ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಹಾವು ಏಣಿಯಾಟ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರು ಶಾಸಕರೊಂದಿಗೆ ಗುಪ್ತ ಸಭೆ ನಡೆಸಿದ್ದರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯಾಗಲು ಅವಕಾಶ ಕೊಡಲೇಬೇಕು ಎಂದು ಮತ್ತೊಮ್ಮೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಆದರೆ ವರಿಷ್ಟರು ಅಂತಿಮ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಒಬ್ಬರು ಸೋನಿಯಾ ಗಾಂಧಿ, ಮತ್ತೊಬ್ಬರು ರಾಹುಲ್ ಗಾಂಧಿ ಅವರತ್ತ ಬೊಟ್ಟು ಮಾಡಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದ್ದಾರೆ.
“ಇಷ್ಟೊಂದು ಆತುರವೇಕೆ? ಮೇ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿ. ಅದುವರೆಗೂ ತಾಳ್ಮೆಯಿಂದ ಕಾಯಿರಿ” ಎಂದು ವರಿಷ್ಠರೊಬ್ಬರು ಸಲಹೆ ನೀಡಿದ್ದಾರೆ ಎಂದು ಶಿವಕುಮಾರ್ ಆಪ್ತರೊಬ್ಬರು ಹೇಳುತ್ತಾರೆ. ಕಳೆದ 8-10 ತಿಂಗಳಿನಿಂದ ಒಂದಿಲ್ಲೊಂದು ಕಾರಣವನ್ನು ಮುಂದೊಡ್ಡಿ ಅವಕಾಶ ತಪ್ಪಿ ಹೋಗುತ್ತಲೇ ಇದೆ. ಬಜೆಟ್, ಉಪ ಚುನಾವಣೆ, ಕೇಂದ್ರ ಅಧಿವೇಶನ, ಐದು ರಾಜ್ಯಗಳ ಚುನಾವಣೆ ಹೀಗೆ ಒಂದಲ್ಲ ಒಂದು ನೆಪವೊಡ್ಡಿ ಶಿವಕುಮಾರ್ ಅವರನ್ನು ಸುಮ್ಮನಿರಿಸುತ್ತಾ ಬರಲಾಗಿದೆ.
ಈಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನೆಪವನ್ನು ಮುಂದೊಡ್ಡಿ ಅಧಿಕಾರ ಉಳಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಅಂಶವನ್ನಿಟುಕೊಂಡು ಅವರು ನಿನ್ನೆ ರಾತ್ರಿ ತಮ್ಮ ಆಪ್ತ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಪ್ರತಿಬಾರಿ ದೆಹಲಿಗೆ ತೆರಳಿದಾಗಲೂ ಶಿವಕುಮಾರ್ ಅವರು, ತಮ್ಮ ಶ್ರಮಕ್ಕೆ “ಪ್ರತಿಫಲ”ವನ್ನು ಕೇಳುತ್ತಲೇ ಇದ್ದಾರೆ. ಆದರೆ ಫಲ ಮಾತ್ರ ಮರೀಚಿಕೆಯಾಗಿದೆ. ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಅವರು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಗಲೂ ಸಿಕ್ಕ ಅವಕಾಶದಲ್ಲಿ ಅವರ ಕಿವಿಗೆ ಹಾಕಿದ್ದಾರೆ.
ದೆಹಲಿಯಲ್ಲಿ ಶಿವಕುಮಾರ್ ಅವರ ಜತೆ ಮಾಜಿ ಸಂಸದ ಡಿಕೆ ಸುರೇಶ್ ಅವರೂ ಜತೆಗೂಡಿದ್ದಾರೆ. ಈ ಬಾರಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಸ್ಪಷ್ಟತೆ ನೀಡಲೇಬೇಕು ಎಂದು ಒತ್ತಡ ಹೇರಿದ್ದಾರೆ.
ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಯಾರನ್ನು ಭೇಟಿ ಮಾಡಿದೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಜವಬ್ದಾರಿ ಸ್ಥಾನದಲ್ಲಿರುವ ನಾನು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗುವುದಿಲ್ಲ. ನೀವು ನನ್ನಿಂದ ಈ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನವನ್ನೂ ಮಾಡಬೇಡಿ ಎಂದು ಉತ್ತರಿಸಿದ್ದಾರೆ.
ಸಿಎಂ-ಡಿಸಿಎಂ ನಡುವೆ ಅಧಿಕಾರ ಹಂಚಿಕೆ ಸೂತ್ರ ಆಗಿದೆಯೇ ಎನ್ನುವುದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ. ಆ ಸಂದರ್ಭದಲ್ಲಿ ಶಿವಕುಮಾರ್ ಇಡಿ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದರು. ಹಾಗಾಗಿ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಆಗಬಹುದು ಎಂದು ಹೈಕಮಾಂಡ್ ಸೂತ್ರ ಹೆಣೆದಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಹಲವು ತಿಂಗಳಿನಿಂದ ಸಿದ್ದರಾಮಯ್ಯ-ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಶೀತಲ ಸಮರ ನಡೆಯುತ್ತಲೇ ಇದೆ.
ಕೆಲವೇ ದಿನಗಳಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಶಾಸಕರೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಅಧಿಕಾರ ಹಂಚಿಕೆ ವಿಷಯದಲ್ಲಿ ಎಲ್ಲವೂ ಅಯೋಮಯವಾಗಿದೆ.
ಸಿಎಂ-ಡಿಸಿಎಂ ನಡುವೆ ಮುಂದುವರೆದ ಶೀತಲ ಸಮರ: ಈ ಭಾರಿಯಾದರೂ ಫಲ ನೀಡುವುದು ಶಿವಕುಮಾರ್ ದೆಹಲಿ ಯಾತ್ರೆ?

