Site icon Vistara News

Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

Char Dham Yatra 2024

ಚಾರ್ ಧಾಮ್ ಯಾತ್ರೆ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತಾರೆ. ಆದರೆ ಎಲ್ಲರಿಗೂ ಅಲ್ಲಿ ಹೋಗೋ ಅವಕಾಶ ಸಿಗುವುದಿಲ್ಲ. ಹಲವು ಬಾರಿ ಯೋಜನೆ ಮಾಡಿ ಯಾವುದೋ ಕಾರಣದಿಂದ ಅದನ್ನು ಮುಂದೂಡಿರುತ್ತಾರೆ. ಆದರೆ ಈ ಬಾರಿ ಬೇಸಿಗೆ ರಜೆಯಲ್ಲೇ (summer holidays) ಚಾರ್ ಧಾಮ್ ಯಾತ್ರೆ (Char Dham Yatra 2024) ಮಾಡಿ ಬರಬಹುದು.

ಚಾರ್ ಧಾಮ್ ಯಾತ್ರೆ ಎಂದೇ ಕರೆಯಲ್ಪಡುವ ಉತ್ತರಾಖಂಡದ (uttarakhand) ನಾಲ್ಕು ಪವಿತ್ರ ಕ್ಷೇತ್ರಗಳಾದ ಗಂಗೋತ್ರಿ (Gangotri), ಯಮುನೋತ್ರಿ (Yamunotri), ಕೇದಾರನಾಥ ( Kedarnath) ಮತ್ತು ಬದರಿನಾಥರ (Badrinath) ವಾರ್ಷಿಕ ತೀರ್ಥಯಾತ್ರೆಯ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದೆ.
ಯಾತ್ರೆಗೆ ಬರಲು ಇಚ್ಛಿಸುವವರು ಪ್ರವಾಸೋದ್ಯಮ ಇಲಾಖೆಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 10ರಂದು ಪ್ರಾರಂಭ

ವಾರ್ಷಿಕ ಚಾರ್ ಧಾಮ್ ಯಾತ್ರೆಯು ಮೇ 10ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಈ ಮೂರು ದೇಗುಲಗಳಲ್ಲಿ ಬಾಗಿಲನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ. ಬದರಿನಾಥ ದೇವಾಲಯದ ಬಾಗಿಲು ಮೇ 12 ರಂದು ಸಾರ್ವಜನಿಕರಿಗೆ ತೆರೆಯಲಾಗುವುದು.

ಇದನ್ನೂ ಓದಿ: Mantralaya Tour: ಮಂತ್ರಾಲಯಕ್ಕೆ ಒಂದೇ ದಿನದಲ್ಲಿ ಹೋಗಿ ಬರಬೇಕೆ? ಈ ರೈಲುಗಳಲ್ಲಿ ಹೊರಡಿ

ಆರು ತಿಂಗಳು ಬಂದ್

ಪ್ರತಿ ವರ್ಷ ಲಕ್ಷಾಂತರ ಭಕ್ತರು ಎತ್ತರದಲ್ಲಿರುವ ಈ ಪವಿತ್ರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಚಳಿಗಾಲದ ತಿಂಗಳ ಆರಂಭದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಲಾಗುತ್ತದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಿನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ.

ಪ್ರದಕ್ಷಿಣಾಕಾರ ಪೂಜೆ

ಹಿಂದೂ ಧರ್ಮದಲ್ಲಿ ಈ ಪವಿತ್ರ ದೇವಾಲಯಗಳು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. ಇಲ್ಲಿ ಪ್ರದಕ್ಷಿಣಾಕಾರವಾಗಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದೇ ನಂಬಲಾಗಿದೆ. ಹೀಗಾಗಿ ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗುತ್ತದೆ, ಗಂಗೋತ್ರಿ ಕಡೆಗೆ ಸಾಗುತ್ತದೆ, ಕೇದಾರನಾಥದ ಭೇಟಿ ಬಳಿಕ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.

ನೋಂದಣಿ ಹೇಗೆ?

ಚಾರ್ ಧಾಮ್ ಯಾತ್ರೆಗೆ ಹೋಗಲು ಇಚ್ಛಿಸುವವರು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಚಾರ್ ಧಾಮ್ ಯಾತ್ರೆಗಾಗಿ ಗೊತ್ತುಪಡಿಸಿದ ಅಧಿಕೃತ ವೆಬ್‌ಸೈಟ್‌ನಲ್ಲಿ andtouristcare.uk.gov.in ಅಥವಾ registrationandtouristcare.uk.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಮೊದಲು ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟರ್ ಅಥವಾ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹೆಸರು, ಸಂಪರ್ಕ ಸಂಖ್ಯೆ, ಇಮೇಲ್ ಐಡಿ, ಇತ್ಯಾದಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಿ.

