ಬೆಂಗಳೂರು: ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಮೆಟ್ರೋ ಮಾರ್ಗವು (Bengaluru Metro) 2031ರ ವೇಳೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
(ಬಿಎಂಆರ್ ಸಿಎಲ್) ತಿಳಿಸಿದೆ.
18 ತಿಂಗಳ ನಂತರ ಬಿಎಂಆರ್‌ಸಿಎಲ್ ಕಳೆದ ವಾರ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದೆ. ಈ ಯೋಜನೆಗೆ 26,405 ಕೋಟಿ ರೂ. ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ಭಾಷಣದಲ್ಲಿ ಅನೇಕ ಯೋಜನೆಗಳ ಘೋಷಣೆ ಮಾಡಿದ್ದರು. ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲು 8 ತಿಂಗಳ ಗಡುವನ್ನು ನಿಗದಿಪಡಿಸಿದ್ದರು. ಆಗ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ರೀನಾ ಕನ್ಸಲ್ಟಿಂಗ್ ಕಂಪನಿಗೆ ಗುತ್ತಿಗೆ ನೀಡಿತ್ತು. ಆಗ ಯೋಜನಾ ವೆಚ್ಚ 16,000 ಕೋಟಿ ರೂ. ಆಗಿತ್ತು. ಆದರೆ ಅದು ಈಗ ಹೆಚ್ಚಾಗಿದೆ ಎನ್ನಲಾಗಿದೆ.
ವರದಿ ಪ್ರಕಾರ ಈ ಯೋಜನೆಯು ಕೋರಮಂಗಲ 2ನೇ ಬ್ಲಾಕ್‌ನಿಂದ ಪಶುವೈದ್ಯಕೀಯ ಕಾಲೇಜಿನವರೆಗೆ 14.4 ಕಿ.ಮೀ ಅಂಡರ್ ಗ್ರೌಂಡ್ ಪ್ರದೇಶದಲ್ಲಿ 11 ನಿಲ್ದಾಣಗಳನ್ನು ಹೊಂದಿರುತ್ತದೆ. 22.1 ಕಿ.ಮೀ ಎತ್ತರದ ಕಾರಿಡಾರ್‌ನಲ್ಲಿ 17 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ನಿಲ್ದಾಣ ಸರ್ಜಾಪುರದಿಂದ ಕೋರಮಂಗಲ 2ನೇ ಬ್ಲಾಕ್ ಅನ್ನು ಸಂಪರ್ಕಿಸುತ್ತದೆ. ನಂತರ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳದವರೆಗೆ ಅಂಡರ್ ಗ್ರೌಂಡ್ ಮಾರ್ಗದಿಂದ ಮುಂದುವರಿಯುತ್ತದೆ ಎನ್ನಲಾಗಿದೆ. ಈ ಮಾರ್ಗವು 2031ರಲ್ಲಿ 6.21 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆ ವ್ಯಕ್ತವಾಗಿದೆ. 2041ರಲ್ಲಿ 7.2 ಲಕ್ಷ, 2051ರಲ್ಲಿ 8.51 ಲಕ್ಷ, ಹಾಗೂ 2061ರ ವೇಳೆಗೆ 9.5 ಲಕ್ಷ ಪ್ರಯಾಣಿಕರನ್ನು ಹೊಂದಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಇದನ್ನೂ ಓದಿ: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?
ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ಒಟ್ಟು 5400 ಮರಗಳನ್ನು ಕತ್ತರಿಸಲಾಗಿದೆ. ಆದರೆ ಅವುಗಳಲ್ಲಿ ಅರ್ಧದಷ್ಟು ಮರಗಳನ್ನು ಬೇರೆ ಕಡೆ ಕಸಿ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಮೆಟ್ರೋ 3ಎ ಮಾರ್ಗವು 8 ಇಂಟರ್ ಚೇಂಜ್‌ಗಳನ್ನು ಹೊಂದಿದ್ದು, ಸರ್ಜಾಪುರ, ಕಾರ್ಮಲರಾಮ್, ಇಬ್ಲೂರು, ಅಗರ, ಡೈರಿ ಸರ್ಕಲ್, ಶಾಂತಿನಗರ, ಕೆಆರ್ ಸರ್ಕಲ್ ಮತ್ತು ಹೆಬ್ಬಾಳದಲ್ಲಿ ಇದು ನಡೆಯಲಿದೆ. ಅಲ್ಲದೇ ಈ ಮಾರ್ಗವು 4 ನಿಲ್ದಾಣಗಳಲ್ಲಿ ಇತರ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುತ್ತದೆ. ಡೇರಿ ಸರ್ಕಲ್‌ನಲ್ಲಿ ಹಂತ 3ಎ ಲೈನ್ ಪಿಂಕ್ ಲೈನ್ ನ ಡೇರಿ ಸರ್ಕಲ್ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಕೆ ಆರ್ ವೃತ್ತದಲ್ಲಿ ಪರ್ಪಲ್ ಲೈನ್‌ನ ಸರ್ ಎಂ ವಿ ಸ್ಟೇಷನ್ ಅನ್ನು ಹಾಗೂ ಇಬ್ಲೂರು ಮತ್ತು ಹೆಬ್ಬಾಳದಲ್ಲಿ ಬ್ಲೂಲೈನ್ ಅದೇ ನಿಲ್ದಾಣಗಳನ್ನು, ಕಾರ್ಮಲರಾಮ್‌ನಲ್ಲಿ ರೈಲು ಮಾರ್ಗಗಳೊಂದಿಗೆ ಈ ಮಾರ್ಗ ಸಂಪರ್ಕಿಸುತ್ತದೆ ಎನ್ನಲಾಗಿದೆ.