ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷಗಳು ಪೂರ್ಣಗೊಳಿಸಿದ ಅಂಗವಾಗಿ ಬಿಜೆಪಿ ಅಭಿಮಾನೋತ್ಸವ ಹಮ್ಮಿಕೊಂಡಿದೆ. ಈ ಅಭಿಮಾನೋತ್ಸವವು ಚಿತ್ರದುರ್ಗದಲ್ಲಿ ಮೇ 9 ರಂದು ನಡೆಯಲಿದ್ದು, ಗೃಹಮಂತ್ರಿ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮ ವಿವರ ನೀಡಿದರು.
ಅಭಿಮಾನೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಪ್ರಿಲ್ 26ರಂದು ಬೆಳಿಗ್ಗೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಭೂಮಿಪೂಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಮಾಜಸೇವೆ ಕುರಿತು ಅವರ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ ಎಂದರು.
ಅಭಿಮಾನೋತ್ಸವದ ಹಿಂದಿನ ದಿನ ಅಂದರೆ 8ರಂದು ಸಂಜೆ 6 ಗಂಟೆಗೆ ಯಡಿಯೂರಪ್ಪನವರ ಪುರಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಕಾರಜೋಳ ವಿವರ ನೀಡಿದರು.
ನಾಡಿನ ಎಲ್ಲಾ ಮಠಾಧೀಶರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು ಮತ್ತು ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಲ್ಲ ಸಾಹಿತಿಗಳು, ಒಡನಾಡಿಗಳು, ಕಲಾವಿದರು ಸೇರಿ ಸಮಾಜದ ಎಲ್ಲ ರಂಗದವರು ಭಾಗವಹಿಸುತ್ತಾರೆ. ಅಲ್ಲದೇ ಸಾರ್ವಜನಿಕರು ಮತ್ತು ರೈತ ಮುಖಂಡರೂ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಚಿತ್ರದುರ್ಗ ಕರ್ನಾಟಕದ ಕೇಂದ್ರ ಬಿಂದು. ಆದ್ದರಿಂದ ಆ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಯಡಿಯೂರಪ್ಪ ಅವರು ಜನನಾಯಕರು. ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು. ಆದರೆ ಜನತಾದಳದಿಂದ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯನವರು ಬೇರೆಯವರ ಹೆಗಲ ಮೇಲೆ ಕುಳಿತು ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ. ನಮ್ಮದು ಹಾಗಲ್ಲ; ಯಡಿಯೂರಪ್ಪನವರೇ ಕಟ್ಟಿ ಬೆಳೆಸಿದ ಪಕ್ಷ ಎಂದು ತಿಳಿಸಿದರು.
ಯಡಿಯೂರಪ್ಪ ಕೊಡುಗೆ ಅನನ್ಯ: ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಸಂಭ್ರಮಾಚರಣೆ ಮೂಲಕ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿಗೆ ಯಡಿಯೂರಪ್ಪ ಅವರ ಕೊಡುಗೆಯನ್ನು ಎಲ್ಲ ವರ್ಗದವರೂ ಪ್ರಶಂಸಿಸುತ್ತಾರೆ. ಇದಕ್ಕಾಗಿ ಅರ್ಥಪೂರ್ಣ, ಭವ್ಯ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿಗಳು ಬರಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಜನರು ಬರಲಿದ್ದಾರೆ. ಒಂದು ಐತಿಹಾಸಿಕ ಕಾರ್ಯಕ್ರಮ ಇದಾಗಲಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕ ಅನಿಲ್ ಬೆನಕೆ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪ ರಾಜಕೀಯ ಪ್ರವೇಶಿಸಿ 50 ವರ್ಷ: ಮೇ 9 ರಂದು ಅಭಿಮಾನೋತ್ಸವ: ಸಂಸದ ಗೋವಿಂದ ಕಾರಜೋಳ

