ಬೆಂಗಳೂರು: ಜುಲೈ ಆರಂಭದಲ್ಲಿ ಬೆಂಗಳೂರಿನಲ್ಲಿ ಏಳನೇ ́ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯ ನಿರ್ವಹಿಸಲಿದೆ. ಆದರೆ ಇದು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಸೀಮಿತ ಅವಧಿಗಳಲ್ಲಿ ಮಾತ್ರ ವಿಶೇಷ ರೈಲು (Vande Bharath Train ) ಸೇವೆಯಾಗಿ ಕಾರ್ಯ ನಿರ್ವಹಿಸಲಿದೆ ಎಂಬುದಾಗಿ ತಿಳಿದುಬಂದಿದೆ.
ಜೂನ್ ಆರಂಭದಲ್ಲಿ ದಕ್ಷಿಣ ರೈಲ್ವೆ (ಎಸ್ ಆರ್) ಎಸ್‌ಎಂವಿಟಿ ಬೆಂಗಳೂರು ಮತ್ತು ಮಧುರೈ ನಡುವೆ ಈ ವಿಶೇಷ ರೈಲು ಸೇವೆಯನ್ನು ಪರಿಚಯಿಸುವುದಾಗಿ ಘೋಷಿಸಿತ್ತು ಮತ್ತು ಆ ಬಗ್ಗೆ ಪ್ರಯೋಗ ನಡೆಸಿ ಯಶಸ್ಸನ್ನು ಕಂಡಿತ್ತು. ಹಾಗಾಗಿ ಈ ರೈಲು ಸೇವೆ ಜೂನ್ 20ರಂದು ಪ್ರಾರಂಭವಾಗಬೇಕಿತ್ತು. ಆದರೆ ಜೂನ್ 17ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಪಘಾತದಿಂದಾಗಿ ಈ ವಿಶೇಷ ರೈಲು ಸೇವೆಯನ್ನು ವಿಳಂಬಗೊಳಿಸಲಾಗಿತ್ತು.
ಹಾಗಾಗಿ ದಕ್ಷಿಣ ರೈಲ್ವೆ(ಎಸ್ ಆರ್) ಎಸ್ ಎಂವಿಟಿ ಅಧಿಕಾರಿಗಳು ರೈಲು ಪ್ರಾರಂಭವಾಗುವ ದಿನಾಂಕದ ಬಗೆಗಿನ ಅಧಿಕೃತ ಮಾಹಿತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಹಾಗೇ ಸದ್ಯಕ್ಕೆ ರೈಲ್ವೆ ಮಂಡಳಿಯು ತನ್ನ ನಿಯಮಿತ ಕಾರ್ಯಾಚರಣೆಯನ್ನು ತಿಳಿಸುವವರೆಗೂ ಈ ರೈಲು ವಿಶೇಷ ಸೇವೆಯಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ನಿರ್ದಿಷ್ಟ ಸಂಖ್ಯೆಯ ಟ್ರಿಪ್ ಗಳೊಂದಿಗೆ ವಿಶೇಷ ರೈಲು 14 ದಿನಗಳಲ್ಲಿ ಪ್ರಾರಂಭವಾಗಬಹುದು. ಈಗಾಗಲೇ ಮಧುರೈ ವಿಭಾಗವು ಟ್ರೈನ್ ಸೆಟ್ ಅನ್ನು ಪಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೀಸನ್ ಸಮಯದಲ್ಲಿ ಹೆಚ್ಚುವರಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ರೈಲ್ವೆಯು ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆದರೆ ಈ ವಂದೇ ಭಾರತ್ ಸೇವೆ ವಿಶೇಷ ರೈಲುಗಳಂತೆ ಕಾರ್ಯನಿರ್ವಹಿಸುವುದು ಅಪರೂಪ ಎನ್ನಲಾಗಿದೆ. ಬೆಂಗಳೂರು-ಮಧುರೈ ವಂದೇ ಭಾರತ್ ಅನ್ನು ಮಧುರೈ ಜಂಕ್ಷನ್ ನಲ್ಲಿ ನಿರ್ವಹಿಸಲಾಗುವುದು. ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ ನಂತರ ಅದರ ಕಾರ್ಯಚರಣೆಯ ವೇಗ ಮತ್ತು ದರಗಳ ಬಗ್ಗೆ ಮಾಹಿತಿ ತಿಳಿಯುತ್ತದೆ ಎನ್ನಲಾಗಿದೆ.
ಪ್ರಸ್ತುತ ಬೆಂಗಳೂರು-ಮಧುರೈ ನಗರಗಳ ನಡುವಿನ ಅತಿವೇಗದ ರೈಲು 9.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ವಂದೇ ಭಾರತ್ ಎಂಟು ಗಂಟೆಗಳಲ್ಲಿ 430 ಕಿಮೀ ದೂರವನ್ನು ಕ್ರಮಿಸುತ್ತದೆ. ಹಾಗಾಗಿ ಇದನ್ನು ಬೆಂಗಳೂರು-ಮಧುರೈ ನಗರಗಳ ನಡುವಿನ ಅತಿವೇಗದ ರೈಲು ಎಂದು ಕರೆಯಲಾಗಿದೆ.
ಬೆಂಗಳೂರಿನಿಂದ ಈಗಾಗಲೇ ಧಾರವಾಡ, ಕಲಬುರಗಿ, ಹೈದರಾಬಾದ್ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ್ ರೈಲುಗಳಿವೆ. ಅಲ್ಲದೇ ಚೆನ್ನೈ/ಮೈಸೂರಿಗೆ ಎರಡು ವಂದೇ ಭಾರತ್ ರೈಲುಗಳಿವೆ. ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸೇವೆ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಸಮಯ, ದರ ಮತ್ತು ನಿಲುಗಡೆ ಸ್ಥಳಗಳ ವಿವರ:
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಮಧುರೈನಿಂದ ಬೆಳಿಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 1.15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 1.45ಕ್ಕೆ ಹೊರಟು ರಾತ್ರಿ 10.25ಕ್ಕೆ ಮಧುರೈ ತಲುಪುತ್ತದೆ.
ರೈಲಿನ ದರವು 1200-1300 ರೂ. ಆಗಿರಬಹುದು. ಎಕ್ಸಿಕ್ಯೂಟಿವ್ ವರ್ಗದ ಪ್ರಯಾಣಿಕರಿಗೆ 1800-2000 ರೂ. ದರ ನಿಗದಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್! ಇದರ ಬೆಲೆ ಅಬ್ಬಬ್ಬಾ!
ಹಾಗೆಯೇ ದಿಂಡಿಗಲ್, ತಿರುಚಿರಾಪಳ್ಳಿ, ಕರೂರ್ ಮತ್ತು ಸೇಲಂಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ. ನಮಕ್ಕಲ್ ಮತ್ತು ಬೆಂಗಳೂರಿನ ಕೆಆರ್‌ಪುರಂನಲ್ಲಿ ಈ ರೈಲಿಗೆ ನಿಲುಗಡೆ ಸೌಲಭ್ಯ ಇರುವ ಸಾಧ್ಯತೆ ಇದೆ.