೆಗೆ ಇದು ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಆದರೆ ಇಲ್ಲೊಂದು ವಿಚಿತ್ರವಾದ ಗ್ರಾಮವಿದೆ. ಈ ಗ್ರಾಮದಲ್ಲಿ ಬರೀ ಮರೆಗುಳಿತನ (Amnesia Disease) ಸಮಸ್ಯೆಯಿಂದ ಬಳಲುತ್ತಿರುವ ಜನರೇ ತುಂಬಿದ್ದಾರೆ. ಇಲ್ಲಿನ ಜನರಿಗೆ ಹಣದ ಅವಶ್ಯಕತೆಯೇ ಇಲ್ಲವಂತೆ. ಹಾಗಾದ್ರೆ ಈ ಗ್ರಾಮದಲ್ಲಿನ ಜನರು ಯಾಕೆ ಹೀಗಿದ್ದಾರೆ? ಇದಕ್ಕೆ ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.

ಫ್ರಾನ್ಸ್‌ನ ಲ್ಯಾಂಡೈಸ್ ಗ್ರಾಮವು ದೇಶದ ಇತರ ಸ್ಥಳಗಳಿಗಿಂತ ತುಂಬಾ ಭಿನ್ನವಾಗಿದೆ. ಯಾಕೆಂದರೆ ಇಲ್ಲಿ ಪ್ರತಿಯೊಬ್ಬ ನಿವಾಸಿಯೂ ಮರೆಗುಳಿತನದಿಂದ ಬಳಲುತ್ತಿದ್ದಾರೆ. 2020ರಲ್ಲಿ ಅಲ್ಝೈಮರ್ ವಿರುದ್ಧ ಹೋರಾಡುವ ಜನರಿಗೆ ಪ್ರಾಯೋಗಿಕ ಸಮುದಾಯವಾಗಿ ಲ್ಯಾಂಡೈಸ್ ಗ್ರಾಮವನ್ನು ಸ್ಥಾಪಿಸಲಾಯಿತು. ಇದನ್ನು ಬೋರ್ಡೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರ ಸಲಹೆ ಮೇರೆಗೆ ಸ್ಥಾಪಿಸಲಾಗಿದೆ. ಇದು ಅಲ್ಝೈಮರ್ ಪೀಡಿತ ರೋಗಿಗಳನ್ನು ನೋಡಿಕೊಳ್ಳಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಅಲ್ಲದೇ ಲಾಂಡೈಸ್ ಗ್ರಾಮದಲ್ಲಿ ವಾಸಿಸುವ ಯಾರೂ ಹಣವನ್ನು ಸಂಪಾದಿಸುವ ಅವಶ್ಯಕತೆಯಿಲ್ಲ. ಹಾಗಾಗಿ ಅವರು ಆ ಗ್ರಾಮದಲ್ಲಿ ಎಲ್ಲಿಗೇ ಹೋಗುವುದಾದರೂ ತಮ್ಮ ಪರ್ಸ್‌ಗಳನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಯಾಕೆಂದರೆ ಈ ಗ್ರಾಮದಲ್ಲಿರುವ ಯಾವ ಅಂಗಡಿಗಳೂ ಹಣವನ್ನು ಸ್ವೀಕರಿಸುವುದಿಲ್ಲ. ಅಲ್ಲದೇ ಈ ಗ್ರಾಮದಲ್ಲಿ ವಾಸಿಸಲು ಗ್ರಾಮಸ್ಥರು ವಾರ್ಷಿಕ € 28,000 ಶುಲ್ಕವನ್ನು ಪಾವತಿಸಿದರೆ ಸಾಕು. ಹೆಚ್ಚಿನ ನಿರ್ವಹಣಾ ವೆಚ್ಚಗಳನ್ನು ಪ್ರಾದೇಶಿಕ ಫ್ರೆಂಚ್ ಸರ್ಕಾರ ನೋಡಿಕೊಳ್ಳುತ್ತದೆ.

ಈ ಗ್ರಾಮದಲ್ಲಿ ಒಂದು ಮಹಡಿಯ ಮನೆಗಳಿರುತ್ತದೆ. ಪ್ರತಿಯೊಂದೂ ಮನೆಯಲ್ಲಿ ಎಂಟು ನಿವಾಸಿಗಳು ವಾಸವಾಗಿರುತ್ತಾರೆ. ಪ್ರತಿ ಮನೆ ಅಡುಗೆಮನೆ, ಕುಳಿತುಕೊಳ್ಳುವ ಮತ್ತು ಊಟದ ಕೋಣೆಗಳನ್ನು ಹೊಂದಿರುತ್ತದೆ. ಈ ಗ್ರಾಮದಲ್ಲಿ ಸುಮಾರು 120 ಜನರಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಗ್ರಾಮದಲ್ಲಿ ರೋಗಿಗಳ ಸೇವೆ ಮಾಡಲು ವೈದ್ಯರು, ನರ್ಸ್‌ಗಳು , ಜೆರೊಂಟೋಲಾಜಿಕಲ್ ಸಹಾಯಕರು, ಮನಶ್ಶಾಸ್ತ್ರಜ್ಞರು, ಔದ್ಯೋಗಿಕ ಚಿಕಿತ್ಸಕ, ಸೈಕೋಮೋಟರ್ ಥೆರಪಿಸ್ಟ್, ಆನಿಮೇಟರ್ಗಳು, ಜೊತೆಗೆ ಅಡುಗೆಯವರು, ಆಡಳಿತ ಸಿಬ್ಬಂದಿ ಇತ್ಯಾದಿಗಳನ್ನು ಒಳಗೊಂಡ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.

ಇದನ್ನೂ ಓದಿ:  ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸರತ್ತು; ಮುಂದೇನಾಯ್ತು ನೋಡಿ

65 ವರ್ಷದ ಪ್ಯಾಟ್ರೀಷಿಯಾ ಎಂಬ ಲಾಂಡೈಸ್ ನಿವಾಸಿಯೊಬ್ಬರು ಈ ಗ್ರಾಮದ ಬಗ್ಗೆ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿ, “ಅಲ್ಝೈಮರ್ ರೋಗಕ್ಕೆ ಒಳಗಾದರೆ ಜೀವನ ಅಷ್ಟೊಂದು ಸುಲಭವಲ್ಲ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಭಯಭೀತನಾಗಿದ್ದೆ. ನನಗೆ ಆರೋಗ್ಯ ಸರಿಯಿರಲಿಲ್ಲ. ನಾನು ದಣಿದಿದ್ದೆ. ಹಾಗಾಗಿ ನನಗೆ ಸಹಾಯ ಮಾಡಬಹುದಾದ ಯಾವುದಾದರೊಂದು ಆಶ್ರಮದಲ್ಲಿ ಇರಲು ಬಯಸುತ್ತಿದ್ದೆ. ಆದರೆ ಲಾಂಡೈಸ್ ನನ್ನ ಜೀವನವನ್ನು ಮರಳಿ ನೀಡಿದೆ. ಅಲ್ಲಿ ನನಗಾಗಿ ಅಡುಗೆ ಮಾಡಲು ಒಬ್ಬ ಮಹಿಳೆ ಇದ್ದಳು. ಇತರ ಆರೈಕೆ ಮನೆಗಳಲ್ಲಿ ಈ ತರಹದ ಸೌಲಭ್ಯಗಳಿರುವುದಿಲ್ಲ. ಆದರೆ ಇಲ್ಲಿ, ಜೀವನ ತುಂಬಾ ಸುಂದರವಾಗಿತ್ತು” ಎಂದು ಹೇಳಿದ್ದಾರೆ.

Exit mobile version