ಬಳಿಕ ಹೊಸ ಡ್ಯಾಶ್‌ಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ವ್ಯಕ್ತಿಯು ಪ್ರಯಾಣದ ದಿನಾಂಕಗಳು, ಪ್ರವಾಸಿಗರ ಸಂಖ್ಯೆ, ಭೇಟಿ ನೀಡಲು ದೇವಾಲಯಗಳು ಸೇರಿದಂತೆ ಹೆಚ್ಚಿನ ಪ್ರವಾಸದ ವಿವರಗಳನ್ನು ನೋಡಬಹುದು.
ನೋಂದಣಿ ಪೂರ್ಣಗೊಂಡ ಅನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೋಂದಣಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ ಮತ್ತು ಮುಂದೆ ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ನೋಂದಣಿಗೆ ಬೇರೆ ಅವಕಾಶವೂ ಇದೆ

ವೆಬ್‌ಸೈಟ್‌ನ ಹೊರತಾಗಿ ಪ್ರವಾಸಿಗರು ಟೂರಿಸ್ಟ್‌ಕೇರರ್ ತಾರಾಖಂಡ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಲು ಇನ್ನೊಂದು ಮಾರ್ಗವೆಂದರೆ WhatsApp ನಲ್ಲಿ 8394833833 ಗೆ ಸಂದೇಶ ಕಳುಹಿಸುವುದು. ಪ್ರವಾಸೋದ್ಯಮ ಇಲಾಖೆಯು ಟೋಲ್ ಫ್ರೀ ಸಂಖ್ಯೆ 0135-1364 ಅನ್ನು ಡಯಲ್ ಮಾಡುವ ಮೂಲಕ ನೋಂದಣಿ ಸೇವೆಯನ್ನು ಪೂರ್ಣಗೊಳಿಸಬಹುದು.

ಇದಲ್ಲದೇ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ರಿಷಿಕೇಶ ಮತ್ತು ಹರಿದ್ವಾರದಲ್ಲಿ ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಿದೆ. ಅಲ್ಲಿ ಯಾತ್ರಾರ್ಥಿಗಳು ಆಫ್‌ಲೈನ್ ನೋಂದಣಿ ನಡೆಸಬಹುದು. ಯಾತ್ರಿಕರು ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ ಅಗತ್ಯ ದಾಖಲೆಗಳನ್ನು ಇಲ್ಲಿ ತೋರಿಸಬೇಕಾಗುತ್ತದೆ.

ದೇಗುಲಗಳ ವಿಶೇಷತೆ


ಯಮುನೋತ್ರಿ ಧಾಮ್ ದೇವಾಲಯವು ಯಮುನಾ ನದಿಯ ಮೂಲಕ್ಕೆ ಸಮೀಪದಲ್ಲಿ 3,293 ಮೀಟರ್ ಎತ್ತರದಲ್ಲಿ ಕಿರಿದಾದ ಕಂದರದಲ್ಲಿದೆ. ದೇವಾಲಯವು ಅಕ್ಷಯ ತೃತೀಯದಂದು ತೆರೆಯುತ್ತದೆ. ಚಳಿಗಾಲಕ್ಕಾಗಿ ಮುಂಚಿತವಾಗಿ ಯಮ ದ್ವಿತೀಯ ಅಂದರೆ ದೀಪಾವಳಿಯ ಅನಂತರ ಎರಡನೇ ದಿನ ಮುಚ್ಚುತ್ತದೆ. ಯಮುನೆಯ ನಿಜವಾದ ಮೂಲವು ಸುಮಾರು 4,421 ಮೀಟರ್ ಎತ್ತರದಲ್ಲಿ ದೇವಸ್ಥಾನಕ್ಕಿಂತ ಸ್ವಲ್ಪ ಮುಂದಿದೆ.


ಗಂಗೋತ್ರಿ ಗಂಗಾ ನದಿಯ ಅಥವಾ ಗೌಮುಖ ನದಿಯ ಮೂಲವೆಂದು ಪರಿಗಣಿಸಲಾಗಿದೆ. ಗಂಗೋತ್ರಿ ಧಾಮವು ಭಾಗೀರಥಿಯ ಬಲದಂಡೆಯಲ್ಲಿ ಸಮುದ್ರ ಮಟ್ಟದಿಂದ 3,140 ಮೀಟರ್ ಎತ್ತರದಲ್ಲಿದೆ.


ಕೇದಾರನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ರುದ್ರಪ್ರಯಾಗ ಜಿಲ್ಲೆಯ ಮಂದಾಕಿನಿ ನದಿಯ ಸಮೀಪದಲ್ಲಿದೆ.


ಭಗವಾನ್ ವಿಷ್ಣುವಿನ ಪವಿತ್ರ ಚಾರ್ ಧಾಮಗಳಲ್ಲಿ ಒಂದಾಗಿರುವ ಬದರಿನಾಥವನ್ನು ಭೂಮಿಯ ಮೇಲಿನ ವೈಕುಂಠ ಅಂದರೆ ಭಗವಾನ್ ವಿಷ್ಣುವಿನ ನಿವಾಸ ಎಂದು ಪರಿಗಣಿಸಲಾಗಿದೆ. ಸುಮಾರು 3,100 ಮೀ. ಎತ್ತರದಲ್ಲಿ ಗರ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಡದಲ್ಲಿ ಈ ಪವಿತ್ರ ಪಟ್ಟಣವು ನಾರ್ ಮತ್ತು ನಾರಾಯಣ ಪರ್ವತ ಶ್ರೇಣಿಗಳ ನಡುವೆ ಇದೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಋಷಿ ಆದಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ನಂಬಲಾಗಿದೆ.

Exit mobile version